Sunday, November 28, 2010

ಬದನೆ ಬೋಧನೆಯೆಂಬೊ ರಿವೈಂಡ್ ರಾಗ...

ಈವತ್ತಿನ ದಿನ ಅದ್ಹೇಗೆಲ್ಲ ಕಳೆಯಿತು ಅಂತ ಯೋಚಿಸುತ್ತ ಇನ್ನೇನು ಹಾಸಿಗೆಯಲ್ಲಿ ಒಂದೊಳ್ಳೆ ಸುಖನಿದ್ದೆ ಸವಿಯಬೇಕು ಅಂತ ಆಲೋಚಿದ್ದೇ ಹಾಸಿಗೆಯಿಂದ ಎದ್ದು ಕೂತೆ. ಮಲಗೋ ಮೊದಲು ಡೈರಿ ಬರೆಯುವುದು ನನ್ನ ವಾಡಿಕೆ. ಹಾಗೆ ಅದನ್ನು ಬರೆಯಲು ಕುಳಿತಿದ್ದೂ ಆಯಿತು, ಇವತ್ತಿನ ದಿನದ ಸ್ವಾರಸ್ಯಗಳನ್ನು ಬರೆಯಲು ಮನಸ್ಸೂ ಸ್ವಲ್ಪ ಹೆಚ್ಚೇ ಉತ್ಸುಕವಾಗಿತ್ತು. ಡೈರಿ ಬರೆಯೋಕೂ ಮೊದಲು ಊಟ ಮುಗಿಸಿದ್ದೆನಾ ಅಂತ ಖಾತ್ರಿಯಾಗಬೇಕಿತ್ತು. ಹೌದು ಊಟ ಮಾಡಿದ್ದೇನೆ. ಬದನೆ ಗೊಜ್ಜು , ತಿಳಿಸಾರು ಮಾಡಿ ಹೆಂಡತಿಯೇ ಕಯ್ಯಾರ ಬಡಿಸಿದ್ದಳು.

