Wednesday, April 28, 2010

ಕೊಡುವುದಾದರೆ ಕೊಟ್ಟುಬಿಡು ..


ಕೊಡುವುದಾದರೆ ಕೊಟ್ಟುಬಿಡು ..ಇಂದೇ.. ಇದನ್ನೂ...

ಕಾಣಿಕೆಯ ಹುಂಡಿಯೊಳಗೆ ಯಾರದೋ ಆಸೆಗಳ

ಸಾಕ್ಷಿಯಾಗಿ ವರ್ಷಾನುಗಟ್ಟಲೆ ಬಿದ್ದ ಬಿಂದು ಸಿಂಧು..

ಕೊಟ್ಟವನ ಋಣ ತೀರಿತಾ?

ಅಥವಾ ಪಡೆವವ ಹಂಗಿಗೆ ಬಿದ್ದನಾ ?

ದ್ವಂದ್ವಗಳ ನಡುವೆ ಸಿಲುಕಿ ನಲುಗುವವ

ನೀನಲ್ಲದಿದ್ದಲ್ಲಿ..

ಕೊಡುವುದಾದರೆ ಕೊಟ್ಟುಬಿಡು ..ಇಂದೇ ಇದನ್ನೂ.


ಘಳಿಗೆಗೆ ಮುನ್ನ ಸುರಿದ ಮಳೆಧೂಳ ಹನಿ

ಅದಿನ್ನೆಲ್ಲೆಲ್ಲಿ ನುಸುಳಿತೋ

ಎಳೆಗಳ ನುಣುಪಿನೆಡೆಯೋ, ಕಲ್ಗಳ ದಾರ್ಷ್ಟ್ಯದೆಡೆಗೋ

ವರುಷಾನುಗಟ್ಟಲೆ ಕೊಳೆತು ನಾರುವ

ಕೆಸರೊಸರಿನೆಡೆಗೋ..

ಕ್ಷಣದೊಳಗೆ ಹನಿಯು ಮಾಯವಾಗುವ ಮೊದಲು

ಕೊಡುವುದಾದರೆ ಕೊಟ್ಟುಬಿಡು..ಇಂದೇ ಇದನ್ನೂ..


ಬೆವರ ಹನಿಗಳ ಘಮ ವಾಸನೆಗೆ ಬದಲೋ ಮೊದಲು

ಮಧುರಾಮಧುರವೆಂದು ನೀನುಲಿದದ್ದೆಲ್ಲ ತೊಗಲು ಬರಿಯೆಂದು

ಉಗಿದು ತೊಲಗೋ ಮೊದಲು

ಬಿಸುಪಿನುಸಿರನ ವೇಗ ತಗ್ಗಿ ತೆವಳೋ ಮೊದಲು

ಹಳೆಯ ಕಂತುಗಳದೇನಿದ್ದರೂ

ಕೊಡುವುದಾದರೆ ಕೊಟ್ಟುಬಿಡು.. ಇಂದೇ ಇದನ್ನೂ ..

ಕೊನೆಯದೊಂದು ಬಾರಿಗೆ...

Sunday, April 25, 2010

ಸೆಲ್ಫ್ ಅಪ್ರೈಸಲ್ ... !

ಹುಚ್ಚು ನನಗಿಲ್ಲವೆಂದೇನಲ್ಲ..

ನಾನೂ ಓಡುತ್ತೇನೆ ಯಶಸ್ಸಿನ so called ಏಣಿಯೆಡೆಗೆ..

ತಳ್ಳಾಡೋ ಕಿತ್ತಾಡೋ ಗುರಿ ಕಾಣದಷ್ಟು ನಿಬಿಡವಾದ

ಅದಾವುದೋ ಧಾವಂತದ so called ಕೊನೆಯೆಡೆಗೆ..


