Wednesday, December 22, 2010

ಅಲೆಗಳ ನೆಪದಲಿ...
ಬರಲೆ ನಾನು ನಿನ್ನ ಕೂಡಿ
ಹೆಜ್ಜೆಯಿರದ ಹಾದಿಗೆ..
ಕಳ್ಳ ಸೂರ್ಯ ಕೆಂಗಡಲನು
ಕೂಡುವಾಗಿನೂರಿಗೆ..

ಮೊರೆವ ನೀರು ನಿನ್ನ ಮಾತ-
-ನಷ್ಟೆ ಬಸಿದು ಕೊಡುತಿದೆ
ಮುದ್ದೆ ಹೊಯಿಗೆ ಒದ್ದೆ ಕೈಗೆ
ಬರೆಯುವಂತೆ ಕೆಣಕಿದೆ..

ನೂರು ಮಾತು ನುಡಿಯಲುಂಟು
ಅದರಲೊಂದು ಹೇಳಲೇ
ದಿಗಿಲ ಮುಗಿಲ ಕಡಲ ಮಡಿಲ
ಸೊಬಗಲೆಗಳ ನೆವದಲೆ..

ಬೆರಳ ತುದಿಗೆ ಬೆರಳು ತಾಕಿ
ನೆರಳ ಬದಿಗೆ ನೆರಳಿರೆ
ಕಡಲ ಮರಳು ಒಡಲ ಮರುಳು
ಹದವ ಪಡೆವುದಾಗಲೇ..

ನಿನ್ನ ಪಡೆದು ನನ್ನೆ ಕಳೆವ
ಭಾವಕೇನು ಹೇಳಲಿ
ಹೆಜ್ಜೆ ಅಳಿವ ಹಾದಿಯಲ್ಲಿ
ಹೆಸರ ಹಂಗೂ ಕಳೆಯಲಿ..

Saturday, December 18, 2010

'ಚಕ್ರಬಂಧ'ದಲ್ಲಿ ಒಂದು ಕೈ, ಒಂದು ಟ್ರೈ ...ಜೋಶಿಯವರ 'ಪರಾಗಸ್ಪರ್ಶ' ಓದಿದ ಮೇಲೆ ನನಗೂ ಕೊಂಚ ಸರ್ಕಸ್ಸು ಮಾಡಬೇಕೆನಿಸಿದ್ದರ ಫಲವೇ ಈ ಪುಟ್ಟ ಪ್ರಯತ್ನ. ಪುಟ್ಟದೊಂದು ನಾಕು ಸಾಲಿನ ಕಾವ್ಯ, ಚಿತ್ರದಲ್ಲೂ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುತ್ತ 'ಚಿತ್ರಕಾವ್ಯ'ವೂ ಆಗಿಬಿಡುತ್ತದೆ.ಅಂತಹ 'ಚಿತ್ರಕಾವ್ಯ' ಗಳ ಸಾಲಲ್ಲಿ ಚಕ್ರಬಂಧವೂ ಒಂದು. ಜೋಶಿಯವರೇ ಹೇಳುವಂತೆ 'ಇದನ್ನು ಚಕ್ರಬಂಧದ ರೀತಿಯಲ್ಲಿ ಓದಬಹುದು.ಮೊದಲ ಮೂರು ಸಾಲುಗಳು ಚಕ್ರದ ಆರು ಅರ(spoke)ಗಳಾಗುತ್ತವೆ. ಕೊನೆಯ ಸಾಲು ಚಕ್ರದ ಪರಿಧಿಯಲ್ಲಿ ಪ್ರದಕ್ಷಿಣಾಕಾರ ಸಾಗುತ್ತದೆ'.
ಸಾಲುಗಳು ಇಲ್ಲಿವೆ, ಚಿತ್ರ ಕೆಳಗಿದೆ:

ಸಾಮವಿದುವೇ ಶಕ್ರನುಡಿ ಮಧುಭಾಮಿನೀ ಚಿತ್ತಕಮಗ
ಕಾವ್ಯನಾಗರಿ ಸಂಬಂಧಸುಮಗಂಧದಂಕಿತದೂಂಕು ಮೋದ
ಬಾಳಿಯದರಲಿ ಧರಣಿಮಣಿ ನುಡಿಚಂಚಲರುರ್ಕನು
ನುಸಿದು ಸಾವಿರ ಕಾಲಕು ಬಾಳಲಿಂಗನ್ನಡದ ಹಾಲ್ಜೇನು..

ಸರಳಗನ್ನಡದ ಕನ್ನಡಿಯಲ್ಲಿ ನೋಡಿದರೆ:

ಮಧು ಭಾಮಿನಿಯಂತಿರುವ, ಚಿತ್ತಕ್ಕೆ ಸಂಭ್ರಮ (ಅಮಗ) ಕೊಡುವ, ದೇವರ ನುಡಿಯಾದ(ಶಕ್ರ ನುಡಿ) ಇದುವೆ (ಕನ್ನಡವೇ) ನಮಗೆ ಸಾಮ (ಗುನುಗುನಿಸಲಾಗುವ ಸರಳ ವೇದ). ಸಂಸ್ಕೃತವು ದೇವನಾಗರಿ (ದೇವರ ನಗರಕ್ಕೆ ಸೀಮಿತವಾದದ್ದು) ಆದರೆ ನಮ್ಮದು ಅತ್ಯುಚ್ಛ ಕವಿ ಪರಂಪರೆ ಹೊಂದಿರುವ , ಏಳು ಜ್ಞಾನಪೀಠಗಳನ್ನೂ ಪಡೆದ ಕಾವ್ಯನಾಗರಿ. ಸಂಬಂಧಗಳೆಂಬ ಹೂವಿನ ಗಂಧ ಮೆತ್ತಿಕೊಂಡಿರುವ ಈ ಕನ್ನಡದ ಧ್ಯಾನವು(ಊಂಕು) ನಮಗೆ ಮೋದ. ನುಡಿ-ಚಂಚಲರ (ಕನ್ನಡಿಗರಾಗಿದ್ದೂ ಕನ್ನಡ ಮಾತಾಡದೆ , ಬಾರದ ಭಾಷೆಯ ಬಡಬಡಾಯಿಸುವವರ ) ಜಂಭವನ್ನು (ಉರ್ಕನ್ನು) ತೂತುಮಾಡಿ (ನುಸಿದು ) , ಭೂಮಿಗೆ ಮಣಿಯಂತಿರುವ(ಧರಣಿ ಮಣಿ) ಇಂಪು ಕನ್ನಡದ(ಇಂಗನ್ನಡದ) ಹಾಲ್ಜೇನು ಸಾವಿರ ಕಾಲಕ್ಕೂ ಬಾಳಲಿ.

ಇಷ್ಟೆಲ್ಲಾ ಹೆಣಗಾಡಿದ ಮೇಲೆ ನನ್ನದೂ ಒಂದು 'copyright signature ' ಇಲ್ಲದಿದ್ದರೆ ಏನು ಚೆನ್ನ? ಅಲ್ವಾ, ಕೆಂಪು ಶಾಯಿಯಲ್ಲೇ ಹಾಕುತ್ತೇನೆ ಬಿಡಿ :-)
ಒಪ್ಪಿಸಿಕೊಳ್ಳಿ..ವಿನಾಯಕ ಕುರುವೇರಿ ರಚಿತ ಚಕ್ರಬಂಧಮಿದಂ!

Sunday, November 28, 2010

ಬದನೆ ಬೋಧನೆಯೆಂಬೊ ರಿವೈಂಡ್ ರಾಗ...

ಈವತ್ತಿನ ದಿನ ಅದ್ಹೇಗೆಲ್ಲ ಕಳೆಯಿತು ಅಂತ ಯೋಚಿಸುತ್ತ ಇನ್ನೇನು ಹಾಸಿಗೆಯಲ್ಲಿ ಒಂದೊಳ್ಳೆ ಸುಖನಿದ್ದೆ ಸವಿಯಬೇಕು ಅಂತ ಆಲೋಚಿದ್ದೇ ಹಾಸಿಗೆಯಿಂದ ಎದ್ದು ಕೂತೆ. ಮಲಗೋ ಮೊದಲು ಡೈರಿ ಬರೆಯುವುದು ನನ್ನ ವಾಡಿಕೆ. ಹಾಗೆ ಅದನ್ನು ಬರೆಯಲು ಕುಳಿತಿದ್ದೂ ಆಯಿತು, ಇವತ್ತಿನ ದಿನದ ಸ್ವಾರಸ್ಯಗಳನ್ನು ಬರೆಯಲು ಮನಸ್ಸೂ ಸ್ವಲ್ಪ ಹೆಚ್ಚೇ ಉತ್ಸುಕವಾಗಿತ್ತು. ಡೈರಿ ಬರೆಯೋಕೂ ಮೊದಲು ಊಟ ಮುಗಿಸಿದ್ದೆನಾ ಅಂತ ಖಾತ್ರಿಯಾಗಬೇಕಿತ್ತು. ಹೌದು ಊಟ ಮಾಡಿದ್ದೇನೆ. ಬದನೆ ಗೊಜ್ಜು , ತಿಳಿಸಾರು ಮಾಡಿ ಹೆಂಡತಿಯೇ ಕಯ್ಯಾರ ಬಡಿಸಿದ್ದಳು.

