Wednesday, December 22, 2010

ಅಲೆಗಳ ನೆಪದಲಿ...




ಬರಲೆ ನಾನು ನಿನ್ನ ಕೂಡಿ
ಹೆಜ್ಜೆಯಿರದ ಹಾದಿಗೆ..
ಕಳ್ಳ ಸೂರ್ಯ ಕೆಂಗಡಲನು
ಕೂಡುವಾಗಿನೂರಿಗೆ..

ಮೊರೆವ ನೀರು ನಿನ್ನ ಮಾತ-
-ನಷ್ಟೆ ಬಸಿದು ಕೊಡುತಿದೆ
ಮುದ್ದೆ ಹೊಯಿಗೆ ಒದ್ದೆ ಕೈಗೆ
ಬರೆಯುವಂತೆ ಕೆಣಕಿದೆ..

ನೂರು ಮಾತು ನುಡಿಯಲುಂಟು
ಅದರಲೊಂದು ಹೇಳಲೇ
ದಿಗಿಲ ಮುಗಿಲ ಕಡಲ ಮಡಿಲ
ಸೊಬಗಲೆಗಳ ನೆವದಲೆ..

ಬೆರಳ ತುದಿಗೆ ಬೆರಳು ತಾಕಿ
ನೆರಳ ಬದಿಗೆ ನೆರಳಿರೆ
ಕಡಲ ಮರಳು ಒಡಲ ಮರುಳು
ಹದವ ಪಡೆವುದಾಗಲೇ..

ನಿನ್ನ ಪಡೆದು ನನ್ನೆ ಕಳೆವ
ಭಾವಕೇನು ಹೇಳಲಿ
ಹೆಜ್ಜೆ ಅಳಿವ ಹಾದಿಯಲ್ಲಿ
ಹೆಸರ ಹಂಗೂ ಕಳೆಯಲಿ..

Saturday, December 18, 2010

'ಚಕ್ರಬಂಧ'ದಲ್ಲಿ ಒಂದು ಕೈ, ಒಂದು ಟ್ರೈ ...



ಜೋಶಿಯವರ 'ಪರಾಗಸ್ಪರ್ಶ' ಓದಿದ ಮೇಲೆ ನನಗೂ ಕೊಂಚ ಸರ್ಕಸ್ಸು ಮಾಡಬೇಕೆನಿಸಿದ್ದರ ಫಲವೇ ಈ ಪುಟ್ಟ ಪ್ರಯತ್ನ. ಪುಟ್ಟದೊಂದು ನಾಕು ಸಾಲಿನ ಕಾವ್ಯ, ಚಿತ್ರದಲ್ಲೂ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುತ್ತ 'ಚಿತ್ರಕಾವ್ಯ'ವೂ ಆಗಿಬಿಡುತ್ತದೆ.ಅಂತಹ 'ಚಿತ್ರಕಾವ್ಯ' ಗಳ ಸಾಲಲ್ಲಿ ಚಕ್ರಬಂಧವೂ ಒಂದು. ಜೋಶಿಯವರೇ ಹೇಳುವಂತೆ 'ಇದನ್ನು ಚಕ್ರಬಂಧದ ರೀತಿಯಲ್ಲಿ ಓದಬಹುದು.ಮೊದಲ ಮೂರು ಸಾಲುಗಳು ಚಕ್ರದ ಆರು ಅರ(spoke)ಗಳಾಗುತ್ತವೆ. ಕೊನೆಯ ಸಾಲು ಚಕ್ರದ ಪರಿಧಿಯಲ್ಲಿ ಪ್ರದಕ್ಷಿಣಾಕಾರ ಸಾಗುತ್ತದೆ'.
ಸಾಲುಗಳು ಇಲ್ಲಿವೆ, ಚಿತ್ರ ಕೆಳಗಿದೆ:

ಸಾಮವಿದುವೇ ಶಕ್ರನುಡಿ ಮಧುಭಾಮಿನೀ ಚಿತ್ತಕಮಗ
ಕಾವ್ಯನಾಗರಿ ಸಂಬಂಧಸುಮಗಂಧದಂಕಿತದೂಂಕು ಮೋದ
ಬಾಳಿಯದರಲಿ ಧರಣಿಮಣಿ ನುಡಿಚಂಚಲರುರ್ಕನು
ನುಸಿದು ಸಾವಿರ ಕಾಲಕು ಬಾಳಲಿಂಗನ್ನಡದ ಹಾಲ್ಜೇನು..

ಸರಳಗನ್ನಡದ ಕನ್ನಡಿಯಲ್ಲಿ ನೋಡಿದರೆ:

ಮಧು ಭಾಮಿನಿಯಂತಿರುವ, ಚಿತ್ತಕ್ಕೆ ಸಂಭ್ರಮ (ಅಮಗ) ಕೊಡುವ, ದೇವರ ನುಡಿಯಾದ(ಶಕ್ರ ನುಡಿ) ಇದುವೆ (ಕನ್ನಡವೇ) ನಮಗೆ ಸಾಮ (ಗುನುಗುನಿಸಲಾಗುವ ಸರಳ ವೇದ). ಸಂಸ್ಕೃತವು ದೇವನಾಗರಿ (ದೇವರ ನಗರಕ್ಕೆ ಸೀಮಿತವಾದದ್ದು) ಆದರೆ ನಮ್ಮದು ಅತ್ಯುಚ್ಛ ಕವಿ ಪರಂಪರೆ ಹೊಂದಿರುವ , ಏಳು ಜ್ಞಾನಪೀಠಗಳನ್ನೂ ಪಡೆದ ಕಾವ್ಯನಾಗರಿ. ಸಂಬಂಧಗಳೆಂಬ ಹೂವಿನ ಗಂಧ ಮೆತ್ತಿಕೊಂಡಿರುವ ಈ ಕನ್ನಡದ ಧ್ಯಾನವು(ಊಂಕು) ನಮಗೆ ಮೋದ. ನುಡಿ-ಚಂಚಲರ (ಕನ್ನಡಿಗರಾಗಿದ್ದೂ ಕನ್ನಡ ಮಾತಾಡದೆ , ಬಾರದ ಭಾಷೆಯ ಬಡಬಡಾಯಿಸುವವರ ) ಜಂಭವನ್ನು (ಉರ್ಕನ್ನು) ತೂತುಮಾಡಿ (ನುಸಿದು ) , ಭೂಮಿಗೆ ಮಣಿಯಂತಿರುವ(ಧರಣಿ ಮಣಿ) ಇಂಪು ಕನ್ನಡದ(ಇಂಗನ್ನಡದ) ಹಾಲ್ಜೇನು ಸಾವಿರ ಕಾಲಕ್ಕೂ ಬಾಳಲಿ.

ಇಷ್ಟೆಲ್ಲಾ ಹೆಣಗಾಡಿದ ಮೇಲೆ ನನ್ನದೂ ಒಂದು 'copyright signature ' ಇಲ್ಲದಿದ್ದರೆ ಏನು ಚೆನ್ನ? ಅಲ್ವಾ, ಕೆಂಪು ಶಾಯಿಯಲ್ಲೇ ಹಾಕುತ್ತೇನೆ ಬಿಡಿ :-)
ಒಪ್ಪಿಸಿಕೊಳ್ಳಿ..ವಿನಾಯಕ ಕುರುವೇರಿ ರಚಿತ ಚಕ್ರಬಂಧಮಿದಂ!