ದಾರಿಯತ್ತಿತ್ತದ ಸೊಬಗೇನಿದ್ದರೂ ಅದರ ಪಾಡಿಗೆ

ಕಣ್ಗಳು ನೇರವದೆಷ್ಟು , ಕಾಣದ ಗುರಿಯೆಡೆಗೆ

ನಿದ್ದೆ,ಹಸಿವು,ದಾಹ ಮತ್ತಿನ್ನಷ್ಟು ಸ್ವಾಭಾವಿಕ ಕಸುಬುಗಳು

ಅವರಷ್ಟಕ್ಕವು ಯಾಂತ್ರಿಕವಾಗಿ ತಮ್ಮನ್ನವೆ ಶಮನಿಸಿಕೊಂಡಿವೆ...


ಹುಚ್ಚು ನನಗಿಲ್ಲವೆಂದೇನಲ್ಲ..

ಆದರೂ ಅಕ್ಕಪಕ್ಕದ ದಾರಿಹೋಕರನ್ನು ಹುಚ್ಚನೆನ್ನುತ್ತೇನೆ.

ಹಿಂದೆ ಬಿದ್ದವರನ್ನೂ ಕೈಲಾಗದ ಹುಚ್ಚನೆನ್ನುತ್ತೇನೆ

ಸೋತು ಕುಳಿತವರನ್ನೂ, ಗುರಿಯ ಮರೆತವರನ್ನೂ ಬಿಡದೆ

ಕಂಡು ಕೇಳುತ್ತೇನೆ ಅವರನ್ನು - 'ಹುಚ್ಚೇನು ನಿಮಗೆ?'


ಹುಚ್ಚು ನನಗಿಲ್ಲವೆಂದೇನಲ್ಲ...

ಆದರೂ ಜಗದೆದುರುಹುಚ್ಚು ನನಗಿಲ್ಲ”ವೆಂದೆನಲ್ಲ !!..

Tuesday, April 20, 2010

ಮಲೆಗಳಲಿಲ್ಲ ಮದುಮಗಳು!

ಮಲೆನಾಡಂಚಿನ ಮೆದುವಿಳೆಯಲ್ಲಿ ಮಲರೆಲೆ ಮೆಲ್ಲನೆ ಮುದುಡುತಿದೆ

ಮುನಿಸುರಗದ ಮಡು ಮರಣ ಮೃದಂಗದಿ ಮನುಜರ ಮುಡಿಗೆಡವಿಕ್ಕುತಿದೆ


ಮಾವೋ ಮಹಿಪನ ಮಾತಿಗೆ ಮೈಮರೆತೆದ್ದಿಹ ಮಲೆಮಕ್ಕಳ ಮರುಳು

ಮಲೆಮರಗಳ ಮಧುವತ್ತರ ಮಡಿ ಮೈನೆತ್ತರ ಮೊತ್ತದೆ ಮೆತ್ತಿಹುದು..


ಮುಂದಾಲೋಚನೆ ಮರೆತಿಹ ಮೆದುಳಲಿ ಮದದಾಲಾಪವ ಮಸೆವವಗೆ

ಮಾನಿನಿ-ಮಗು-ಮುತ್ತೈದೆ-ಮುದುಕನೇನ್ ಮಸಣದ ಮಂಚವೆ ಮಂದಲಿಗೆ


ಮದ್ದುಗುಂಡಿನಲೆ ಮಾತಿಗುತ್ತರವ ಮರಳಿಸೊ ಮಾರಿಯ ಮಕ್ಕಳಿಗೆ

ಮಲೆ-ಮನೆ-ಮನ ಮಮತೆಯ ಮರೆವಾಗಿದೆ ಮೃತ್ಯುಮಾನುಷದ ಮೈಯೊಳಗೆ..


ಮಾತೆಯ ಮಮತೆಯ ಮಡಿಲಿನ ಮಗುವಿಗು ಮೈವೆತ್ತುತಲೇ ಮೈನಡುಗು

ಮಲೆನಾಡಿನ ಮಾಂಕವಿಗಳೆ ಮನ್ನಿಸಿ, ಮಲೆಗಳಲಿಲ್ಲ ಮದುಮಗಳು!


