Friday, August 8, 2008

SEZ

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು
ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು
ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು
ಕೊನೆಯಿರದ ಅವಲಂಬನೆಯ ಕೊರಗು..

ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ
ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ
ಗುರಿಯಿರದ ಕಲ್ಲುಗಳು ಒಂದಾದ ಮೇಲೊಂದು
ತಗುಲಿದ್ದು ಹಣ್ಣಿಗಲ್ಲ..ತನ್ನ ಎದೆಗೆ !

ಕೆಲವರೆಂದರು ಹೀಗೆ- ಹಣ್ಣೇಕೆ ನಿಮಗೆ?
ತಿನ್ನುವುದು ಹುಳಹುಪ್ಪಟೆಗಳ ನೀವು
ಮಾಮರವೆ ಬೇಕೇನು? ಮರ ನಮಗೆ ಬಿಟ್ಟುಕೊಡಿ
ಪುಟ್ಟ ಪಂಜರವೊಂದ ಕೊಡಿಸುತ್ತೇವೆ ನಾವು..

ಕೆಲವರಷ್ಟೂ ಇಲ್ಲ, ಕೊಕ್ಕೆ ದೊಣ್ಣೆಯ ಬೀಸು
ನೆಲವದುರುವಂತೆ ಮರದ ಗೆಲ್ಗಳ ಕುಲುಕು..
ಬಿದ್ದದ್ದು ಹಣ್ಣಲ್ಲ ,ನನ್ನ ವಂಶ ಕುಡಿಗಳೆ ಎಲ್ಲ
ಉದುರಿದುದು ನನ್ನೊಡಲ ಮರಿಗಳಾ ಬದುಕು..

ತೆರೆದ ಬಾನೊಂದೆದೆ ಹಾರಿಬಿಡಲೇನು?
ನನ್ನದೆಲ್ಲವ ತೊರೆದು 'ಅವ' ಹೇಳ್ದ ದಾರಿಯಲಿ ಸಾಗಿ
ಬದುಕಿ ಸತ್ತಂತಿರಲೇನು?


ಅಥವಾ ನನ್ನ ಕಂದಮ್ಮಗಳ ಬಿಗಿದಪ್ಪಿ ಎದುರಿಸಲೇನು?
ಕಲ್ಲು,ದೊಣ್ಣೆ,ಏಟು,ಬೀಸುಗಳಿಗೆ ಎದೆಯೊಡ್ಡಿ ಹೋರಾಡಿ
ಸತ್ತು ಬದುಕಿರಲೇನು?

-ವಿನಾಯಕ ಕುರುವೇರಿ

Sunday, June 22, 2008

ಒಲವಿನದೊಂದು ಗೂಡು ಕಟ್ಟಿ....

ಒಲವಿಗೊಂದಿರಲಿ ಸಾಕ್ಷಾತ್ಕಾರ,
ಆರಿತೊ ಅರಿಯದೆಯೊ ಬಿದ್ದ ಮೇಲೆ
ಪ್ರೀತಿಯ ಹೊಳೆಯಲ್ಲಿ,
ಮುಳುಗಿದರೇನು,ತೇಲಿದರೇನು..
ಇದ್ದೇ ಇದೆ ಹನಿ ನೀರ ಪ್ರೀತಿಯಪ್ಪುಗೆ
ಮೈತಂಪಿನ ಪುಳಕ
ಮನದಣಿಯೆ ನೆನೆ ನೆನೆದು
ತನ್ನತನವ ಕಂಡುಕೊಳ್ಳುವ ಬಗೆಗೋಸ್ಕರ
ಒಲವಿಗೊಂದಿರಲಿ ಸಾಕ್ಷಾತ್ಕಾರ..

ಒಲವಿಗೊಂದಿರಲಿ ಮೃದು ಝೇಂಕಾರ
ಪ್ರೀತಿಯ ಮಕರಂದವನ್ನು
ಮೈಗೆಲ್ಲ ಮೆತ್ತಿಕೊಂಡು ಗುಂಇಗುಡುವ ದುಂಬಿಯಂತೆ
ಹೀರಿಸಿಕೊಂಡ ಹೂವಿಗೂ
ಸಾಂತ್ವನದ ಸಾರ್ಥಕತೆ ಇತ್ತಂತೆ
ಆರಳುವಿಕೆಗೆ ಅರ್ಥ ಕೊಟ್ಟಂತೆ
ಹೊಗಳುತ್ತ ಬನವೆಲ್ಲ ಸುತ್ತಾಡಿದಂತೆ
ಒಲವಿಗೊಂದಿರಲಿ ಮೃದು ಝೇಂಕಾರ...

