Saturday, June 5, 2010

ಕಿರುಗತೆ: ತಯಾರಿ

ಆವತ್ತು ಜೂನ್ ೪.
ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ರಾತ್ರಿವರೆಗೂ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು ಬೇಕಾಗುತ್ತೆ ಅಂತ ಒಂದಷ್ಟು ಇ-ಪೇಜ್ ಗಳ ಪ್ರಿಂಟ್ ಔಟೂ ತೆಗೆದುಕೊಂಡ..ರಾತ್ರಿ ಸುಮಾರು ಹೊತ್ತು ವರೆಗೂ ಓದುತ್ತ ಕುಳಿತು ಮಲಗಲು ಹೊರಟಾಗ ತನ್ನ ಕಂಪ್ಯೂಟರ್ ಇನ್ನೂ ಆನ್ ಆಗಿರುವುದು ನೆನಪಾಯಿತು.. ಪರವಾಗಿಲ್ಲ, ನಾಳೆ ಹೇಗಿದ್ದರೂ ಬೇಗ ಏಳಬೇಕಲ್ಲ, ಮತ್ತೆ ರಿಸ್ಟಾರ್ಟ್ ಮಾಡಲು ಬಹಳ ಸಮಯ ಹಿಡಿಯುತ್ತೆ ಅಂತ ಯೋಚಿಸಿ ಅಲ್ಲೇ ನಿದ್ದೆ ಹೋದ..

ಬೆಳಗ್ಗೆ ಎದ್ದಿದ್ದು ಕೊಂಚ ತಡವೇ ಆಯ್ತು.. ಎದ್ದು ಕಿಟಕಿ ತೆರೆದಾಗ ತಣ್ಣನೆ ತಂಗಾಳಿ. ಜಾಸ್ತಿ ಹೊತ್ತು ಕಿಟಕಿ ತೆರೆದಿಟ್ಟರೆ ಎ.ಸಿ. ಯ ತಂಪು ಕೆಟ್ಟು ಹೋದೀತೆಂದು ಮತ್ತೆ ಕಿಟಕಿ ಮುಚ್ಚಿ , ರಾತ್ರಿ ಚಾರ್ಜಿಗಿಟ್ಟಿದ್ದ ಮೊಬೈಲನ್ನು ಎತ್ತಿ ಇನ್ನು ಒಂದು ಗಂಟೆಯಲ್ಲಿ ನೆನಪಿಸುವಂತೆ ಟೈಮರ್ ಇಟ್ಟು ತನ್ನ ನಿತ್ಯ ಕರ್ಮಕ್ಕೆ ತೆರಳಿದ.
ಬಾತ್ರೂಮಿನಲ್ಲಿ ಕಳೆದ ಒಂದು ತಿಂಗಳಿಂದ ಇದ್ದ ನಳ್ಳಿ ಲೀಕೇಜನ್ನು ಗಮನಿಸಿ, ಇವತ್ತೂ ಕೂಡ ಎಂದಿನಂತೆ ನೆಗ್ಲೆಕ್ಟ್ ಮಾಡಿ ಶವರಿನತ್ತ ತೆರಳಿದ..ಗೀಸರ್ ತುಂಬಾನೇ ಹೊತ್ತು ಆನ್ ಇಟ್ಟಿದ್ದರಿಂದಲೋ ಏನೋ ನೀರು ಸಿಕ್ಕಾಪಟ್ಟೆ ಬಿಸಿ ಆಗಿತ್ತು.. ಒಂದೈದು ನಿಮಿಷ ಬಿಸಿ ನೀರೆಲ್ಲ ಕೊಂಚ ತಣ್ಣಗಾಗುವಷ್ಟು ಹೊತ್ತು ಹಾಗೆಯೇ ಹರಿಯಬಿಡಬೇಕಾಯ್ತು.