-ವಿನಾಯಕ ಕುರುವೇರಿ

Tuesday, April 13, 2010

ದೀಪ ಹಚ್ಚೋ ವೇಳೆ ಕತ್ತಲಾಗದಿದ್ದರೆ!!

ಹೌದು ಕತ್ತಲಾಗಿಲ್ಲ ಇನ್ನೂ.. ಇದನ್ನು ಬರೀಲಿಕ್ಕೆ ಕೂತಾಗ ಇಲ್ಲಿ ಗಂಟೆ ೮:೧೫ . ಸೂರ್ಯ ಇನ್ನೂ lazyಯಾಗಿ cozyಯಾಗಿ ತನ್ನ ಸಂಜೆ ಬೀಟು ಮುಂದುವರಿಸಿದ್ದಾನೆ.ಇನ್ನೂ ಕಾಲು ಗಂಟೆ ತಗೊತಾನೇನೋ ಇವತ್ತಿನ ಪಾಳಿ ಮುಗಿಸೋಕೆ! ಸಂಜೆಯನ್ನು ಅದೆಷ್ಟು ಮಿಸ್ ಮಾಡ್ಕೊತೀನಿ ಗೊತ್ತ? off course , ಸಂಜೆ ಇಲ್ಲವೆಂದಲ್ಲ, ಇದೆ.. ಆದ್ರೆ so called ರಾತ್ರಿ ಊಟದ ನಂತರ ಸಂಜೆ ಬಂದರೆ ಅದೇನ್ ಚಂದ ಹೇಳಿ. ಇಲ್ಲಿ ಈವಾಗ ಆಗ್ತಿರೋದು ಹಂಗೇ. ಸಂಜೆಯಾಗೋದು ಊಟವಾದ ಮೇಲೇನೆ.! ನಿಸ್ಸಾರರು ಸಂಜೆ ಐದರ ಮಳೆಗೆ ಅದೆಷ್ಟು colorful ಆಯಾಮಗಳನ್ನು ಕೊಟ್ಟಿದ್ದರು! ಇಲ್ಲಿ ಈಗ ಐದಕ್ಕೆ ಮಳೆ ಇದೆ, ಆದ್ರೆ ಅದು ಸಂಜೆ ಅಲ್ಲ , ಅಪರಾಹ್ನ ಅಷ್ಟೇ , ಅಥವಾ ಕೆಲವೊಮ್ಮೆ ಸಂಜೆ ಮಳೆಯಿದೆ ಆದ್ರೆ ಅದು ಐದಕ್ಕೆ ಅಲ್ಲ.. ಒಂಭತ್ತಕ್ಕೆ !
ಅಮೆರಿಕೆಯಲ್ಲಿ ಸಮ್ಮರ್ ಅಂದ್ರೆ ಹೀಗೇನೆ. ಸೂರ್ಯನಿಗದೇನೋ ಎಲ್ಲಿಲ್ಲದ ಹುರುಪು. ರಾತ್ರಿ ವರೆಗೂ ಅಲ್ಲಿಲ್ಲಿ ಬಾನಲ್ಲಿ ಹ್ಯಾಂಗ್ ಅರೌಂಡ್ ಮಾಡುತ್ತಿದ್ದಾತ ಬೆಳಗ್ಗೆ ಆರಾಗಬೇಕಾದ್ರೆ ಮತ್ತೆ ದಿಡೀರ್ ಹಾಜರ್ ಆಗಿ ಬಿಟ್ಟಿರುತ್ತಾನೆ . ಬೆಳಗ್ಗೆ ಆರಕ್ಕೆ ಎದ್ರೂನೂ 'ಅಯ್ಯೋ , ಹೊತ್ತು ಮೂಡಾದಮೇಲೂ ಬಿದ್ಕೊಂಡಿದ್ಯಲ್ಲೋ ಮಹಾಶಯನೇ' ಅಂತ ಒಮ್ಮೊಮ್ಮೆ ಗಾಬರಿಗೊಂಡು ಎದ್ದು ಗಡಿಯಾರವನ್ನು ನೋಡಿ ಅವಾಕಾಗಿದ್ದೂ ಇದೆ.
ಸಂಜೆ ಅಂದ್ರೆ ಏನಿಲ್ಲವೆಂದೇನೂ ಅಲ್ಲ . ಕ್ರಿಕೆಟ್ ಏನೋ ಆಡುತ್ತೇವೆ ನಿಜ.. ಸಂಜೆ ಎಂಟೂವರೆಯ ವರೆಗೂ ಆಡುತ್ತೇವೆ. ಬಾಲ್ ನೀಟಾಗಿ ಕಾಣುತ್ತದೆ ಕೂಡ.