ಅರೆ! ಅಡಿಗೆಯಾಗದೆ ಅದು ಹೇಗೆ ಬಡಿಸಿದಳು ? ಅಷ್ಟಕ್ಕೂ ನಾವಿಬ್ಬರೂ ಆಫೀಸಿಂದ ಬಂದ ಮೇಲೆ ಜೊತೆಗೇ ಸೇರಿ ಅಡಿಗೆ ಮಾಡುವುದು ರೂಢಿ. ನಾನು ತರಕಾರಿಗಳನ್ನು ಹೆಚ್ಚುವಾಗ ಅವಳು ಸಂಬಾರಗಳನ್ನು ಕಡೆಯುತ್ತಿದ್ದಳು. ಇವತ್ತು ಬದನೇಕಾಯಿ ಹೆಚ್ಚುವಾಗ ಊರ ನೆನಪು ಬಾರದೆ ಇರಲಿಲ್ಲ. ಇನ್ನು ಬದನೇಕಾಯಿ ಅದೆಷ್ಟು ಬೆಲೆಕೊಟ್ಟು ತಂದಿದ್ದು ಅಂತೀರ.ಮೂರುವರೆ ಡಾಲರಿಗೆ ಎರಡೇ ಎರಡು ಚಿಕ್ಕ ಬದನೇಕಾಯಿ. ಸಂಜೆ ಮನೆಯೆದುರು ಕಾರನ್ನು ಪಾರ್ಕ್ ಮಾಡಿದವರೇ ನೇರ ಮನೆಗೆ ಓಡಿ ಬಂದು ಬದನೆ ರೆಸಿಪಿಯನ್ನು ಗೂಗಲಿಸಿದ್ದೆವು . ನಮ್ಮೂರಲ್ಲಿರೋ ಒಂದೇ ಒಂದು ಇಂಡಿಯನ್ ಸ್ಟೋರ್ ನಿಂದ ಹರ ಸಾಹಸ ಪಟ್ಟು ತಂದಿದ್ದು ಆ ಬದನೆಕಾಯಿಯನ್ನು. ಸ್ಟೋರಿನಲ್ಲಿ ಸಂಜೆ ಬದನೇಕಾಯಿ ಕಂಡಾಗ ಎಷ್ಟು ಖುಷಿಯಾಗಿತ್ತು ಗೊತ್ತಾ. ಇಂಡಿಯನ್ ಸ್ಟೋರ್ ಸಂಜೆ ಆರಕ್ಕೆಲ್ಲ ಮುಚ್ಚಿಯೇ ಬಿಡುತ್ತದೆ. ನಾವು ಸಾಫ್ಟುವೇರುಗಳಿಗೆ ಆರಕ್ಕೆ ಹೊರಡೋದು ಅಂದ್ರೆ ಅರ್ಧ ದಿನ ರಜೆ ಹಾಕಿ ಹೊರಟಷ್ಟು ಬೇಗ! ಹಾಗಂತ ಬದನೇಕಾಯಿ ಗೊಜ್ಜು ತಿನ್ನಬೇಕೂಂತ ಹುಟ್ಟಿದ ಆಸೆಯನ್ನು ಹಾಗೆಯೇ ಅದುಮಿಟ್ಟುಕೊಳ್ಳೋಕಾಗುತ್ತ? ಫ್ರೀವೇನಲ್ಲಿ ನಾನು ಕಾರು ಓಡಿಸಿದ್ದನ್ನು ಯಾವನಾದ್ರು ಪೋಲಿಸು ಅಪ್ಪಿ ತಪ್ಪಿ ನೋಡಿದ್ದರೆ ಸ್ಪೀಡಿಂಗ್ ಟಿಕೇಟುಗಳನ್ನು ಹರಿದು ಹರಿದು ಕೊಡುತ್ತಿದ್ದ! ಆಫೀಸಿನಲ್ಲಿ ಕಾರನ್ನು ಪಾರ್ಕಿಂಗ್ ನಿಂದ ರೆವರ್ಸು ತೆಗೆದಾಗ ಆರಕ್ಕೆ ಹತ್ತೇ ನಿಮಿಷ. ಬದನೇಕಾಯಿ ಗೊಜ್ಜು ತಿನ್ನೋ ಕನಸು ಹಾಗೇ ಉಳಿಯುತ್ತೆ ಅಂತ ಗೇರು ಬದಲಿಸಿದಾಗ ಅನಿಸಿದ್ದು ನಿಜ. ಹಾಗಾಗಲು ಕಾರಣ ನನ್ನ ಈ ಮಹಾರಾಯ್ತಿಯೇ ಅಂತ ಬೇರೆ ಹೇಳಬೇಕಿಲ್ಲ ತಾನೇ. ಕೆಲಸ ಮುಗಿಸಿ ಬರೋದಕ್ಕೂ ಮುಂಚೆ ಹದಿನೈದು ನಿಮಿಷ ರಿಸೆಪ್ಶನ್ ನಲ್ಲಿ ನನ್ನನ್ನು ಕಾಯಿಸಿದ್ದಳು. ಐದಾಗುತ್ತಿದ್ದಂತೆಯೇ ಮೆಸೆಂಜರ್ನಲ್ಲಿ ಇವಳಿಗೆ ಪಿಂಗ್ ಮಾಡಿದ್ದೆ ."ಇವತ್ತು ಐದೂವರೆಗೆಲ್ಲ ಹೊರಡಲೇಬೇಕು . ಅಟ್ ಎನಿ ಕಾಸ್ಟ್, ಬದನೆ ಕಾಯಿ ಗೊಜ್ಜು ತಿನ್ನಲೇಬೇಕು. ಅದೇನು ಮೀಟಿಂಗ್ ಇದ್ದರೂ ಅಷ್ಟರೊಳಗೆ ಮುಗಿಸು" . ಹಾಗೆ ಪಿಂಗ್ ಮಾಡೋದಿಕ್ಕೂ ಮೊದಲು ಅವಳ ಸ್ಟೇಟಸ್ ' ಡು ನಾಟ್ ಡಿಸ್ಟರ್ಬ್ ' ನಲ್ಲಿದ್ದರಿಂದ ಈ ಪುಣ್ಯಾತಿಗಿತ್ತಿ ರಿಪ್ಲೈ ಮಾಡುವುದಿಲ್ಲ ಅಂತಲೂ ಗೊತ್ತಿತ್ತು.


ಮಧ್ಯಾಹ್ನ ಮೂರಕ್ಕೂ ಹೆಚ್ಚು ಗಂಟೆ ಬದನೆಕಾಯಿಯ ಸಂದರ್ಭೋಚಿತ ಧ್ಯಾನದಿಂದಲೇ ನನ್ನಲ್ಲಿ ಈ ಗೊಜ್ಜಿನ ಹುಚ್ಚು ಶುರುಹಚ್ಚಿದ್ದು. ಬಹುಷಃ ಆ ಮೂರು ಗಂಟೆಗಳಲ್ಲಿ ನಾನು ಮಾಡಿದ ಕೋಡಿಂಗ್ ಅನ್ನು ಯಾರಾದರು ಟೆಕ್ ಮ್ಯಾನೇಜರ್ ರಿವ್ಯೂ ಮಾಡಿದರೆ ಅವನಿಗೂ ಹೊಡೆಯಬಹುದು ಬದನೆ ಗೊಜ್ಜಿನ ವಾಸನೆ! ಮಧ್ಯಾಹ್ನ ಮನೆಯಿಂದ ಊಟ ಮಾಡಿ ಆಫೇಸಿಗೆ ಡ್ರೈವ್ ಮಾಡುತ್ತಾ ಬರುವಾಗಲೇ ಮನಸಿನ ಮೂಲೆಯಲ್ಲಿ ಒಡೆದಿದ್ದ ಬದನೆಯ ಮೊಳಕೆ ಗಿಡವಾಗಲು ಶುರುವಾದದ್ದು . ಹಾಗಾದ್ರೆ ಬೀಜ ಬಿತ್ತಿದ್ದು ಯಾರು ಅಂತಲೂ ಹೇಳಬೇಕು ತಾನೇ. ಮದ್ಯಾಹ್ನ ಊಟದ ಸಮಯದಲ್ಲಿ ಅಮ್ಮ ನ ಬಳಿ ವೀಡಿಯೊ ಚಾಟ್ ಮಾಡುವುದು ನಮ್ಮ ನಿತ್ಯಕರ್ಮಗಳಲ್ಲಿ ಒಂದು. ಭಾರತದಲ್ಲಿ ಅದು ರಾತ್ರಿ ಸಮಯವಾದ್ದರಿಂದ ಆ ದಿನದ ಪೂರ್ತಿ ಸ್ಟೇಟಸ್ ರಿಪೋರ್ಟ್ " ನ್ಯೂಸ್ ಇನ್ ಎ ನಟ್ ಶೆಲ್ " ಆಗಿ ಅಮ್ಮ ಟೆಲಿಕಾಸ್ಟ್ ಮಾಡುತ್ತಾರೆ. ನಾವಿಬ್ಬರು ತಟ್ಟೆಯನ್ನು ನಮ್ಮ ಡೆಲ್ ಲ್ಯಾಪಿ ಯ ಮುಂದಿಟ್ಟು ಊಟ ಮಾಡುತ್ತಾ ಕೇಳುತ್ತೇವೆ. ಕೆಲವೊಮ್ಮೆ ಮಾತು ಮುಗಿಸೋದಿಕ್ಕೆ ಮುಂಚೆ ಅಡ್ಡಬಾಯಿ ಹಾಕುವ ಬರ್ಖಾ ದತ್ತ್ ಳಂತೆ ಅಸಂಬದ್ಧವಾಗಿ ಏನೇನೋ ಕೇಳುವುದೂ ಇದೆ. ಹಾಗೆ ಊಟ ಮಾಡುತ್ತಿದ್ದಾಗ ಅಮ್ಮನ ಬಳಿ ಹೇಳುತ್ತಾ ಇದ್ವಿ - 'ಇಲ್ಲಿ ತರಕಾರಿಗಳಲ್ಲಿ ನಮ್ಮೂರಷ್ಟು ವರೈಟಿ ಇಲ್ಲ, ಇರೋ ತರಕಾರಿಗಳಲ್ಲಿ ಅರ್ಧದಷ್ಟು ನಮಗೆ ಮಾಡೋಕೆ ಬರೋಲ್ಲ.. ಅದೇ ಆಲೂ, ಕ್ಯಾಬೇಜು, ಫ್ರೋಜನ್ನು ತರಕಾರಿಗಳನ್ನು ತಿಂದು ಸಾಕಾಗಿದೆ" ಎಂದು. ಅಷ್ಟು ಹೇಳಿದ್ದೇ ತಡ, ಅಮ್ಮ ತಮ್ಮ ಬದನೆಯ ಪುರಾಣ ಶುರು ಹಚ್ಚಿದರು. ವಿಟ್ಲದ ಬಳಿ ಯಾವುದೊ ಸತ್ಯನಾರಾಯಣ ಪೂಜೆಗೆ ಹೋಗಿದ್ದ ಅಮ್ಮ ಅಲ್ಲಿ ತಿಂದಿದ್ದ ಬದನೆ ಗೊಜ್ಜನ್ನು ಹೊಗಳಿದ್ದೇ ಹೊಗಳಿದ್ದು. ಅವಾಗಲೇ ನಮಗಿಬ್ಬರಿಗೂ ಹೊಳೆದದ್ದು , ನಾವು ಬದನೆ ತಿಂದು ವರುಷದ ಮೇಲಾಯಿತೆಂದು! ಅಮ್ಮ ಅವರ ಬದನೆ ಕಥೆಯನ್ನು ಹೇಳುತ್ತಿದ್ದಂತೆಯೇ ನಾನು ಗೂಗಲ್ಲಿನಲ್ಲಿ ನಮ್ಮ ಇಂಡಿಯನ್ ಸ್ಟೋರ್ ನ ನಂಬರು ಹುಡುಕಲು ಶುರು ಹಚ್ಚಿ , ಅದನ್ನು ಪಡೆದು , ಫೋನು ಮಾಡಿ ಬದನೆ ಇದೆ ಅಂತ ಖಾತ್ರಿಯೂ ಪಡಿಸಿಕೊಂಡಿದ್ದೆ. ಅದಕ್ಕೂ ಮೊದಲು ಸ್ಟೋರ್ ನ ಸಮಯ ನೋಡುತ್ತಾ ವಿಂಟರ್ ಟೈಮಿಂಗ್ಸ್ ಸಂಜೆ ಮೂರರಿಂದ ಆರು ಅಂತ ನೋಡಿ ಎದೆ ಧಸಕ್ಕೆಂದಿತ್ತು.