ಎಲ್ಲ ಮುಗಿಸಿಕೊಂಡವನೇ ನೇರವಾಗಿ ಕಂಪ್ಯೂಟರ್ ನತ್ತ ಬಂದ. ತಾನು ನಿನ್ನೆ ಓಪನ್ ಮಾಡಿಟ್ಟ ಪೇಜ್ ಗಳು ಇನ್ನೂ ಹಾಗೆಯೆ ಇರುವುದನ್ನು ಕಂಡು ತನ್ನ ಸಮಯ ಉಳಿತಾಯವಾದದ್ದಕ್ಕೆ ತೃಪ್ತಿ ಪಟ್ಟುಕೊಂಡ. ಟೋಸ್ಟರ್ ನಲ್ಲಿಟ್ಟಿದ್ದ ಬ್ರೆಡ್ಡು ಟೋಸ್ಟ್ ಆಗಿ ಸೈರನ್ ಹೊಡೆದು ಕೊಂಡಾಗ ಒಂದು ಕ್ಷಣ ಅಲರಾಂ ಆಯಿತೇನೋ ಅಂತ ಗಾಬರಿಪಟ್ಟು ಗಂಟೆ ನೋಡಿ ಇನ್ನೂ ಹದಿನೈದು ನಿಮಿಷ ಇದೆ ಅಂತ ಆಮೇಲೆ ಅರಿತುಕೊಂಡು ಮತ್ತೆ ನೋಟ್ಸ್ ಮಾಡಲು ಮುಂದುವರೆಸಿದ.

ಸರಿ, ಹೊರಡುವ ಸಮಯವೂ ಬಂತು.. ಈವತ್ತು ಆಫೀಸಿಗೆ ಹೋಗುವಾಗ ಡೌನ್ ಟೌನ್ ನಿಂದ ಹೋಗಬಾರದು, ಟ್ರಾಫಿಕ್ ಜಾಸ್ತಿ ಇದ್ದರೆ ಕಷ್ಟ, ೫ ಮೈಲಿ ಜಾಸ್ತಿಯದ್ರು ಸರಿ , ಥರ್ಡ್ ಎಕ್ಸಿಟ್ ಮೂಲಕವೇ ಹೋಗೋದು ಅಂತ ಅನ್ಕೊಂಡಿದ್ದ. ಗಡಿಬಿಡಿಯಲ್ಲಿ ಕಾರು ಹತ್ತಿ ಚಾಲೂ ಮಾಡಿದಾಗ ಮನೆಯಲ್ಲಿ ಕಂಪ್ಯೂಟರ್ , ಎ.ಸಿ. ಯಾವುದನ್ನೂ ಆಫ್ ಮಾಡಿಲ್ಲ ಅನ್ನೋದು ನೆನಪಾಯಿತು.. ಮತ್ತೆ ಮನೆಕಡೆ ಹೋದರೆ ತಡವಾಗುತ್ತೆ ಅಂತ ನೇರ ಆಫೀಸಿನ ಕಡೆಗೇ ಹೊರಟು ಬಿಟ್ಟ..ವಿ -೮ ಇಂಜಿನ್ ನ ಟೊಯೋಟಾ ಕಾರು..ಎಂಭತ್ತರಲ್ಲಿ ಹೋದರೆ ಹತ್ತೇ ನಿಮಿಷದಲ್ಲಿ ಆಫೀಸಿನಲ್ಲಿ..

ನೇರವಾಗಿ ತನ್ನ ಸಿಸ್ಟಮ್ ಕಡೆಗೆ ತೆರಳಿ , ಅದಾಗಲೇ ಓಪನ್ ಮಾಡಿ ಇಟ್ಟಿದ್ದ , ಇವತ್ತಿಗೆ ಬೇಕಾದ ಪೋಸ್ಟರ್ ಗಳ ಪ್ರಿಂಟ್ ಔಟ್ ಗಳನ್ನೂ, ಹ್ಯಾಂಡ್ ಔಟ್ ಗಳನ್ನೂ ಪ್ರಿಂಟ್ ಗೆ ಕೊಟ್ಟು, ಕಮ್ಯುನಿಟಿ ಹಾಲ್ ನ ಸೌಂಡ್ ಸಿಸ್ಟಂ, ಎ.ಸಿ. ಎಲ್ಲ ಚೆಕ್ ಮಾಡಿ ಬಂದ.