ಅದನ್ನು ಖುಶಿಪಡುತ್ತೇವೆ. ಆರು ಗಂಟೆವರೆಗೆ ಸುಸ್ತು ಹೊಡೆದು ಕೆಲ್ಸಾನ ಮಾಡಿ ಆಫೀಸ್ ಬಿಟ್ಟ ಮೇಲೂ ಈ ದಿನದಲ್ಲಿ ಖರ್ಚಿಗೆ ಸ್ವಲ್ಪ ಉಳಿದಿದೆ ಅಂತ ಆದ್ರೆ ಯಾರಿಗಿಷ್ಟ ಆಗೋಲ್ಲ? ಆದರು ಸಂಜೆ ಅನ್ನೋ ಫ್ರೀ ಟೈಮ್ ನ feel ಇದೆಯಲ್ಲ.. ದಟ್ ಇಸ್ ಸ್ಟಿಲ್ ಮಿಸ್ಸಿಂಗ್.. ಮುಸ್ಸಂಜೆ ಮಾತಿಗೂ ರಾತ್ರಿ ಮಡದಿಯೊಡನೆ ಆಡುವ ಮಾತಿಗೂ ವ್ಯತ್ಯಾಸ ಇರುತ್ತೇಂತ ಒಪ್ಕೊತಿರ ತಾನೇ? ನಮ್ಮ ದುರಾದ್ರಷ್ಟ ಅಂದ್ರೆ ನಾವು ಎರಡನ್ನೂ ಒಂದರಲ್ಲೇ ಅಡ್ಜಸ್ಟ್ ಮಾಡ್ಕೊಬೇಕು. ಭಾನುವಾರ ಲೇಟಾಗಿ ಏಳೋರು ತಿಂಡಿ ಮತ್ತೆ ಮಧ್ಯಾಹ್ನದ ಊಟಾನ 'brunch ' ಅಂತ ಅಡ್ಜಸ್ಟ್ ಮಾಡ್ಕೊತಾರಲ್ಲ , ಹಾಗೆ!!
ಕೊನೆದಾಗಿ ನನ್ನನ್ನ ಕಾಡೋದು ಒಂದೇ ಒಂದು ಪುಟ್ಟ ಸೆಂಟಿ ವಿಚಾರ ಕಣ್ರೀ. ಚಿಕ್ಕಂದಿನಲ್ಲಿ ಅಮ್ಮ ಯಾವತ್ತೂ ಹೇಳೋಳು, ' ಸಂಜೆ ಆತು ಮಗಾ, ಕೈ ಕಾಲು ತೊಳೆ, ದೇವರಿಗೆ ದೀಪ ಹಚ್ಚು, ನಮಸ್ಕಾರ ಮಾಡು' .. ಇದು ನಾನು ಕುನ್ನಿಮಾಣಿ ಆಗಿದ್ದಾಗ ದಿನಾಲೂ ಹೇಳಿಸಿಕೊಳ್ಳುತ್ತಿದ್ದ ಮಾತು. ಸಂಜೆ ಆಯ್ತೆಂದರೆ ಅದು ಆಟವೆಲ್ಲ ಮುಗಿಸಿ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿ ನಂತರ ಹೋಂ ವರ್ಕು , ದಿಕ್ಟೆಷನ್ನು , ಓದಾಯಣ, ಬರೆಯಾಯಣ ಮಾಡುವ ಸಮಯ. ಒಂದು ವೇಳೆ ಅದೆಲ್ಲ ಬೇಗ ಮುಗೀತೆಂದರೆ ಊಟದವರೆಗೆ ಒಂದು ರೌಂಡ್ ಟಿ ವಿ ಯೋ , ರೇಡಿಯೋ ನೋ ಸವೀಬಹುದು.ಇವೆಲ್ಲ ಒಂಥರಾ ಗೋಲ್ಡನ್ ಮೆಮೊರೀಸ್ ಬಿಡಿ. ಮೆಮೊರೀಸ್ ಬಗ್ಗೆ ಮಾತಾಡ್ತಾ ಹೋದ್ರೆ ಹುಚ್ಚು ಮನಸ್ಸು ಇನ್ನೇನೇನೋ ಕತೆ ಶುರು ಮಾಡಿ ಬಿಡುತ್ತೆ.!
ಆದ್ರೂ.. ಒಂಬತ್ತು ಗಂಟೆಗೆ ಕೆಲಸವೆಲ್ಲ ಮುಗಿಸಿ ಊಟ ಮಾಡ್ತಿರುವಾಗ ಸೂರ್ಯ ಆಗಷ್ಟೇ ಮುಳುಗ ಹೊರಟಿದ್ದಾನೆ..ಸೊ ಬೋರಿಂಗ್ ಅಲಾ ? Didnt i miss something ? ಊರಲ್ಲಿರೋರು ನಂಗೂ ಒಂಚೂರು ಸಂಜೆಗಳನ್ನು ಇಷ್ಟಿಷ್ಟೇ ಪಾರ್ಸೆಲ್ ಕಳಿಸ್ತೀರ ಪ್ಲೀಸ್!