ಒಲವಿಗೊಂದಿರಲಿ ಆತ್ಮಾಧಾರ
ಹಂಚಿಕೊಳ್ಳುವ ಹೃದಯಗಳಿಗೆ
ಸ್ಫೂರ್ತಿಯಿತ್ತು , ಸುಖವನಿತ್ತು
ಆದರಿಸಿ ಪಾಲಿಸುವ
ಮಾತೆಯ ಮಮತೆಗೆ
ಕನ್ನಡಿ ಹಿಡಿಯುವ,
ಬಿಂಬ ಪ್ರತಿಬಿಂಬಗಳಂತೆ
ಜೋಡಿಯಾಗಿ ಜೋಡಿಸುವ ಆಶಯಕೆ
ಒಲವಿಗೊಂದಿರಲಿ ಆತ್ಮಾಧಾರ...

- ವಿನೂ..

Friday, August 24, 2007

ನನ್ನ ಮುಡಿಯ ಮಲ್ಲಿಗೆ..


ನನ್ನ ಮುಡಿಯ ಮಲ್ಲಿಗೆಯಲಿ
ನನ್ನತನವೆ ಅಡಗಿದೆ
ಅಂದದೊಡನೆ ಬೆರೆತ ಗಂಧ
ನನಗು ಅದಕು ತಿಳಿದಿದೆ


ಎಲ್ಲೊ ಒಂದು ತೊರೆಯ ಜಲದ
ಸಾಕುವಿಕೆಗೆ ಚಿಗುರಿದೆ
ಭೂಮಿತಾಯ ಅಪ್ಪುಗೆಯಲಿ
ಒಲುಮೆಯೊಡಲಲಡಗಿದೆ


ಜಾವದೊಡೆಯ ಒಲವ ಗೆಳೆಯ
ರವಿಯ ಬರವಿಗರಳಿದೆ
ಮಧುರ ಸಮಯ ಮಧುರ ಸ್ಪರ್ಶ
ಮಧುರ ಮಿಲನಕುರುಳಿದೆ


ಒಲವ ಪಾಠ ಪ್ರಣಯದೂಟ
ಹರೆಯ ಬಂದ ಮಲ್ಲಿಗೆ
ಬೆಳಕ ಕೊಟ್ಟ ರವಿಗೆರೆದಳು
ಪರಿಮಳಗಳ ಮೆಲ್ಲಗೆ


ಮತ್ತೆ ಬಂದಳೆನ್ನ ಮುಡಿಗೆ
ಎಲ್ಲ ಬಿಟ್ಟ ವಿರಹದಿ
ನನ್ನ ಗಂಧವೆಲ್ಲ ನಿನಗೆ
ಅಂದಳೆನ್ನ ತರಹದಿ


ನನ್ನ ಮುಡಿಯ ಮಲ್ಲಿಗೆಯಲಿ
ನನ್ನದೇನೆ ಕಂಪನ
ಒಂದು ದಿನದ ಬಾಳ್ವೆಯೊಳಗೆ
ನನಗೆ ಅವಳೆ ಸಾಂತ್ವನ


- ವಿನಾಯಕ

Tuesday, January 16, 2007

ರಾಧೆಗೊಬ್ಬನಿದ್ದ ಕೃಷ್ಣ


ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು
ಒಡಲ ಬೇಗೆಗೆ ಇಂದು ಬೇಡ ಮೃಗತೃಷ್ಣ


ಹರಿವ ಯಮುನೆಗು ಇಲ್ಲಿ ನಿನ್ನ ವಿರಹದ ತಪನ
ಗೋಪ ನಂದನದಲ್ಲು ಇಲ್ಲ ಚಿಲಿಪಿಲಿ ರಣನ
ಹೂಗೆ ಧನ್ಯತೆಯಿಲ್ಲ ನೀ ಬರದೆ ರಂಗ
ಹಸಿರ ತೃಣಗಳಿಗಿಲ್ಲ ನಿನ್ನ ಪಾದಸ್ಪರ್ಶ
ಮೇವ ಗೋಗಳಿಗಿಲ್ಲ ನಿನ್ನ ಕೊಳಲಿನ ಕರ್ಷ
ಮಂಕು ಬಡಿದಂತಿಹವು ಜಿಂಕೆ ಸಾರಂಗ