ಅಂತೂ ಇಂತೂ ಸಮಯಕ್ಕೆ ಸರಿಯಾಗಿ ಜನ ಜಮಾಯಿಸಿದ್ದರು.. ಜೋ ತನಗೇ ಅಚ್ಚರಿಯಾಗುವಷ್ಟು ಸಲೀಸಾಗಿ ವಿಷಯಗಳನ್ನು ಪ್ರೆಸೆಂಟ್ ಮಾಡಿದ.. ಜನರಿಂದಲೂ ಒಳ್ಳೆಯ ಪ್ರಶಂಸೆ ಬಂತು.. ಕಂಪನಿ ಯವರು ಇವನ ಪರಿಸರ ಕಾಳಜಿಯ ವಿಚಾರ ಮಂಥನಕ್ಕೆ ಮರುಳಾಗಿ ಆ ವರ್ಷದ ಪರಿಸರ ಕಾಳಜಿ ಪ್ರಶಸ್ತಿ ಯನ್ನೂ ಅವನಿಗೆ ಕೊಡುವುದಾಗಿ ಅನೌನ್ಸ್ ಮಾಡಿದ್ರು..

ಜೋ ತನಗೆ ಸಿಕ್ಕಿದ ಈ ಗೌರವಕ್ಕೆ ಹೆಮ್ಮೆ ಪಡುತ್ತ ನಿಧಾನಕ್ಕೆ ತನ್ನ ಡೆಸ್ಕ್ ನತ್ತ ತೆರಳಿದ.. ಮುಂದಿನ ವಾರ ನಗರದ ಟೌನ್ ಹಾಲ್ ನಲ್ಲಿ ಕೊಡಬೇಕಾದ ಪ್ರೆಸೆಂಟೇಶನ್ ಗೆ ನಾಳೆಯಿಂದಲೇ ತಯಾರಿ ಶುರು ಮಾಡಬೇಕು ಅಂದುಕೊಳ್ತಾ ಇವತ್ತಿನ ಭಾಷಣವನ್ನು ತನ್ನ ಬ್ಲಾಗ್ ನಲ್ಲಿ ಇಳಿಸಲು ಹೊರಟ..

ನಿನ್ನೆ ತೆರೆದಿಟ್ಟಿದ್ದ ವಿಶ್ವ ಪರಿಸರ ದಿನದ ವೆಬ್ ಸೈಟು ಅಲ್ಲೇ ಎಲ್ಲೋ ಮೂಲೆಯಲ್ಲಿ ಮಿನಿಮೈಜ್ ಆಗಿ ತನ್ನ ಪಾಡಿಗೆ ತಾನು ಮಕಾಡೆ ಮಲಗಿಕೊಂಡಿತ್ತು...






Tuesday, June 1, 2010

ಸವೆದದ್ದಷ್ಟೇ ದಾರಿ... ?

ಹೊರಟಿದ್ದೇನೋ ನಿಜ ನಾನು
ಅದಾವುದೋ ಗಮ್ಯದೆಡೆಗೆ..
ಹೆಜ್ಜೆಯ ಮುಂದೊಂದು ಹೆಜ್ಜೆ
ದಾರಿ ಯಾವುದೆಂದು ತಿಳಿಯಲಿಲ್ಲ..

ಮತ್ತೊಮ್ಮೆ ನನ್ನನ್ನೇ ಕೇಳಿಕೊಂಡೆ
ಹೋಗಲೇಬೇಕ? ಹೋದರೇನು ದಕ್ಕೀತು
ಅಥವಾ ದಕ್ಕಿದರೆ ಮಾತ್ರ ಹೋದದಕ್ಕೆ ಬೆಲೆಯ?
ಇಷ್ಟಕ್ಕೂ , ದಾರಿ ಯಾವುದೆಂದು ಇನ್ನೂ ತಿಳಿಯಲಿಲ್ಲ..