ಅಮ್ಮ ಬದನೆ ಸ್ಟೋರಿ ಹೇಳುತ್ತಲೇ ಇದ್ದರು. ಪೂಜೆಯ ಊಟದಲ್ಲಿ ಎಲ್ಲರೂ ಎರಡೆರಡು ಬಾರಿ ಗೊಜ್ಜು ಸುರಿಸಿ ಉಂಡವರೇ ಅಂತೆ. ಇದಕ್ಕೂ ಮೊದಲು ಅಡುಗೆಗೆ ತರಕಾರಿ ಹೆಚ್ಚುವುದು ನಮ್ಮಲ್ಲೆಲ್ಲ ಪುಟ್ಟ ಕೌಟುಂಬಿಕ ಗ್ಯಾದರಿಂಗ್. ಅಲ್ಲಿ ಪೋಲಿ ಜೋಕುಗಳಿಂದ ಹಿಡಿದು ಎಂತೆಂಥದೋ ಕೆಲಸಕ್ಕೆ ಬಾರದ ವಿಷಯಗಳೂ ಚರ್ಚೆಗೆ ಬರುತ್ತವೆ. ಒಂದು ಮಟ್ಟಿಗೆ ನಮ್ಮ ಸಾಫ್ಟ್ ವೇರಿನ ಜನರು ಮಾಡುವ ಶಾರ್ಟ್ ಟರ್ಮ್ ಪ್ರಾಜಕ್ಟ್ ಥರಾನೇ ಇದೂ. ಇಲ್ಲೂ ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ಇರುತ್ತಾನೆ . 'ಬಾಚ' ಅಂತ ನಾವವನನ್ನು ಗೌರವದಿಂದ ಕರೆಯುತ್ತೇವೆ. ತನ್ನ ಗುಂಪು ಹೆಚ್ಚಿದ ತರಕಾರಿಗಳನ್ನು ಬಾಚಿ ಚಾಚೂ ತಪ್ಪದಂತೆ ಅಡುಗೆ ಭಟ್ಟನೆಂಬ ಕ್ಲೈಂಟಿಗೆ ಡೆಲಿವರಿ ಮಾಡಿ ಹೊಸ ರಿಕ್ವಾಯರ್ಮೆಂಟುಗಳೊಡನೆ ವಾಪಸ್ ಬರುವುದು ಅವನ ಕೆಲಸ. ಹಾಗೆಯೇ ಟೀಮಿನಲ್ಲಿ ಮೆಟ್ಟುಕತ್ತಿ ಹಿಡಿದ ಸೀನಿಯರ್ ಹೆಚ್ಚುಕೋರರೂ, ಈಗಷ್ಟೇ ಚಾಕು ಹಿಡಿಯಲು ಕಲಿತ ಫ್ರೆಶರ್ಗಳೂ ಇರುತ್ತಾರೆ. ಹೀಗಿರುವ ಒಂದು ಗ್ರೂಪ್ ಆಕ್ಟಿವಿಟಿಗೆ 'ಮೇಲಾರಕ್ಕೆ ಕೊರೆವ'ದು ಅಂತ ಹೆಸರು. ಇಂತಿಪ್ಪ ಗ್ಯಾದರಿಂಗ್ ನಲ್ಲಿ ನಮ್ಮಮ್ಮನಿಗೆ ಕೊರೆಯಲು ( ನಮ್ಮೂರಲ್ಲಿ ಹೆಚ್ಚೋದನ್ನು ಕೊರೆಯೋದು ಅಂತಾನೆ ಹೇಳೋದು) ಸಿಕ್ಕಿದ್ದು ಬದನೆಕಾಯಿಯೇ! ಅದನ್ನು ಹೆಚ್ಚುವಾಗಲೇ ಅಮ್ಮನಿಗೆ ಅನ್ನಿಸಿತಂತೆ ಈವತ್ತಿನ ಗೊಜ್ಜು ಸೂಪರೋ ಸೂಪರು ಆಗುತ್ತೆಂದು. ತರಕಾರಿ ಹೆಚ್ಚಲು ಹರಿತವಾದ ಚೂರಿ ಸಿಕ್ಕುವುದು ಮತ್ತು ಹದವಾಗಿ ಬೆಳೆದ ತರಕಾರಿಯೂ ಸಿಕ್ಕುವುದು ಸೌಭಾಗ್ಯವೇ ತಾನೇ!. ಈ ದಿನ ಆ ಸೌಭಾಗ್ಯ ಸಿಕ್ಕಿದ್ದು ಅಮ್ಮನಿಗೆ. ನಮ್ಮಮ್ಮ ಅಷ್ಟಕ್ಕೇ ಸುಮ್ಮನೆ ಬಿಡಲಿಲ್ಲ.. ಆ ಬದನೆ ಕಾಯಿ ಪೇಟೆ ಅಂಗಡಿಯಿಂದ ತಂದಿದ್ದಲ್ಲವೆಂದು ಅಮ್ಮನಿಗೆ ಸುತರಾಂ ಖಾತ್ರಿಯಾಗಿತ್ತಂತೆ. ಹಾಗಾಗಿ ಅದರ ಜನ್ಮ ಜಾಲಾಡಲು ಹೊರಟಾಗ ಅದು ಆಲ್ಲಿಯೇ ನೆರೆಕರೆಯಲ್ಲಿರುವ ಭಟ್ಟರ ಮನೆಯದ್ದೆಂದು ಗೊತ್ತಾಗಿ ಅವರ ಬಳಿ ಹೋಗಿ ಒಂದಷ್ಟು ಬದನೆಯನ್ನು ಬುಕ್ ಮಾಡಿಯೂ ಬಂದಿದ್ದರಂತೆ! ಆ ಭಟ್ಟರಿಗೆ ನಮ್ಮಮ್ಮ ಬದನೆಕಾಯಿಯನ್ನು ಹೊಗಳಿದ್ದು ಕಂಡು ಖುಷಿಯೋ ಖುಷಿ. ಮಟ್ಟಿಯಲ್ಲಿರುವ ತಮ್ಮ ಭಾಮೈದನ ತೋಟದಿಂದ ತಂದ ಬದನೆ ಬೀಜ ಅದೆಂದೂ ಅದನ್ನು ಬೆಳೆಸಲು ಸ್ವತಹ ತಾನೇ ಎರೆಹುಳದ ಗೊಬ್ಬರ ತಯಾರಿಸುತ್ತೇನೆಂದೂ, ಅವಾಗಾವಾಗ ಮೀನಿನ ಗೊಬ್ಬರವನ್ನೂ ಹಾಕಿಸುತ್ತೇನೆಂದೂ ಸುಮಾರಾಗಿ ಅವರೂ ಸ್ಟೋರಿ ಬಿಟ್ಟಿದ್ದರು. ಅದಷ್ಟೇ ಅಲ್ಲ, ಪ್ರಾಯದಲ್ಲಿ ಹಿರಿಯರೂ ಆಗಿದ್ದ ಅವರಿಂದ ಬದನೆಯ ಪುಟ್ಟ ಸೆಮಿನಾರೆ ಆಯಿತಂತೆ. ವಾದಿರಾಜಾಚಾರ್ಯರು ಉಡುಪಿಯ ಶ್ರೀಕೃಷ್ಣ ನಿಗೆ ಮಟ್ಟಿಗುಳ್ಳದ (ಇದು ಉಡುಪಿಯ ಸ್ಪೆಷಲ್ ಕಸ್ಟಮಾಯಿಸ್ಡ್ ಬದನೆ) ನೈವೇದ್ಯ ಮಾಡಿಸಿ ನಂಜು ಬಿಡಿಸಿದ ಕತೆಯಿಂದ ಹಿಡಿದು ಈಗಿನ ಮಟ್ಟಿಯ ರೈತರು ಬಿ.ಟಿ.ಬದನೆಯ ವಿರುದ್ದ ಮಾಡುತ್ತಿರುವ ಹೋರಾಟದವರೆಗೂ ಬದನೆಯ ಸಮಗ್ರ ಮಾಹಿತಿಯನ್ನೊಳಗೊಂಡ ಸೇಮಿನಾರಂತೆ ಅದು. ಅಮ್ಮ ಎಲ್ಲವನ್ನೂ ಚಾಚೂ ತಪ್ಪದಂತೆ ವಿವರಿಸಿ ಚಾಟ್ ಮುಗಿಸಿದ್ದರು. ಇಂತಿತ್ತು ನಮ್ಮ ಇಂದಿನ ಬದನೇಕಾಯಿ ಪುರಾಣ.