Sunday, April 4, 2010

ಒಲವಿನೋಲೆ -೧ ನಿನ್ನಂದ ನೋಡಲೆಂದೇ ಚಂದಿರ ಬಂದಿಹನು!

ಎದೆಚಿಲುಮೆಗಳ ಸಾಕಾರರೂಪಿಣಿ,
ಸಾಗರದ ಅಲೆಗಳು ಅನಾದಿಯಿಂದ ಅವೆಷ್ಟೋ ಕಾಲದ ವರೆಗೆ ಹೀಗೆ ಪುಟಿಯುತ್ತಲೇ ಇರುತ್ತವಂತೆ. ಅದು ಬಿಟ್ಟರೆ next ಇರುವುದು ನಿನ್ನಂದವೇನಾ ? ನಿನ್ನ ಸೆಕೆಂಡ್ ಟೈಮ್ ನೋಡಿದಾಗ ನನಗನ್ನಿಸಿದ್ದು ಇದೇನೇ. ಫಸ್ಟ್ ಟೈಮ್ ನೋಡಿದಾಗ ಏನನ್ನಿಸಿತ್ತು ಅಂತ ಕೇಳೋದೇ ಬೇಡ! ಅವತ್ತು ನನಗೆ ಅನ್ನಿಸೋದು ಬಿಟ್ಟು ಬೆರಗಿನಲ್ಲಿ ಕಲ್ಲಾಗದ್ದು ಪುಣ್ಯ! ಕಾಲೇಜು ಪಾರ್ಕಿಂಗ್ ನ ಮೂಲೆಯಲ್ಲಿ ಜಾಗರೂಕತೆಯಿಂದ kinetic ನ ಸ್ಟ್ಯಾಂಡ್ ಅನ್ನು ನೇರ್ಪಡಿಸಿ ಪುಟ್ಟದೊಂದು handbag ನ್ನು ಆ ಬಿದಿರೆಲೆಯ ತೋಳುಗಳಲ್ಲಿ ಜೋತಾಡಿಸಿ ಮೆಲ್ಲಗೆ ಮೇನ್ ಎಂಟ್ರನ್ಸ್ ಕಡೆಗೆ ನೀನು ಹೆಜ್ಜೆಯಿಟ್ಟೆ ಎಂದರೆ ಅದು ಆಗಷ್ಟೇ ಹೊರಬಂದ ಜಯಂತ ಕಾಯ್ಕಿಣಿಯವರ ಕವನ! ಅದೆಷ್ಟು ಪಡ್ಡೆ ಹುಡುಗರ ಕಣ್ಣನ್ನು ಒಂದೇ ಏಟಿಗೆ ನಿಬ್ಬೆರಗು ಗೊಳಿಸಿರಲಿಕ್ಕಿಲ್ಲ ನೀನು!. ಸಾಕು ಅಂತ ಯಾವನಾದರೂ ಒಬ್ಬ ನೀನು ಎದುರಿಗಿದ್ದಾಗಲೇ ಆಚೆ ಹೋಗಿದ್ದಿದರೆ ಕೇಳು!