ಯಾರೋ ಮುಂದೊಬ್ಬ ಹೋಗಿದ್ದನಂತೆ
ಅವನು ಹೆಜ್ಜೆ ಇರಿಸಿದಲ್ಲಿ ನೆಲ ಸ್ವಲ್ಪ ಸವೆದಿದೆ
ಅದುವೇ ದಾರಿ ಅಂತ ಜನ ಅನ್ನುತ್ತಾರೆ
ನನಗದು ದಾರಿ ಅಂತ ಅನಿಸುವುದಿಲ್ಲ

ಅವನು ಹೋದ ಮಾತ್ರಕ್ಕೆ ಅದು ದಾರಿಯ?
ಅವನು ಹೋಗದೆ ನಾನು ಹೋಗಿದ್ದರೆ?
ಅಥವಾ ನಾನೇ ಬೇರೆಯದೇ ದಿಕ್ಕಿನಲ್ಲಿ ನಡೆದಿದ್ದರೆ?
ದಾರಿ ಇನ್ನೂ ಇರುತ್ತಿತ್ತ? ಹಾಗಂತ ಮತ್ತೆ ಕೇಳಿಕೊಂಡೆ

ಸವೆದದ್ದಷ್ಟೇ ದಾರಿಯೆಂದಾದರೆ
ಅವೆಲ್ಲ ನನ್ನನ್ನು ಗಮ್ಯಕ್ಕೆ ಕೊಂಡೊಯ್ಯಬಲ್ಲವಾ?
ಅಥವಾ ಹೇಗೆ ನಡೆದರೂ ಗಮ್ಯವನ್ನು
ತಲುಪಬಲ್ಲೆ ಎಂದಾದರೆ ದಾರಿಯ ಹಂಗು ಬೇಕಾ?

ಅವ ನಡೆದಲ್ಲಿ ನಾ ನಡೆದರೆ
ಅದು ನನಗೆ ದಾರಿ, ಆದರೆ ಅವನಿಗೆ?
ದಾರಿಯ ಹಂಗಿದ್ದರೆ ತಾನೇ ಕಚ್ಚಿಕೊಳ್ಳುವುದು
ಸರಿ ದಾರಿ, ತಪ್ಪು ದಾರಿ ಎಂಬ ಸಂಕೀರ್ಣತೆಗಳೆಲ್ಲ?

ಕಾಡುವ ಪ್ರಶ್ನೆಗಳನ್ನೆಲ್ಲ ಇದ್ದಲ್ಲೇ ಬಿಟ್ಟು
ಮುಂದೆ ನಡೆಹಾಕಿದೆ..ಹೆಜ್ಜೆಯೊಂದಿಟ್ಟಂತೆ
ಮತ್ತೆ ದಾರಿ ಯಾವುದೆಂದು ತಿಳಿಯಲಿಲ್ಲ..

ಪರವಾಗಿಲ್ಲ, ಈಗ ದಾರಿ ಯಾವುದೆಂದು
.....ತಿಳಿಯುವುದೂ ಬೇಕಾಗಿಲ್ಲ...

Sunday, May 9, 2010

ಒಲವಿನೋಲೆ ೨ - ನಮ್ಮೊಲವ ಲೆಕ್ಕದಲ್ಲಿ ನನಗೆಷ್ಟು ಮಾರ್ಕ್ಸು, ಮತ್ತು ನಿನಗೆಷ್ಟು?

ಗೊಂದಲಗೂಡಿನ ಭಾವಯಾನವೇ ,

ಬಾನ್ಬೆಳದಿಂಗಳು ಬಿತ್ತರಿಸಿದ ಬೆಳಕನ್ನೆಲ್ಲ ಬಾಚಿ ಬೊಗಸೆಯಲ್ಲವಿತಿರಿಸಿ ಬ್ರಹ್ಮ ಬಾಳ್ಕೊಟ್ಟ ಭಾಮಿನಿ ನೀನೇನೆ ಅಂತ ನಾ ಕನವರಿಸುತ್ತ ಕೂರುತ್ತಿದ್ದ ರಾತ್ರಿಗಳಿದ್ದವಲ್ಲ, ಅವೆಲ್ಲ ನಿನ್ನವಾ ಅಥವಾ ನನ್ನವಾ ಅಂತ ಇನ್ನೂ ಕೊಂಚ ಕಸಿವಿಸಿ.. ಆದ್ರೂ ನಿನ್ನಿರವಿನ ಘಳಿಗೆಗಳಲ್ಲಿನ ಕಸಿವಿಸಿಗಳಿಗಿಂತ ಇದು ಕೊಂಚ ವಾಸಿಯೇನೋ.