ಅಮ್ಮ ನ ಫೋನು ಬರುವುದಕ್ಕೂ ಮೊದಲು ಬದನೆಯ ಸುಳಿವೂ ಇಲ್ಲದ ನಮ್ಮ ಸಾಫ್ಟ್ವೇರು ಪ್ರಾಜೆಕ್ಟುಗಳ ಲೋಕದಲ್ಲಿ ಅದು ಹೇಗೆ ಈ ಬದನೆ ಬಂದು ಅರ್ಧ ದಿನವನ್ನು ಆಕ್ರಮಿಸಿತು ಅಂತ ದಿಗ್ಭ್ರಮೆಗೊಂಡು ನನ್ನವಳ ಬಳಿ ರಾತ್ರಿ ಮಲಗುತ್ತ ಹೇಳಿದೆ. ಊರಿನ ಪ್ರತಿ ನೆನಪೂ ಹಾಗೇ ಅಲ್ಲವಾ ಅಂತ ಅವಳು ಹೇಳಿದ್ದಳು. ನೂರಕ್ಕೆ ನೂರು ನಿಜ ಅಂತ ಹೇಳಿತ್ತು ನನ್ನ ಉದರದಿಂದ ಬಂದ ದೊಡ್ಡದೊಂದು ತೇಗು...

Tuesday, June 8, 2010

ಒಲವಿನೋಲೆ ೩ : ನಿನ್ನ ಕನಸಿನೂರ ಬಸ್ಸಿಗೆ ಟಿಕೇಟು ಪಡೆಯುತ್ತ...


ಆಕಸ್ಮಿಕಗಳ ಅವಿರತಗಣಿಯೇ,


ಒಮ್ಮೆಮ್ಮೆ ದಿಗಿಲಾಗುತ್ತದೆ. ನಾ ಕೂಡಿಟ್ಟ ಅಷ್ಟೂ ಕನಸುಗಳಲ್ಲೂ ನುಸುಳಿಬಿಟ್ಟ ನೀನೆಂಬ ನನ್ನತನಕ್ಕೆ ಅದೇನಂತ ಹೇಳಲಿ..ಬಿಲ್ ಕುಲ್ ನನ್ನವೇ ಅಂತ ವರ್ಷಾನುಗಟ್ಟಲೆಯಿಂದ ಸಾವಧಾನವಾಗಿ ಗುಟ್ಟಾಗಿ ಬಚ್ಚಿಟ್ಟ ಕನಸುಗಳಲ್ಲೆಲ್ಲ ಈಗ ನಿನ್ನ ಆಗಮನದ ವಸಂತೋತ್ಸವ. ಒಂದೊಂದನ್ನೇ ನಿನ್ನೊಡನೆ ಹಂಚಿಕೊಳ್ಳುತ್ತ ಕಳೆದ ಕ್ಷಣಗಳನ್ನು ಅದೇನಾದರೂ ಪೋಣಿಸಲು ಬರುತ್ತಿದ್ದರೆ ಅದನ್ನೇ ಮಾಲೆಯಾಗಿಸಿ ನಿನಗೆ ಮೊದಲ ಉಡುಗೊರೆಯಾಗಿ ಕೊಡುತ್ತಿದ್ದೆ..


ಕೊಡಲು ಬಲ್ಲೆ ನಿನಗದೊಮ್ಮೆ ನನ್ನ ನಾನೇ ಉಡುಗೊರೆ

ನೀನು ಕೊಟ್ಟ ನೆನಪನದಕೆ ತೂಗಬಹುದೆ ಆದರೆ..


ಆ ದಿನ ಇನ್ನೂ ಹಸಿಹಸಿಯಾಗಿ ನೆನಪಿನಲ್ಲಿದೆ..ನಾನವತ್ತು ಹುಡುಗಿ ನೋಡುವ ಶಾಸ್ತ್ರಕ್ಕೆ ಅಂತ ನಿಮ್ಮ ಮನೆಗೆ ಮೊದಲ ಬಾರಿ ಬಂದಾಗ ಕಾರು ಪಾರ್ಕು ಮಾಡಲು ಮೂರು ಬಾರಿ ಹಿಂದೆ ಮುಂದೆ ರಿವರ್ಸು ಫಸ್ಟು ಅಂತ ಒದ್ದಾಡುತ್ತಿದ್ದರೆ ನೀನದನ್ನು ನಿಮ್ಮನೆಯ ಕಿಟಕಿಯಿಂದ ಕದ್ದು ನೋಡಿ ನಕ್ಕಿದ್ದೆ. ಬೆಪ್ಪನಂತೆ ಅನ್ನಿಸಿತ್ತು ನನಗೆ.. 'ಛೆ,ಎಂಥ ಫ್ಲಾಪ್ ಷೋ .. ಕಿಟಕಿಯಲ್ಲಿ ನೋಡಿದವಳು ನನ್ನ ಹುಡುಗಿ ಅಲ್ಲದಿದ್ದರೆ ಸಾಕು' ಅಂತ ಪ್ರಾರ್ಥಿಸುತ್ತ ಒಳಕ್ಕೆ ಬಂದಿದ್ದೆ. ಅದ್ಯಾವುದೋ ಗಳಿಗೆಯಲ್ಲಿ ನಿನ್ನನ್ನು ಬರಹೇಳಿದರಲ್ಲ ,ನೀನು ಹೊರ ಬಂದಾಗಿದ್ದ ಆ ಮುಗುಳ್ನಗೆ ನನ್ನನೆಷ್ಟು ಕೆಣಕಿದ್ದಿರಬೇಡ..ಕಿಟಕಿಯಲ್ಲಿ ನೋಡಿದ್ದು ಇನ್ಯಾರೋ ಅನ್ನುವವರಂತೆ ನಾನೂ ಫಸ್ಟ್ ಟೈಂ ನೋಡೋನಂತೆ ನಟಿಸಿದ್ದೆ.


ಆದ್ರೆ, ನಮ್ಮಿಬ್ಬರನ್ನೇ ಮಾತಿಗೆ ಬಿಟ್ಟಾಗ ನೀನು ಅದೇ ವಿಚಾರ ಇಟ್ಟುಕೊಂಡು ಶುರುಹಚ್ಚಬೇಕ? ನೀನು ಆಡಿದ್ದ ಮೊದಲ ಮಾತುಗಳು ಇನ್ನೂ ನೆನಪಿವೆ.. "ಗೇಟಿನ ಬಳಿ ಚೂರು ದಿಣ್ಣೆಯಿದೆ. ಮುಂದಿನಸಲ ನೋಡ್ಕೊಂಡು ಬನ್ನಿ".. ಹಾಗೆ ಹೇಳುತ್ತಿದ್ದವಳ ಮುಖ ನೆಲಕ್ಕೆ ನೇರ.. ಆದ್ರೆ ಕಣ್ಣುಗಳು ಕದ್ದು ನನ್ನುತ್ತರಕ್ಕೆ ಇಣುಕುವಂತಿದ್ದವು.. "ಮುಂದಿನ ಸಲ"... ಅಂದ್ರೆ ?.. ನನಗೆ ಗೊತ್ತು, ಅದನ್ನು ನಾನೇ ಅರ್ಥ ಮಾಡಿಕೋಬೇಕು ಅಂತ ನೀನು ಎಕ್ಸ್ಪೆಕ್ಟ್ ಮಾಡಿದ್ದೆ.. ಇನ್ನೇನಿದ್ರೂ ಒಪ್ಪಿಗೆ ಕೊಡುವ ಬಿಡುವ ಸರದಿ ನನ್ನದೇ.."ಮುಂದಿನ ಸಲ ಬರುವ ಮೊದಲು ನೀವದನ್ನು ಸರಿ ಮಾಡಿಸುತ್ತೀರಲ್ವ?" ನೀನು ಫಾಸ್ಟಾದರೆ ನಾನು ಡಬಲ್ ಫಾಸ್ಟು..