ಲೆಕ್ಕವಿಲ್ಲದಷ್ಟು ಇಂಟರ್ನಲ್ ಗಳು ನಿನ್ನ ನೆನಪುಗಳಿಂದಾಗಿ ಎಕ್ಕುಟ್ಟಿ ಹೋಗಿವೆ ಕಣೆ. ಇದು ನನ್ನದೊಬ್ಬನದೆ ಕಥೆಯಾಗಿರುತ್ತಿದ್ದರೆ ನಾನು ಡಬಲ್ ಹ್ಯಾಪಿಯಾಗಿರುತ್ತಿದ್ದೆ . ಆದರೆ ಇದು ಕಾಲೇಜ್ ಹಾಸ್ಟೆಲ್ ನ ರೂಮು ರೂಮಿನ ಮಂದಿ ಮಂದಿಯ ಕಥೆ! ಎಷ್ಟು ನಿಷ್ಕರುಣಿ ಅಲ್ವ ನೀನು, ನಿದ್ದೆಗೆಡಿಸುವುದೆಂದರೆ ನಿನಗೆ ಅಷ್ತಿಷ್ಟವೇನೆ?
ಮೊನ್ನೆ ನೀನು ಸೈಬರ್ ನಲ್ಲಿ ಕುಳಿತಿದ್ದೆಯಲ್ಲ, ಅಲ್ಲಿ ಕದ್ದು ಇಣುಕಿ ನಿನ್ನ ಆರ್ಕುಟ್ ಪ್ರೊಫೈಲ್ ಕಂಡುಕೊಂಡಿದ್ದೇನೆ.ಅಯ್ಯಪ್ಪ! ಅದೆಷ್ಟು ಫ್ಯಾನುಗಳು , ಅದೆಷ್ಟು testimonial ಗಳು ! ಹೌಸೆಫುಲ್ candidate ಕಣೆ ನೀನು. ಹೂಗಳು ಹೀಗಿರುತ್ತವೆ , ಎಲ್ಲೆಲ್ಲಿಂದಲೋ ದುಂಬಿಗಳನ್ನು ಸೆಳೆಸೆಳೆದು ಬಿಡುತ್ತವೆ ಅನ್ನೋದು ಕೇಳಿದ್ದೆ.. ಆದ್ರೆ ಮನುಷ್ಯ ಜಾತಿಯಲ್ಲಿ ಇದರ personifaction ಇಷ್ಟು ಬೇಗನೆ ನೋಡುತ್ತೇನೆ ಅಂದುಕೊಂಡಿರಲಿಲ್ಲ..
ಸುಮ್ಮನೆ ಒಂದು ಸ್ಕ್ರಾಪ್ ಬರೆದು ಬಿಡಲಾ ಅಂತ ಒಂದು ಕೈ ಟ್ರೈ ಮಾಡಿದ್ದೆ ನಾನವತ್ತು! ಆದ್ರೆ ಮರುದಿನ ಕಾಲೇಜಿನಲ್ಲಿ ನೀನು ಇದ್ಯಾವುದರ ಅರಿವೇ ಇಲ್ಲದಂತೆ ಕ್ಲಾಸ್ರೂಮಿನೊಳಗೆ ಹೆಜ್ಜೆಯಿಟ್ಟೆಯಲ್ಲ , ನನ್ನ ಕಣ್ಣುಗಳು ಅದೆಷ್ಟು ಹೊತ್ತು ನಿನ್ನನ್ನು ದಿಟ್ಟಿಸಿದ್ದವು ಗೊತ್ತಾ ?