ನೀನಂದ್ರೆ ಹಂಗೇ ಅಲ್ವ.. ಕಸಿವಿಸಿ ರಾಜಕುಮಾರಿ.. ನೆನಪಿದ್ಯಾ? ಆವತ್ತು ನನ್ನ ಹುಟ್ಟುಹಬ್ಬದ ದಿನ ಕಾಲೇಜ್ ಕ್ಯಾಂಟೀನಲ್ಲಿ ಪುಟ್ಟ 'ಶೇರೂ' ನ ಗೊಂಬೆ ಕೈಗಿಟ್ಟು ನೀನಾವತ್ತು ಕೇಳಿದ್ದೆ - 'ಶೇರೂ ಈಗ ನನ್ನವನ? ನಿನ್ನವನ? ' ಅಂತ. . ನಾನು ಏನಂದರೂ ಆವತ್ತು ನಿನ್ನೆದುರು ಸೋಲುತ್ತಿದ್ದೆ. "ಥತ್! ನೀನು ಕೊಡುವ ಪ್ರಶ್ನೆಗಳೇ ಇಂಥವು ನೋಡು" ಅಂತ ನಿನ್ನ ಬಾಯಿ ಮುಚ್ಚಿಸಿದ್ದೆ.

ಈಗ ಮತ್ತದೇ ಪ್ರಶ್ನೆ , ನೀನಿಲ್ಲದಾಗಲೂ... ನಿನ್ನ ಬಗ್ಗೆ ನಾ ಕಂಡ ಕನಸುಗಳೆಲ್ಲ ನಿನ್ನವಾ ಅಥವಾ ನನ್ನವಾ? ಉತ್ತರಿಸುವ ಸರದಿ ನಿನ್ನದು.

' ಛಿ, ಹೋಗೋ.. ಹೇಳಲ್ಲ ನಾನು" ಅಂತೇನಾದ್ರೂ ಹೇಳಿ ತಪ್ಪಿಸ್ಕೊಂಡ್ರೆ ಜೋಕೆ, ನಿನ್ನ ಜ್ಹುಮುಕಿಯೊಂದು ಇನ್ನೂ ನನ್ನ ಬುಕ್ ಶೆಲ್ಫ್ ನಲ್ಲಿ ಜೋತಾಡುತ್ತಿದೆ , ನೆನಪಿಟ್ಕೋ.. ಅಂದ ಹಾಗೆ ಅದೆಷ್ಟು ತಂಟೆ ಕೊಡುತ್ತೆ ಗೊತ್ತ..ಥೇಟ್ ನಿನ್ನ ಥರಾನೇ. ಒಂಚೂರು ಗಾಳಿ ಬಂದರು ಸಾಕು, ಅದರ ಕುಲುಕು ನಿನ್ನನ್ನೇ ನೆನಪಿಸಿಬಿಡುತ್ತೆ..

ತು ತೋ, ನಹಿ ಹೈ ಲೇಕಿನ್

ತೇರಿ ಮುಸ್ಕುರಾಹತ್ ಹೈ ..

ಚೆಹ್ರಾ ಕಹೀನ್ ನಹೀ ಹೈ ಪರ್

ತೇರಿ ಆಹಟೇ ಹೈ ...

