Tuesday, January 16, 2007

ರಾಧೆಗೊಬ್ಬನಿದ್ದ ಕೃಷ್ಣ


ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು
ಒಡಲ ಬೇಗೆಗೆ ಇಂದು ಬೇಡ ಮೃಗತೃಷ್ಣ


ಹರಿವ ಯಮುನೆಗು ಇಲ್ಲಿ ನಿನ್ನ ವಿರಹದ ತಪನ
ಗೋಪ ನಂದನದಲ್ಲು ಇಲ್ಲ ಚಿಲಿಪಿಲಿ ರಣನ
ಹೂಗೆ ಧನ್ಯತೆಯಿಲ್ಲ ನೀ ಬರದೆ ರಂಗ
ಹಸಿರ ತೃಣಗಳಿಗಿಲ್ಲ ನಿನ್ನ ಪಾದಸ್ಪರ್ಶ
ಮೇವ ಗೋಗಳಿಗಿಲ್ಲ ನಿನ್ನ ಕೊಳಲಿನ ಕರ್ಷ
ಮಂಕು ಬಡಿದಂತಿಹವು ಜಿಂಕೆ ಸಾರಂಗ


ನನ್ನತನಕಿನ್ನೆಲ್ಲ ವಿಪ್ರಲಂಭದ ಲೇಪ
ಒಲವ ಛಾದನದೊಳಗೆ ನಿನ್ನ ಮಂಗಳರೂಪ
ಕಾಯ್ವ ಆಟವು ಸಾಕು ಬಾರೊ ನನ್ನಿನಿಯ
ನಿನ್ನ ಕೊರಳಿಗೆ ಎರಗಿ ನಿನ್ನ ಕೊಳಲಿಗೆ ಕರಗಿ
ನಿನ್ನ ಬೆರಳೆಡೆ ನಲಗಿ ನಿನ್ನ ನೆರಳಡಿ ಮಲಗಿ
ಶೃತಿಸಿ ಮೈಮರೆಸೆನಗೆ ನಿನ್ನ ಸವಿದನಿಯ


ರವಿಯ ಕಿರಣಕೆ ನಭವು ಕಾದು ಕುಳಿತಿದೆಯಂತೆ
ಮಳೆಯ ಚಿಮುಕಿಗೆ ಹಸಿರು ಇದಿರು ನೋಡ್ತಿದೆಯಂತೆ
ಕಾಯ್ವ ಪರಿಧಿಗಳೊಳಗೆ ಇಹರು ನನ್ನಂತೆ
ಒಡಲೊಳರಲುವ ನುಡಿಯು ದನಿಗೆ ಹಾತೊರೆವಂತೆ
ಸಡಿಲ ಮನಸಿನ ಕನಸು ರೂಪವಾಶಿಸುವಂತೆ
ಪುರುಷ ಪ್ರಕೃತಿಗೆ ಒಲಿವನದಕೆ ನಾ ನಿಂತೆ..


ಅವನ ಕಾಯುತ ನಿಂತೆ ..ಭೂಮಿಯಿರುವಂತೆ...

ಒಂಥರಾ ಪ್ರೀತಿ...


ಒಂದು ಕಿಟಕಿ ಒಂದು ಬೆಳಗು
ಕೋಣೆಯೆಲ್ಲ ಬೆಳಕು
ಒಂದು ಹಾಡು ಒಂದು ಗುನುಗು
ಮನದೊಳಿಡಿಯೆ ನೆನಪು...


ಒಂದು ಹಾಳೆ ಒಂದು ಪೆನ್ನು
ಬರೆಯಲೇನು ಕವನ?
ಒಂದು ಗೆರೆಯ ಒಂದು ಪದಕೆ
ನೆನಪು ಮತ್ತೆ ಚಲನ


ಒಂದು ಸಂಜೆ ಒಂದು ಕಡಲು
ಮತ್ತೆ ನಾನು-ಅವಳು
ಒಂದು ನೋಟ ಒಂದು ಒಲವು
ಮಾತು ಹರಳು ಹರಳು


ಒಂದು ಗಲ್ಲ ಒಂದು ಮುತ್ತು
ಮಾತು ಮುಗಿಸೊ ಮೊದಲು
ಒಂದು ಅಲೆಯ ಒಂದೆ ಝೋಕು
ಒದ್ದೆ ಎಲ್ಲ ಒಡಲು


ಒಂದು ಮೌನ ಒಂದು ಉಸಿರು
ಲಜ್ಜೆ ಮುಡಿಯಲವಳು
ಒಂದು ನೋಟ ಒಂದು ಸ್ಪರ್ಷ
ನೆಲವು ಮನವು ಮರಳು


ಒಂದು ಫೋನು ಒಂದು ರಿಂಗು
ವಾಸ್ತವತೆಗೆ ತಂದು
ಮತ್ತೆ ನನ್ನ-ಅವಳ ಮಾತು
ಮತ್ತೆ ಒಲವ ಸಿಂಧು...