ನಿನ್ನ ಮಾತನೊಪ್ಪಿಕೊಂಡೆ ನನ್ನ ನಾನೆ ಮರೆತು

ಬೆರೆತು ಬಾಳುವಾಸೆ ಅಲ್ಲೇ ಚಿಗುರಿಕೊಂತು ಮೊಳೆತು..


ಆ ದಿವಸ ನಿನ್ನ ಮೊಬೈಲು ನಂಬರ್ರು ಚೀಟಿಯಲ್ಲಿ ಬರಕೊಟ್ಟಿದ್ದು ನೆನಪು..ವಾಪಸು ನಾ ಮನೆ ತಲುಪುವ ಮೊದಲೇ ಕಿಸೆಯೊಳಗೆ ಕಲರವ. "ತಲುಪಿದ್ರಾ?" ... unknown ನಂಬರ್ ನ ಮೆಸೇಜು. ನಿನ್ನದೇ..ಸಂಶಯವೇ ಇಲ್ಲ.. ಆದ್ರೆ ಏನಂತ ಹೆಸರು ಸ್ಟೋರ್ ಮಾಡಲಿ? ರಿಪ್ಲೈ ಅಂತೂ ಆಗಲೇ ಮಾಡಿದ್ದೆ , ಆದ್ರೆ ನಿನ್ನ ಹೆಸರನ್ನು ಸ್ಟೋರ್ ಮಾಡಲು ಆ ರಾತ್ರಿ ಎಷ್ಟು ಹೆಣಗಾಡಿದ್ದೆ ಗೊತ್ತ..


ನಮ್ಮ ಬಂಧಕಿನ್ನೂ ನಾನು ಹೆಸರ ಹುಡುಕೆ ಇಲ್ಲ

ಆಗಲೇನೆ ನಿನ್ನ ಹೆಸರ ಗುನುಗು ಕಾಡಿತಲ್ಲ!


ಈ ಒಂದೂವರೆ ತಿಂಗಳಿನಲ್ಲಿ ನಾನು ನೀನು ಈ ಮೊಬೈಲ್ ಎಂಬ ಪುಟ್ಟ ಪೋರನನ್ನ ಅದೆಷ್ಟು ಪೀಡಿಸಿದ್ದೇವಲ್ವ..ಅದೆಲ್ಲವನ್ನೂ ಮರೆತು ಆತ ನಮಗೆಂದೇ ಕಟ್ಟಿಕೊಟ್ಟ ಈ ಪುಟ್ಟ ಕನಸಿನೂರಿಗೆ ಏನನ್ನೋಣ? ಕೊಂಚ ಕೊಂಚವೇ ನಿನ್ನೆಡೆಗೆ ನಾನು ನನ್ನ ಲೋಕವನ್ನು ತೆರೆದಿಡುತ್ತಿದ್ದೆನಲ್ಲ, ಅವಾಗೆಲ್ಲ ನನಗೇ ಗೊತ್ತಿಲ್ಲದಂತೆ ನನ್ನಲ್ಲಾದ ಪುಳಕಕ್ಕೆ ಅಚ್ಚರಿಪಟ್ಟಿದ್ದೆ. ನಿಜ ಹೇಳಲಾ, ನಿನ್ನೊಡನೆ ಬಿಚ್ಚಿಟ್ಟ ನನ್ನವೇ ಆದ ಕನಸುಗಳಿವೆಯಲ್ಲ, ಅವನ್ನೆಲ್ಲ ನಾನು ನನ್ನ ಬೆಸ್ಟು ದೋಸ್ತುಗಳಲ್ಲೂ ಹಂಚಿಕೊಂಡಿರಲಿಲ್ಲ...ಹಂಚಿಕೊಂಡಿದ್ದರೂ ನಿನ್ನಿಂದ ಸಿಕ್ಕಷ್ಟು ಆಪ್ತ ಪ್ರತಿಸ್ಪಂದ ಸಿಗುತ್ತಿತ್ತೋ ನನಗಂತೂ ಸಂಶಯ.. ಕಮಿಟ್ಮೆಂಟ್ ಅನ್ನೋದು ಇಷ್ಟೊಂದು ಸುಂದರ ಅನುಭವವಾ? ಗೊತ್ತಿರಲಿಲ್ಲಪ್ಪ..


ಸ್ವರ್ಗದಲ್ಲಿ ಇಂಥ ದಿನಗಳೆಲ್ಲ ಸಿಗವು ಎಂದು

ನಿನ್ನ ಜೊತೆಗೆ ಕಳೆದ ಗಳಿಗೆ ಲೆಕ್ಕವಿಡುವೆ ಇಂದು


ನೀನು ನಿನ್ನ ಆಶಾಗೋಪುರವನ್ನು ನನಗಾಗಿ ತೆರೆಯುತ್ತ ಒಳಹೊಕ್ಕೆಯಲ್ಲ, ಅದೆಂಥ ಮಧುರಾನುಭೂತಿ ಗೊತ್ತ? ಇಷ್ಟು ಚನ್ನಾಗಿ ಕನಸು ಕಾಣೋದು ಅದೆಲ್ಲಿಂದ ಕಲಿತೆ? ನಿನ್ನೆಲ್ಲ ಪುಟ್ಟ ಪುಟ್ಟ ಬಯಕೆಗಳಲ್ಲು ನನಗೆ ಅಂತ ಒಂದಷ್ಟು ಜಾಗಗಳನ್ನು ಕಾದಿರಿಸಿದ್ದೀಯಲ್ಲ, ನನಗೆ ಚೂರು ಮೈನಡುಗೋದು ಆವಾಗಲೇ. ನಿನ್ನ ಕನಸುಗಳೆಲ್ಲ ನನಗೆ ಜವಾಬ್ದಾರಿಗಳು ಕಣೆ ಹುಡುಗಿ..ಆದ್ರೆ ಈ ಕನಸುಗಳ ಹಾದಿಯಲ್ಲಿ ನಿನ್ನೊಡನೆ ಗುನುಗುತ್ತ ಜೀಕುತ್ತ ಹೆಜ್ಜೆ ಹಾಕುವುದೇ ಒಂದು ಶರತ್ಸಂಭ್ರಮ..ಅದರ ನೆನಕೆಯೇ ಎಷ್ಟು ಖುಷಿ ಕೊಡುತ್ತಿದೆ ನೋಡು..


ನನ್ನ ಬಯಕೆಯೂರು ಹೇಗೆ ಸಿಂಗರಿಸಿದೆ ನೋಡು

ನಿನ್ನ ಒಲವ ತೇರಿನಿಂದ ಧನ್ಯವದರ ಬೀಡು..


ಇಷ್ಟೆಲ್ಲಾ ಬರೀ ಒಂದೂವರೆ ತಿಂಗಳಿನಲ್ಲ? ನನ್ನ ನಾನೇ ಚಿವುಟುತ್ತಿದ್ದೇನೆ. ಬಹುಶಃ ನಿನ್ನನ್ನು ಮತ್ತೊಮ್ಮೆ ಕಂಡ ಮೇಲೆಯೇ ಈ ಭಾವದಲೆಗೆ ತೃಪ್ತಿಯೇನೋ.. ಆ ದಿನಕ್ಕೆ ಎದುರು ನೋಡುತ್ತಿದ್ದೇನೆ..


ನೋಡು, ಮೊಬೈಲು ಪೋರ ಮತ್ತೆ ಗುನುಗುತ್ತ ಕುಣಿಯತೊಡಗಿದ್ದಾನೆ. ನಿನ್ನದೇ ಫೋನು, ಗೊತ್ತಿದೆ.. ಎತ್ತಿದ್ದೇ ಆದರೆ ಎಂದೂ ಕೇಳದಿದ್ದದ್ದನ್ನು ಇಂದು ಕೇಳಿಬಿಡುತ್ತೇನೆ ನೋಡು.. "ಛಿ, ಕಳ್ಳ" ಎಂದು ನಿನ್ನಿಂದ ಮುಕ್ಕಾಲು ಗಂಟೆ ಬೈಸಿಕೊಂಡರೂ ಸರಿಯೇ !..

ಅಂದ ಹಾಗೆ ಈ ಕಾಲ್ ಬರುತ್ತಿರುವುದು unknown ನಂಬರಿನಿಂದ. ನಿನ್ನ ಹೆಸರನ್ನಿನ್ನೂ ಈ ಪೋರನಿಗೆ ನಾನು ಹೇಳಿಲ್ಲ ಅಂತ ಬೇರೆ ಹೇಳಬೇಕಾಗಿಲ್ಲ ತಾನೇ..


ಮುಂದಿನ ಶನಿವಾರ.. ನಿನ್ನ ಕೈಯಲ್ಲೇ ಕೊಡುತ್ತೇನೆ..ಅದೇನಾದರೂ ಬರೆದುಕೋ..ನಿನ್ನ ಹೆಸರ ಪಡೆದ ಧನ್ಯತೆಯಲ್ಲಿ ಆತನೂ ನಿದ್ದೆಗೆ ಜಾರುತ್ತಾನೆ..ಆಮೇಲೆ ಅಲ್ಲಿ ನಾವಿಬ್ಬರೇ..ನಾವು ಸೋಲುತ್ತೀವಾ , ಮಾತು ಸೋಲುತ್ತಾ ನೋಡೇ ಬಿಡೋಣ..