ಆದ್ರೆ ಮೊನ್ನೆಯ ಕ್ಲಾಸಲ್ಲಿ ನೀನೆ ಕಸಿವಿಸಿಗೆ ಬಿದ್ದೆ ನೋಡು.. ಯಾರೋ ಒಬ್ಬ 'ಕಿರಣ್ ' ಅನ್ನೋ ಸೀನಿಯರ್ ನ ಆಟೋಗ್ರಾಫ್ ನಲ್ಲಿ ನೀನೇನೋ ಬ್ರದರ್ ಸೆಂಟಿಮೆಂಟ್ ಕವನ ಗೀಚಿದ್ದೆಯಲ್ಲ..ಮತ್ತಿನ್ಯಾರೋ ಅದನ್ನೋದಿ ಈ ಕಿರಣ್ ಹುಡುಗಾ ಅಲ್ಲ, ಹುಡುಗಿ ಕಣೆ ಅಂತ ನಿನ್ನನ್ನ ಗೋಗರೆದಿದ್ದರಲ್ಲ... ಆ ದಿವಸ ನಿನ್ನ ಕೆನ್ನೆಯ ಕೆಂಪು ನಾನೂ ನೋಡಿದ್ದೆ. ಕ್ಯಾಂಟೀನಲ್ಲಿ ನಾನವತ್ತು ನಿನ್ನನ್ನು ಇದೇ ಕಾರಣಕ್ಕೆ ರೇಗಿಸಿದ್ದಾಗ ಮೆಲ್ಲನೆ ನಿನ್ನ ಬೆಣ್ಣೆಗಾಲಲ್ಲಿ ಒದ್ದೆಯಲ್ಲ, ಆ ಸಿಹಿ ಈಗಲೂ ನನ್ನಲ್ಲಿದೆ. ನಿನ್ನ ಗೆಳತಿಯರೆಲ್ಲ ರೇಗಿಸಿದಾಗ ಅವುಡುಗಚ್ಚಿ ತಡೆಹಿಡಿದುಕೊಂಡಿದ್ದನ್ನೆಲ್ಲ ಈ ಗುಬ್ಬಚ್ಚಿ ಮೇಲೆ ಪ್ರಯೋಗಿಸುತ್ತಿರುತ್ತಿಯಲ್ಲೇ .. ನ್ಯಾಯವಾ ಇದು?

ಹತ್ತು ಜನರ ಕೋಪವೆಲ್ಲ ನನ್ನಲೆರೆದ ಗಳಿಗೆ

ಅರಿತೆ ಗೆಳತಿ , ಪ್ರೀತಿ ಕೂಡ ಅಷ್ಟೇ ಕೊಡುವೆ ನನಗೆ..

ಮತ್ತೆ ನಾನು ಆ prank mail ನ ವಿಚಾರ ತೆಗೆದರೆ ನನ್ನ ಕೊಂದೇ ಬಿಡುತ್ತೀಯೇನೋ. ಆ ದಿವಸ ಕಾಲೇಜಿನ ಸೈಬರ್ ನಲ್ಲಿ ಮೇಲ್ ಬಾಕ್ಸ್ ತೆರೆದಿಟ್ಟು ಅದ್ಯಾವುದೋ ಗೆಳತಿಯ ಕಂಪ್ಯೂಟರ್ ನಲ್ಲಿ ಇಣುಕಲು ಹೋಗಿದ್ಯಲ್ಲ.. ಅದೇ ಗಳಿಗೆ ಉಪಯೋಗಿಸಿ ನಾನು ನಿನ್ನ ಹೆಸರಲ್ಲಿ, ನಿನಗೂ CC ಮಾಡಿ ನಮ್ಮ ಕ್ಲಾಸ್ ನ ಮೈಲಿಂಗ್ ಲಿಸ್ಟ್ ಗೆ ' I’m throwing a party tomorrow ' ಅಂತ ಮೇಲ್ ಕಳಿಸಿದ್ದೆ. ಒಂದಿಬ್ಬರು ನಿನ್ನನ್ನ ತಮಾಷೆ ಮಾಡಿದ್ದೂ ನಿಜ. ಆದ್ರೆ ನೀನು ಅದನ್ನ ಅಷ್ಟು ಸೀರಿಯಸ್ಸಾಗಿ ತಗೊಂಡಿದ್ಯಲ್ಲೇ,ಒಂದು ವಾರ ನನ್ನ ಹತ್ರ ಮಾತು ಬಿಟ್ಟಿದ್ದೆ ನೆನೆಪದೆಯಾ. ನನಗಂತೂ ಆ ಒಂದು ವಾರ ಹುಚ್ಚೇ ಹಿಡಿದಂತಾಗಿತ್ತು. ಗಳಿಗೆಗಳಲ್ಲಿ ನಿನ್ನ ವಿರಹವನ್ನು ಅಳೆಯುವವ ನಾನು, ದಿನಗಳನ್ನೇ ನೀನು ನನಗೆ ಶಪಿಸಿಬಿಟ್ಟರೆ ನನ್ನ ಗತಿಯಾದ್ರು ಏನು , ಯೋಚಿಸಿದ್ದೀಯ?