ನನ್ನತನಕಿನ್ನೆಲ್ಲ ವಿಪ್ರಲಂಭದ ಲೇಪ
ಒಲವ ಛಾದನದೊಳಗೆ ನಿನ್ನ ಮಂಗಳರೂಪ
ಕಾಯ್ವ ಆಟವು ಸಾಕು ಬಾರೊ ನನ್ನಿನಿಯ
ನಿನ್ನ ಕೊರಳಿಗೆ ಎರಗಿ ನಿನ್ನ ಕೊಳಲಿಗೆ ಕರಗಿ
ನಿನ್ನ ಬೆರಳೆಡೆ ನಲಗಿ ನಿನ್ನ ನೆರಳಡಿ ಮಲಗಿ
ಶೃತಿಸಿ ಮೈಮರೆಸೆನಗೆ ನಿನ್ನ ಸವಿದನಿಯ


ರವಿಯ ಕಿರಣಕೆ ನಭವು ಕಾದು ಕುಳಿತಿದೆಯಂತೆ
ಮಳೆಯ ಚಿಮುಕಿಗೆ ಹಸಿರು ಇದಿರು ನೋಡ್ತಿದೆಯಂತೆ
ಕಾಯ್ವ ಪರಿಧಿಗಳೊಳಗೆ ಇಹರು ನನ್ನಂತೆ
ಒಡಲೊಳರಲುವ ನುಡಿಯು ದನಿಗೆ ಹಾತೊರೆವಂತೆ
ಸಡಿಲ ಮನಸಿನ ಕನಸು ರೂಪವಾಶಿಸುವಂತೆ
ಪುರುಷ ಪ್ರಕೃತಿಗೆ ಒಲಿವನದಕೆ ನಾ ನಿಂತೆ..


ಅವನ ಕಾಯುತ ನಿಂತೆ ..ಭೂಮಿಯಿರುವಂತೆ...

ಒಂಥರಾ ಪ್ರೀತಿ...


ಒಂದು ಕಿಟಕಿ ಒಂದು ಬೆಳಗು
ಕೋಣೆಯೆಲ್ಲ ಬೆಳಕು
ಒಂದು ಹಾಡು ಒಂದು ಗುನುಗು
ಮನದೊಳಿಡಿಯೆ ನೆನಪು...


ಒಂದು ಹಾಳೆ ಒಂದು ಪೆನ್ನು
ಬರೆಯಲೇನು ಕವನ?
ಒಂದು ಗೆರೆಯ ಒಂದು ಪದಕೆ
ನೆನಪು ಮತ್ತೆ ಚಲನ


ಒಂದು ಸಂಜೆ ಒಂದು ಕಡಲು
ಮತ್ತೆ ನಾನು-ಅವಳು
ಒಂದು ನೋಟ ಒಂದು ಒಲವು
ಮಾತು ಹರಳು ಹರಳು


ಒಂದು ಗಲ್ಲ ಒಂದು ಮುತ್ತು
ಮಾತು ಮುಗಿಸೊ ಮೊದಲು
ಒಂದು ಅಲೆಯ ಒಂದೆ ಝೋಕು
ಒದ್ದೆ ಎಲ್ಲ ಒಡಲು


ಒಂದು ಮೌನ ಒಂದು ಉಸಿರು
ಲಜ್ಜೆ ಮುಡಿಯಲವಳು
ಒಂದು ನೋಟ ಒಂದು ಸ್ಪರ್ಷ
ನೆಲವು ಮನವು ಮರಳು


ಒಂದು ಫೋನು ಒಂದು ರಿಂಗು
ವಾಸ್ತವತೆಗೆ ತಂದು
ಮತ್ತೆ ನನ್ನ-ಅವಳ ಮಾತು
ಮತ್ತೆ ಒಲವ ಸಿಂಧು...