ಇಂತಿ ನಿನ್ನ

ರಾಜ್ಕುಮಾರ.

Saturday, June 5, 2010

ಕಿರುಗತೆ: ತಯಾರಿ

ಆವತ್ತು ಜೂನ್ ೪.
ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ರಾತ್ರಿವರೆಗೂ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು ಬೇಕಾಗುತ್ತೆ ಅಂತ ಒಂದಷ್ಟು ಇ-ಪೇಜ್ ಗಳ ಪ್ರಿಂಟ್ ಔಟೂ ತೆಗೆದುಕೊಂಡ..ರಾತ್ರಿ ಸುಮಾರು ಹೊತ್ತು ವರೆಗೂ ಓದುತ್ತ ಕುಳಿತು ಮಲಗಲು ಹೊರಟಾಗ ತನ್ನ ಕಂಪ್ಯೂಟರ್ ಇನ್ನೂ ಆನ್ ಆಗಿರುವುದು ನೆನಪಾಯಿತು.. ಪರವಾಗಿಲ್ಲ, ನಾಳೆ ಹೇಗಿದ್ದರೂ ಬೇಗ ಏಳಬೇಕಲ್ಲ, ಮತ್ತೆ ರಿಸ್ಟಾರ್ಟ್ ಮಾಡಲು ಬಹಳ ಸಮಯ ಹಿಡಿಯುತ್ತೆ ಅಂತ ಯೋಚಿಸಿ ಅಲ್ಲೇ ನಿದ್ದೆ ಹೋದ..

ಬೆಳಗ್ಗೆ ಎದ್ದಿದ್ದು ಕೊಂಚ ತಡವೇ ಆಯ್ತು.. ಎದ್ದು ಕಿಟಕಿ ತೆರೆದಾಗ ತಣ್ಣನೆ ತಂಗಾಳಿ. ಜಾಸ್ತಿ ಹೊತ್ತು ಕಿಟಕಿ ತೆರೆದಿಟ್ಟರೆ ಎ.ಸಿ. ಯ ತಂಪು ಕೆಟ್ಟು ಹೋದೀತೆಂದು ಮತ್ತೆ ಕಿಟಕಿ ಮುಚ್ಚಿ , ರಾತ್ರಿ ಚಾರ್ಜಿಗಿಟ್ಟಿದ್ದ ಮೊಬೈಲನ್ನು ಎತ್ತಿ ಇನ್ನು ಒಂದು ಗಂಟೆಯಲ್ಲಿ ನೆನಪಿಸುವಂತೆ ಟೈಮರ್ ಇಟ್ಟು ತನ್ನ ನಿತ್ಯ ಕರ್ಮಕ್ಕೆ ತೆರಳಿದ.
ಬಾತ್ರೂಮಿನಲ್ಲಿ ಕಳೆದ ಒಂದು ತಿಂಗಳಿಂದ ಇದ್ದ ನಳ್ಳಿ ಲೀಕೇಜನ್ನು ಗಮನಿಸಿ, ಇವತ್ತೂ ಕೂಡ ಎಂದಿನಂತೆ ನೆಗ್ಲೆಕ್ಟ್ ಮಾಡಿ ಶವರಿನತ್ತ ತೆರಳಿದ..ಗೀಸರ್ ತುಂಬಾನೇ ಹೊತ್ತು ಆನ್ ಇಟ್ಟಿದ್ದರಿಂದಲೋ ಏನೋ ನೀರು ಸಿಕ್ಕಾಪಟ್ಟೆ ಬಿಸಿ ಆಗಿತ್ತು.. ಒಂದೈದು ನಿಮಿಷ ಬಿಸಿ ನೀರೆಲ್ಲ ಕೊಂಚ ತಣ್ಣಗಾಗುವಷ್ಟು ಹೊತ್ತು ಹಾಗೆಯೇ ಹರಿಯಬಿಡಬೇಕಾಯ್ತು.

ಎಲ್ಲ ಮುಗಿಸಿಕೊಂಡವನೇ ನೇರವಾಗಿ ಕಂಪ್ಯೂಟರ್ ನತ್ತ ಬಂದ. ತಾನು ನಿನ್ನೆ ಓಪನ್ ಮಾಡಿಟ್ಟ ಪೇಜ್ ಗಳು ಇನ್ನೂ ಹಾಗೆಯೆ ಇರುವುದನ್ನು ಕಂಡು ತನ್ನ ಸಮಯ ಉಳಿತಾಯವಾದದ್ದಕ್ಕೆ ತೃಪ್ತಿ ಪಟ್ಟುಕೊಂಡ. ಟೋಸ್ಟರ್ ನಲ್ಲಿಟ್ಟಿದ್ದ ಬ್ರೆಡ್ಡು ಟೋಸ್ಟ್ ಆಗಿ ಸೈರನ್ ಹೊಡೆದು ಕೊಂಡಾಗ ಒಂದು ಕ್ಷಣ ಅಲರಾಂ ಆಯಿತೇನೋ ಅಂತ ಗಾಬರಿಪಟ್ಟು ಗಂಟೆ ನೋಡಿ ಇನ್ನೂ ಹದಿನೈದು ನಿಮಿಷ ಇದೆ ಅಂತ ಆಮೇಲೆ ಅರಿತುಕೊಂಡು ಮತ್ತೆ ನೋಟ್ಸ್ ಮಾಡಲು ಮುಂದುವರೆಸಿದ.

ಸರಿ, ಹೊರಡುವ ಸಮಯವೂ ಬಂತು.. ಈವತ್ತು ಆಫೀಸಿಗೆ ಹೋಗುವಾಗ ಡೌನ್ ಟೌನ್ ನಿಂದ ಹೋಗಬಾರದು, ಟ್ರಾಫಿಕ್ ಜಾಸ್ತಿ ಇದ್ದರೆ ಕಷ್ಟ, ೫ ಮೈಲಿ ಜಾಸ್ತಿಯದ್ರು ಸರಿ , ಥರ್ಡ್ ಎಕ್ಸಿಟ್ ಮೂಲಕವೇ ಹೋಗೋದು ಅಂತ ಅನ್ಕೊಂಡಿದ್ದ. ಗಡಿಬಿಡಿಯಲ್ಲಿ ಕಾರು ಹತ್ತಿ ಚಾಲೂ ಮಾಡಿದಾಗ ಮನೆಯಲ್ಲಿ ಕಂಪ್ಯೂಟರ್ , ಎ.ಸಿ. ಯಾವುದನ್ನೂ ಆಫ್ ಮಾಡಿಲ್ಲ ಅನ್ನೋದು ನೆನಪಾಯಿತು.. ಮತ್ತೆ ಮನೆಕಡೆ ಹೋದರೆ ತಡವಾಗುತ್ತೆ ಅಂತ ನೇರ ಆಫೀಸಿನ ಕಡೆಗೇ ಹೊರಟು ಬಿಟ್ಟ..ವಿ -೮ ಇಂಜಿನ್ ನ ಟೊಯೋಟಾ ಕಾರು..ಎಂಭತ್ತರಲ್ಲಿ ಹೋದರೆ ಹತ್ತೇ ನಿಮಿಷದಲ್ಲಿ ಆಫೀಸಿನಲ್ಲಿ..

ನೇರವಾಗಿ ತನ್ನ ಸಿಸ್ಟಮ್ ಕಡೆಗೆ ತೆರಳಿ , ಅದಾಗಲೇ ಓಪನ್ ಮಾಡಿ ಇಟ್ಟಿದ್ದ , ಇವತ್ತಿಗೆ ಬೇಕಾದ ಪೋಸ್ಟರ್ ಗಳ ಪ್ರಿಂಟ್ ಔಟ್ ಗಳನ್ನೂ, ಹ್ಯಾಂಡ್ ಔಟ್ ಗಳನ್ನೂ ಪ್ರಿಂಟ್ ಗೆ ಕೊಟ್ಟು, ಕಮ್ಯುನಿಟಿ ಹಾಲ್ ನ ಸೌಂಡ್ ಸಿಸ್ಟಂ, ಎ.ಸಿ. ಎಲ್ಲ ಚೆಕ್ ಮಾಡಿ ಬಂದ.

ಅಂತೂ ಇಂತೂ ಸಮಯಕ್ಕೆ ಸರಿಯಾಗಿ ಜನ ಜಮಾಯಿಸಿದ್ದರು.. ಜೋ ತನಗೇ ಅಚ್ಚರಿಯಾಗುವಷ್ಟು ಸಲೀಸಾಗಿ ವಿಷಯಗಳನ್ನು ಪ್ರೆಸೆಂಟ್ ಮಾಡಿದ.. ಜನರಿಂದಲೂ ಒಳ್ಳೆಯ ಪ್ರಶಂಸೆ ಬಂತು.. ಕಂಪನಿ ಯವರು ಇವನ ಪರಿಸರ ಕಾಳಜಿಯ ವಿಚಾರ ಮಂಥನಕ್ಕೆ ಮರುಳಾಗಿ ಆ ವರ್ಷದ ಪರಿಸರ ಕಾಳಜಿ ಪ್ರಶಸ್ತಿ ಯನ್ನೂ ಅವನಿಗೆ ಕೊಡುವುದಾಗಿ ಅನೌನ್ಸ್ ಮಾಡಿದ್ರು..