ಸುಳ್ಳೇ ಆದ್ರು ನನ್ನ ಹೀಗೆ ಕಾಡಬೇಡ ಗೆಳತಿ

ಕಳೆವೆ ನನ್ನ ನಾನೇ, ನಿನ್ನ ಕಳೆಯೆನೊಂದು ಸರತಿ...

ಇದಾದ ಒಂದು ವಾರದ ಮೇಲೆ ಲಂಚ್ ಬ್ರೇಕ್ ನಲ್ಲಿ ಸುಮ್ಮನೆ ಕುಳಿತಿದ್ದಾಗ ಹಿಂದಿನಿಂದ ಬಂದು ಕಿವಿ ಹಿಂಡಿ 'ಸಾರಿ ಕೇಳು' ಅಂತ ಸುಳ್ಳೇ ಗದರಿಸಿದೆಯಲ್ಲ, ಒಂದು ವಾರ ಬಾಕಿಯಿಟ್ಟ ಬಡಿತವನ್ನು ಹೃದಯ ಒಮ್ಮಿಂದೊಮ್ಮೆಲೆ ಹೊಡೆದು ಬಿಡುತ್ತೇನೋ ಅಂತ ಅನ್ನಿಸಿಬಿಟ್ಟಿತ್ತು. ನೀನು ಮತ್ತೆ ಬಂದು ಮಾತಾಡಿಸುತ್ತಿ ಅಂತ ಕಳ್ಳ ಹೃದಯ ಯಾವತ್ತೂ ಹೇಳುತ್ತಿತ್ತು, ಆದ್ರೆ ಈ ಪಾಟಿ ಶಾಕ್ ಕೊಡೋದೇನೆ ? 'ಸಾರಿ' ಅಲ್ಲ , ನಿನ್ನ ಸುತ್ತ ಉರುಳುಸೇವೆ ಹಾಕು ಎಂದರೂ ಹಾಕುತ್ತಿದ್ದೆನೇನೋ.. ಬರ ಹಿಡಿದ ಈ ಅರೆ ಒಡಲನ್ನು ನಿನ್ನ ತೆರೆದ ಅರಮನೆಗೆ ಮತ್ತೆ ಕರೆತಂದಿದಕ್ಕೆ ಥ್ಯಾಂಕ್ ಯೂ ಎನ್ನಲಾ, ನಿನ್ನ ಮಿಸ್ ಮಾಡಿದ್ದನ್ನು ನಿನ್ನ ಮುಂದೆಯೇ ಹೇಳಿ ಅತ್ತು ಬಿಡಲಾ ಅಂತ ಅವತ್ತು ಮನಸ್ಸು ಗೊಂದಲಗೂಡಾಗಿತ್ತು .

ಬರದರೆಯೊಡಲನು

ತೆರೆದರಮನೆಯೊಳು

ಕರೆದ ರಮಣಿಯನು

ಮರೆದರಧಮ ನಾ...

ಇಷ್ಟೆಲ್ಲಾ ಆಗಿ ಇವತ್ತಿಗೆ ಒಂದು ತಿಂಗಳು. ಇದನ್ನೆಲ್ಲಾ ಹೀಗೇ ಬರೆದುಬಿಟ್ಟು ಇಗೋ ನಿಂಗೇ ಕೊಡುತ್ತಿದ್ದೇನೆ .. ಈಗ ನೆನಪಿನ ಮೆರವಣಿಗೆಯಲ್ಲಿ ಕಳೆದು ಹೋಗೋ ಸರದಿ ನಿನ್ನದು..

ನನ್ನ ನಿನ್ನ ಒಲವ ಲೆಕ್ಕ ಬರೆದರೆಲ್ಲ ಸೊನ್ನೆ

ಯಾಕೆ ಗೊತ್ತ?,

ನಿನ್ನ ನಾನು ಕೂಡಿದಾಗ ಕಳೆದೆ ನಾನು ನನ್ನೇ....

ಇಂತಿ ನಿನ್ನ ರಾಜ್ಕುಮಾರ..