ನನ್ನ ಹೆಸರು ಕೂಡ ಗೊತಿಲ್ಲವಲ್ಲೇ ನಿನಗೆ, ಅಷ್ಟಾದ್ರೂ ಗೊತ್ತಿದ್ದರೆ ಅದೇ ನನ್ನ ಲೈಫಿನ ದೊಡ್ಡ achievement ಅನ್ನುವಂತೆ ಕುಣಿದಾಡುತ್ತಿದ್ದೆ. ಇರಲಿ ಬಿಡು! ನಿನ್ನದೇನಿದೆ ಇದ್ರಲ್ಲಿ ತಪ್ಪು.. ನಪ್ಪೇನಿದ್ದರು ಆ ನಿನ್ನ ಸುಳಿ ಮುಂಗುರುಳಿನದು !. playground ನ ಬದಿಯಲ್ಲಿ ಅದ್ಯಾಕಾದ್ರು ಕಿಟಕಿಗಳನ್ನು ಇಟ್ಟಿರುತ್ತಾರೋ .. ಇನ್ನು ಆ ಕಿಟಕಿಯ ಬದಿಯಲ್ಲಿ ನಿನ್ನಂಥ ಮಾಟಗಾತಿ ಕೂತಿದ್ದೆ ಆದ್ರೆ ಆ ಗಾಳಿ ನಿನ್ನ ಮುಂಗುರುಳಿನ ಜೊತೆ ಆಡಿದ್ದ ಆಟಗಳನ್ನು ಯಾರಾದ್ರು ನೋಡದಿರಲಾಗುತ್ತದೇನೆ ? ಮತ್ತೆ ಆ ಡುಪಟ್ಟಗಳ ನಖರಾಗಳ ಬಗ್ಗೆ ನಾನು ಹೇಳ ಹೊರಡಲ್ಲ ಕಣೆ. ಬಣ್ಣಗಳೆಲ್ಲ ನಿನಗೊಸ್ಕರವೇ ಹುಟ್ಟಿ ಬಂದಿದ್ದೇನೋ ಅಂತ ನಿನ್ನ ಡುಪಟ್ಟಗಳನ್ನು ನೋಡಿದಾಗ ಅನ್ನಿಸಿದ್ದು ಸುಳ್ಳಲ್ಲ.
ಕ್ಲಾಸಲ್ಲಿ ನೀನು ಮಾತಾಡಲ್ಲ.. ಸದ್ಯ! ನಾನು ಪೂರ್ತಿ ಎಕ್ಕುಟ್ಟಿ ಹೋಗಲು ಅದೊಂದು ಬಾಕಿಯಿತ್ತು.
ಇಷ್ಟೆಲ್ಲಾ ನಾ ಹೇಳಿದ್ದು ನಿನಗೆಲ್ಲಿ ಕೇಳಿಸಬೇಕು ಹೇಳು! ಸುಮ್ಮನೊಮ್ಮೆ ಇಲ್ಲಿ ಗೀಚೋಣ ಅಂತ ಗೀಚಿಡುತ್ತಿದ್ದೀನಷ್ಟೇ . ಅದ್ಯಾವುದೋ ಪುಣ್ಯಗಳಿಂದ ನೀನು ಯಾವಾಗಲಾದರೂ ಒಮ್ಮೆ ಮಾತಾಡಿಸಿದ್ದೆ ಆದ್ರೆ ಈ ಲಿಂಕ್ ಆವಾಗ ನಿನಗೆ share ಮಾಡುತ್ತೇನೆ.. ಆಯ್ತಾ? ಇಷ್ಟಕ್ಕೆ ನಿಲ್ಲಿಸುತ್ತೇನೆ.. ನೀ ಸಿಗೋ ವರೆಗೂ ನನ್ನ ದಾರಿ ನಾ ನೋಡಿಕೊಬೇಕಲ್ಲ? :-)
- ಇಂತಿ ನಿನ್ನವ