ಜೋ ತನಗೆ ಸಿಕ್ಕಿದ ಈ ಗೌರವಕ್ಕೆ ಹೆಮ್ಮೆ ಪಡುತ್ತ ನಿಧಾನಕ್ಕೆ ತನ್ನ ಡೆಸ್ಕ್ ನತ್ತ ತೆರಳಿದ.. ಮುಂದಿನ ವಾರ ನಗರದ ಟೌನ್ ಹಾಲ್ ನಲ್ಲಿ ಕೊಡಬೇಕಾದ ಪ್ರೆಸೆಂಟೇಶನ್ ಗೆ ನಾಳೆಯಿಂದಲೇ ತಯಾರಿ ಶುರು ಮಾಡಬೇಕು ಅಂದುಕೊಳ್ತಾ ಇವತ್ತಿನ ಭಾಷಣವನ್ನು ತನ್ನ ಬ್ಲಾಗ್ ನಲ್ಲಿ ಇಳಿಸಲು ಹೊರಟ..

ನಿನ್ನೆ ತೆರೆದಿಟ್ಟಿದ್ದ ವಿಶ್ವ ಪರಿಸರ ದಿನದ ವೆಬ್ ಸೈಟು ಅಲ್ಲೇ ಎಲ್ಲೋ ಮೂಲೆಯಲ್ಲಿ ಮಿನಿಮೈಜ್ ಆಗಿ ತನ್ನ ಪಾಡಿಗೆ ತಾನು ಮಕಾಡೆ ಮಲಗಿಕೊಂಡಿತ್ತು...


Tuesday, June 1, 2010

ಸವೆದದ್ದಷ್ಟೇ ದಾರಿ... ?

ಹೊರಟಿದ್ದೇನೋ ನಿಜ ನಾನು
ಅದಾವುದೋ ಗಮ್ಯದೆಡೆಗೆ..
ಹೆಜ್ಜೆಯ ಮುಂದೊಂದು ಹೆಜ್ಜೆ
ದಾರಿ ಯಾವುದೆಂದು ತಿಳಿಯಲಿಲ್ಲ..

ಮತ್ತೊಮ್ಮೆ ನನ್ನನ್ನೇ ಕೇಳಿಕೊಂಡೆ
ಹೋಗಲೇಬೇಕ? ಹೋದರೇನು ದಕ್ಕೀತು
ಅಥವಾ ದಕ್ಕಿದರೆ ಮಾತ್ರ ಹೋದದಕ್ಕೆ ಬೆಲೆಯ?
ಇಷ್ಟಕ್ಕೂ , ದಾರಿ ಯಾವುದೆಂದು ಇನ್ನೂ ತಿಳಿಯಲಿಲ್ಲ..

ಯಾರೋ ಮುಂದೊಬ್ಬ ಹೋಗಿದ್ದನಂತೆ
ಅವನು ಹೆಜ್ಜೆ ಇರಿಸಿದಲ್ಲಿ ನೆಲ ಸ್ವಲ್ಪ ಸವೆದಿದೆ
ಅದುವೇ ದಾರಿ ಅಂತ ಜನ ಅನ್ನುತ್ತಾರೆ
ನನಗದು ದಾರಿ ಅಂತ ಅನಿಸುವುದಿಲ್ಲ

ಅವನು ಹೋದ ಮಾತ್ರಕ್ಕೆ ಅದು ದಾರಿಯ?
ಅವನು ಹೋಗದೆ ನಾನು ಹೋಗಿದ್ದರೆ?
ಅಥವಾ ನಾನೇ ಬೇರೆಯದೇ ದಿಕ್ಕಿನಲ್ಲಿ ನಡೆದಿದ್ದರೆ?
ದಾರಿ ಇನ್ನೂ ಇರುತ್ತಿತ್ತ? ಹಾಗಂತ ಮತ್ತೆ ಕೇಳಿಕೊಂಡೆ

ಸವೆದದ್ದಷ್ಟೇ ದಾರಿಯೆಂದಾದರೆ
ಅವೆಲ್ಲ ನನ್ನನ್ನು ಗಮ್ಯಕ್ಕೆ ಕೊಂಡೊಯ್ಯಬಲ್ಲವಾ?
ಅಥವಾ ಹೇಗೆ ನಡೆದರೂ ಗಮ್ಯವನ್ನು
ತಲುಪಬಲ್ಲೆ ಎಂದಾದರೆ ದಾರಿಯ ಹಂಗು ಬೇಕಾ?

ಅವ ನಡೆದಲ್ಲಿ ನಾ ನಡೆದರೆ
ಅದು ನನಗೆ ದಾರಿ, ಆದರೆ ಅವನಿಗೆ?
ದಾರಿಯ ಹಂಗಿದ್ದರೆ ತಾನೇ ಕಚ್ಚಿಕೊಳ್ಳುವುದು
ಸರಿ ದಾರಿ, ತಪ್ಪು ದಾರಿ ಎಂಬ ಸಂಕೀರ್ಣತೆಗಳೆಲ್ಲ?

ಕಾಡುವ ಪ್ರಶ್ನೆಗಳನ್ನೆಲ್ಲ ಇದ್ದಲ್ಲೇ ಬಿಟ್ಟು
ಮುಂದೆ ನಡೆಹಾಕಿದೆ..ಹೆಜ್ಜೆಯೊಂದಿಟ್ಟಂತೆ
ಮತ್ತೆ ದಾರಿ ಯಾವುದೆಂದು ತಿಳಿಯಲಿಲ್ಲ..

ಪರವಾಗಿಲ್ಲ, ಈಗ ದಾರಿ ಯಾವುದೆಂದು
.....ತಿಳಿಯುವುದೂ ಬೇಕಾಗಿಲ್ಲ...

Sunday, May 9, 2010

ಒಲವಿನೋಲೆ ೨ - ನಮ್ಮೊಲವ ಲೆಕ್ಕದಲ್ಲಿ ನನಗೆಷ್ಟು ಮಾರ್ಕ್ಸು, ಮತ್ತು ನಿನಗೆಷ್ಟು?

ಗೊಂದಲಗೂಡಿನ ಭಾವಯಾನವೇ ,

ಬಾನ್ಬೆಳದಿಂಗಳು ಬಿತ್ತರಿಸಿದ ಬೆಳಕನ್ನೆಲ್ಲ ಬಾಚಿ ಬೊಗಸೆಯಲ್ಲವಿತಿರಿಸಿ ಬ್ರಹ್ಮ ಬಾಳ್ಕೊಟ್ಟ ಭಾಮಿನಿ ನೀನೇನೆ ಅಂತ ನಾ ಕನವರಿಸುತ್ತ ಕೂರುತ್ತಿದ್ದ ರಾತ್ರಿಗಳಿದ್ದವಲ್ಲ, ಅವೆಲ್ಲ ನಿನ್ನವಾ ಅಥವಾ ನನ್ನವಾ ಅಂತ ಇನ್ನೂ ಕೊಂಚ ಕಸಿವಿಸಿ.. ಆದ್ರೂ ನಿನ್ನಿರವಿನ ಘಳಿಗೆಗಳಲ್ಲಿನ ಕಸಿವಿಸಿಗಳಿಗಿಂತ ಇದು ಕೊಂಚ ವಾಸಿಯೇನೋ.

ನೀನಂದ್ರೆ ಹಂಗೇ ಅಲ್ವ.. ಕಸಿವಿಸಿ ರಾಜಕುಮಾರಿ.. ನೆನಪಿದ್ಯಾ? ಆವತ್ತು ನನ್ನ ಹುಟ್ಟುಹಬ್ಬದ ದಿನ ಕಾಲೇಜ್ ಕ್ಯಾಂಟೀನಲ್ಲಿ ಪುಟ್ಟ 'ಶೇರೂ' ಗೊಂಬೆ ಕೈಗಿಟ್ಟು ನೀನಾವತ್ತು ಕೇಳಿದ್ದೆ - 'ಶೇರೂ ಈಗ ನನ್ನವನ? ನಿನ್ನವನ? ' ಅಂತ. . ನಾನು ಏನಂದರೂ ಆವತ್ತು ನಿನ್ನೆದುರು ಸೋಲುತ್ತಿದ್ದೆ. "ಥತ್! ನೀನು ಕೊಡುವ ಪ್ರಶ್ನೆಗಳೇ ಇಂಥವು ನೋಡು" ಅಂತ ನಿನ್ನ ಬಾಯಿ ಮುಚ್ಚಿಸಿದ್ದೆ.

ಈಗ ಮತ್ತದೇ ಪ್ರಶ್ನೆ , ನೀನಿಲ್ಲದಾಗಲೂ... ನಿನ್ನ ಬಗ್ಗೆ ನಾ ಕಂಡ ಕನಸುಗಳೆಲ್ಲ ನಿನ್ನವಾ ಅಥವಾ ನನ್ನವಾ? ಉತ್ತರಿಸುವ ಸರದಿ ನಿನ್ನದು.

' ಛಿ, ಹೋಗೋ.. ಹೇಳಲ್ಲ ನಾನು" ಅಂತೇನಾದ್ರೂ ಹೇಳಿ ತಪ್ಪಿಸ್ಕೊಂಡ್ರೆ ಜೋಕೆ, ನಿನ್ನ ಜ್ಹುಮುಕಿಯೊಂದು ಇನ್ನೂ ನನ್ನ ಬುಕ್ ಶೆಲ್ಫ್ ನಲ್ಲಿ ಜೋತಾಡುತ್ತಿದೆ , ನೆನಪಿಟ್ಕೋ.. ಅಂದ ಹಾಗೆ ಅದೆಷ್ಟು ತಂಟೆ ಕೊಡುತ್ತೆ ಗೊತ್ತ..ಥೇಟ್ ನಿನ್ನ ಥರಾನೇ. ಒಂಚೂರು ಗಾಳಿ ಬಂದರು ಸಾಕು, ಅದರ ಕುಲುಕು ನಿನ್ನನ್ನೇ ನೆನಪಿಸಿಬಿಡುತ್ತೆ..

ತು ತೋ, ನಹಿ ಹೈ ಲೇಕಿನ್

ತೇರಿ ಮುಸ್ಕುರಾಹತ್ ಹೈ ..

ಚೆಹ್ರಾ ಕಹೀನ್ ನಹೀ ಹೈ ಪರ್

ತೇರಿ ಆಹಟೇ ಹೈ ...

ಆದ್ರೆ ಮೊನ್ನೆಯ ಕ್ಲಾಸಲ್ಲಿ ನೀನೆ ಕಸಿವಿಸಿಗೆ ಬಿದ್ದೆ ನೋಡು.. ಯಾರೋ ಒಬ್ಬ 'ಕಿರಣ್ ' ಅನ್ನೋ ಸೀನಿಯರ್ ಆಟೋಗ್ರಾಫ್ ನಲ್ಲಿ ನೀನೇನೋ ಬ್ರದರ್ ಸೆಂಟಿಮೆಂಟ್ ಕವನ ಗೀಚಿದ್ದೆಯಲ್ಲ..ಮತ್ತಿನ್ಯಾರೋ ಅದನ್ನೋದಿ ಕಿರಣ್ ಹುಡುಗಾ ಅಲ್ಲ, ಹುಡುಗಿ ಕಣೆ ಅಂತ ನಿನ್ನನ್ನ ಗೋಗರೆದಿದ್ದರಲ್ಲ... ದಿವಸ ನಿನ್ನ ಕೆನ್ನೆಯ ಕೆಂಪು ನಾನೂ ನೋಡಿದ್ದೆ. ಕ್ಯಾಂಟೀನಲ್ಲಿ ನಾನವತ್ತು ನಿನ್ನನ್ನು ಇದೇ ಕಾರಣಕ್ಕೆ ರೇಗಿಸಿದ್ದಾಗ ಮೆಲ್ಲನೆ ನಿನ್ನ ಬೆಣ್ಣೆಗಾಲಲ್ಲಿ ಒದ್ದೆಯಲ್ಲ, ಸಿಹಿ ಈಗಲೂ ನನ್ನಲ್ಲಿದೆ. ನಿನ್ನ ಗೆಳತಿಯರೆಲ್ಲ ರೇಗಿಸಿದಾಗ ಅವುಡುಗಚ್ಚಿ ತಡೆಹಿಡಿದುಕೊಂಡಿದ್ದನ್ನೆಲ್ಲ ಗುಬ್ಬಚ್ಚಿ ಮೇಲೆ ಪ್ರಯೋಗಿಸುತ್ತಿರುತ್ತಿಯಲ್ಲೇ .. ನ್ಯಾಯವಾ ಇದು?

ಹತ್ತು ಜನರ ಕೋಪವೆಲ್ಲ ನನ್ನಲೆರೆದ ಗಳಿಗೆ

ಅರಿತೆ ಗೆಳತಿ , ಪ್ರೀತಿ ಕೂಡ ಅಷ್ಟೇ ಕೊಡುವೆ ನನಗೆ..

ಮತ್ತೆ ನಾನು prank mail ವಿಚಾರ ತೆಗೆದರೆ ನನ್ನ ಕೊಂದೇ ಬಿಡುತ್ತೀಯೇನೋ. ದಿವಸ ಕಾಲೇಜಿನ ಸೈಬರ್ ನಲ್ಲಿ ಮೇಲ್ ಬಾಕ್ಸ್ ತೆರೆದಿಟ್ಟು ಅದ್ಯಾವುದೋ ಗೆಳತಿಯ ಕಂಪ್ಯೂಟರ್ ನಲ್ಲಿ ಇಣುಕಲು ಹೋಗಿದ್ಯಲ್ಲ.. ಅದೇ ಗಳಿಗೆ ಉಪಯೋಗಿಸಿ ನಾನು ನಿನ್ನ ಹೆಸರಲ್ಲಿ, ನಿನಗೂ CC ಮಾಡಿ ನಮ್ಮ ಕ್ಲಾಸ್ ಮೈಲಿಂಗ್ ಲಿಸ್ಟ್ ಗೆ ' I’m throwing a party tomorrow ' ಅಂತ ಮೇಲ್ ಕಳಿಸಿದ್ದೆ. ಒಂದಿಬ್ಬರು ನಿನ್ನನ್ನ ತಮಾಷೆ ಮಾಡಿದ್ದೂ ನಿಜ. ಆದ್ರೆ ನೀನು ಅದನ್ನ ಅಷ್ಟು ಸೀರಿಯಸ್ಸಾಗಿ ತಗೊಂಡಿದ್ಯಲ್ಲೇ,ಒಂದು ವಾರ ನನ್ನ ಹತ್ರ ಮಾತು ಬಿಟ್ಟಿದ್ದೆ ನೆನೆಪದೆಯಾ. ನನಗಂತೂ ಒಂದು ವಾರ ಹುಚ್ಚೇ ಹಿಡಿದಂತಾಗಿತ್ತು. ಗಳಿಗೆಗಳಲ್ಲಿ ನಿನ್ನ ವಿರಹವನ್ನು ಅಳೆಯುವವ ನಾನು, ದಿನಗಳನ್ನೇ ನೀನು ನನಗೆ ಶಪಿಸಿಬಿಟ್ಟರೆ ನನ್ನ ಗತಿಯಾದ್ರು ಏನು , ಯೋಚಿಸಿದ್ದೀಯ?

ಸುಳ್ಳೇ ಆದ್ರು ನನ್ನ ಹೀಗೆ ಕಾಡಬೇಡ ಗೆಳತಿ

ಕಳೆವೆ ನನ್ನ ನಾನೇ, ನಿನ್ನ ಕಳೆಯೆನೊಂದು ಸರತಿ...

ಇದಾದ ಒಂದು ವಾರದ ಮೇಲೆ ಲಂಚ್ ಬ್ರೇಕ್ ನಲ್ಲಿ ಸುಮ್ಮನೆ ಕುಳಿತಿದ್ದಾಗ ಹಿಂದಿನಿಂದ ಬಂದು ಕಿವಿ ಹಿಂಡಿ 'ಸಾರಿ ಕೇಳು' ಅಂತ ಸುಳ್ಳೇ ಗದರಿಸಿದೆಯಲ್ಲ, ಒಂದು ವಾರ ಬಾಕಿಯಿಟ್ಟ ಬಡಿತವನ್ನು ಹೃದಯ ಒಮ್ಮಿಂದೊಮ್ಮೆಲೆ ಹೊಡೆದು ಬಿಡುತ್ತೇನೋ ಅಂತ ಅನ್ನಿಸಿಬಿಟ್ಟಿತ್ತು. ನೀನು ಮತ್ತೆ ಬಂದು ಮಾತಾಡಿಸುತ್ತಿ ಅಂತ ಕಳ್ಳ ಹೃದಯ ಯಾವತ್ತೂ ಹೇಳುತ್ತಿತ್ತು, ಆದ್ರೆ ಪಾಟಿ ಶಾಕ್ ಕೊಡೋದೇನೆ ? 'ಸಾರಿ' ಅಲ್ಲ , ನಿನ್ನ ಸುತ್ತ ಉರುಳುಸೇವೆ ಹಾಕು ಎಂದರೂ ಹಾಕುತ್ತಿದ್ದೆನೇನೋ.. ಬರ ಹಿಡಿದ ಅರೆ ಒಡಲನ್ನು ನಿನ್ನ ತೆರೆದ ಅರಮನೆಗೆ ಮತ್ತೆ ಕರೆತಂದಿದಕ್ಕೆ ಥ್ಯಾಂಕ್ ಯೂ ಎನ್ನಲಾ, ನಿನ್ನ ಮಿಸ್ ಮಾಡಿದ್ದನ್ನು ನಿನ್ನ ಮುಂದೆಯೇ ಹೇಳಿ ಅತ್ತು ಬಿಡಲಾ ಅಂತ ಅವತ್ತು ಮನಸ್ಸು ಗೊಂದಲಗೂಡಾಗಿತ್ತು .

ಬರದರೆಯೊಡಲನು

ತೆರೆದರಮನೆಯೊಳು

ಕರೆದ ರಮಣಿಯನು

ಮರೆದರಧಮ ನಾ...

ಇಷ್ಟೆಲ್ಲಾ ಆಗಿ ಇವತ್ತಿಗೆ ಒಂದು ತಿಂಗಳು. ಇದನ್ನೆಲ್ಲಾ ಹೀಗೇ ಬರೆದುಬಿಟ್ಟು ಇಗೋ ನಿಂಗೇ ಕೊಡುತ್ತಿದ್ದೇನೆ .. ಈಗ ನೆನಪಿನ ಮೆರವಣಿಗೆಯಲ್ಲಿ ಕಳೆದು ಹೋಗೋ ಸರದಿ ನಿನ್ನದು..

ನನ್ನ ನಿನ್ನ ಒಲವ ಲೆಕ್ಕ ಬರೆದರೆಲ್ಲ ಸೊನ್ನೆ

ಯಾಕೆ ಗೊತ್ತ?,

ನಿನ್ನ ನಾನು ಕೂಡಿದಾಗ ಕಳೆದೆ ನಾನು ನನ್ನೇ....

ಇಂತಿ ನಿನ್ನ ರಾಜ್ಕುಮಾರ..