ಅರೆ! ಅಡಿಗೆಯಾಗದೆ ಅದು ಹೇಗೆ ಬಡಿಸಿದಳು ? ಅಷ್ಟಕ್ಕೂ ನಾವಿಬ್ಬರೂ ಆಫೀಸಿಂದ ಬಂದ ಮೇಲೆ ಜೊತೆಗೇ ಸೇರಿ ಅಡಿಗೆ ಮಾಡುವುದು ರೂಢಿ. ನಾನು ತರಕಾರಿಗಳನ್ನು ಹೆಚ್ಚುವಾಗ ಅವಳು ಸಂಬಾರಗಳನ್ನು ಕಡೆಯುತ್ತಿದ್ದಳು. ಇವತ್ತು ಬದನೇಕಾಯಿ ಹೆಚ್ಚುವಾಗ ಊರ ನೆನಪು ಬಾರದೆ ಇರಲಿಲ್ಲ. ಇನ್ನು ಬದನೇಕಾಯಿ ಅದೆಷ್ಟು ಬೆಲೆಕೊಟ್ಟು ತಂದಿದ್ದು ಅಂತೀರ.ಮೂರುವರೆ ಡಾಲರಿಗೆ ಎರಡೇ ಎರಡು ಚಿಕ್ಕ ಬದನೇಕಾಯಿ. ಸಂಜೆ ಮನೆಯೆದುರು ಕಾರನ್ನು ಪಾರ್ಕ್ ಮಾಡಿದವರೇ ನೇರ ಮನೆಗೆ ಓಡಿ ಬಂದು ಬದನೆ ರೆಸಿಪಿಯನ್ನು ಗೂಗಲಿಸಿದ್ದೆವು . ನಮ್ಮೂರಲ್ಲಿರೋ ಒಂದೇ ಒಂದು ಇಂಡಿಯನ್ ಸ್ಟೋರ್ ನಿಂದ ಹರ ಸಾಹಸ ಪಟ್ಟು ತಂದಿದ್ದು ಆ ಬದನೆಕಾಯಿಯನ್ನು. ಸ್ಟೋರಿನಲ್ಲಿ ಸಂಜೆ ಬದನೇಕಾಯಿ ಕಂಡಾಗ ಎಷ್ಟು ಖುಷಿಯಾಗಿತ್ತು ಗೊತ್ತಾ. ಇಂಡಿಯನ್ ಸ್ಟೋರ್ ಸಂಜೆ ಆರಕ್ಕೆಲ್ಲ ಮುಚ್ಚಿಯೇ ಬಿಡುತ್ತದೆ. ನಾವು ಸಾಫ್ಟುವೇರುಗಳಿಗೆ ಆರಕ್ಕೆ ಹೊರಡೋದು ಅಂದ್ರೆ ಅರ್ಧ ದಿನ ರಜೆ ಹಾಕಿ ಹೊರಟಷ್ಟು ಬೇಗ! ಹಾಗಂತ ಬದನೇಕಾಯಿ ಗೊಜ್ಜು ತಿನ್ನಬೇಕೂಂತ ಹುಟ್ಟಿದ ಆಸೆಯನ್ನು ಹಾಗೆಯೇ ಅದುಮಿಟ್ಟುಕೊಳ್ಳೋಕಾಗುತ್ತ? ಫ್ರೀವೇನಲ್ಲಿ ನಾನು ಕಾರು ಓಡಿಸಿದ್ದನ್ನು ಯಾವನಾದ್ರು ಪೋಲಿಸು ಅಪ್ಪಿ ತಪ್ಪಿ ನೋಡಿದ್ದರೆ ಸ್ಪೀಡಿಂಗ್ ಟಿಕೇಟುಗಳನ್ನು ಹರಿದು ಹರಿದು ಕೊಡುತ್ತಿದ್ದ! ಆಫೀಸಿನಲ್ಲಿ ಕಾರನ್ನು ಪಾರ್ಕಿಂಗ್ ನಿಂದ ರೆವರ್ಸು ತೆಗೆದಾಗ ಆರಕ್ಕೆ ಹತ್ತೇ ನಿಮಿಷ. ಬದನೇಕಾಯಿ ಗೊಜ್ಜು ತಿನ್ನೋ ಕನಸು ಹಾಗೇ ಉಳಿಯುತ್ತೆ ಅಂತ ಗೇರು ಬದಲಿಸಿದಾಗ ಅನಿಸಿದ್ದು ನಿಜ. ಹಾಗಾಗಲು ಕಾರಣ ನನ್ನ ಈ ಮಹಾರಾಯ್ತಿಯೇ ಅಂತ ಬೇರೆ ಹೇಳಬೇಕಿಲ್ಲ ತಾನೇ. ಕೆಲಸ ಮುಗಿಸಿ ಬರೋದಕ್ಕೂ ಮುಂಚೆ ಹದಿನೈದು ನಿಮಿಷ ರಿಸೆಪ್ಶನ್ ನಲ್ಲಿ ನನ್ನನ್ನು ಕಾಯಿಸಿದ್ದಳು. ಐದಾಗುತ್ತಿದ್ದಂತೆಯೇ ಮೆಸೆಂಜರ್ನಲ್ಲಿ ಇವಳಿಗೆ ಪಿಂಗ್ ಮಾಡಿದ್ದೆ ."ಇವತ್ತು ಐದೂವರೆಗೆಲ್ಲ ಹೊರಡಲೇಬೇಕು . ಅಟ್ ಎನಿ ಕಾಸ್ಟ್, ಬದನೆ ಕಾಯಿ ಗೊಜ್ಜು ತಿನ್ನಲೇಬೇಕು. ಅದೇನು ಮೀಟಿಂಗ್ ಇದ್ದರೂ ಅಷ್ಟರೊಳಗೆ ಮುಗಿಸು" . ಹಾಗೆ ಪಿಂಗ್ ಮಾಡೋದಿಕ್ಕೂ ಮೊದಲು ಅವಳ ಸ್ಟೇಟಸ್ ' ಡು ನಾಟ್ ಡಿಸ್ಟರ್ಬ್ ' ನಲ್ಲಿದ್ದರಿಂದ ಈ ಪುಣ್ಯಾತಿಗಿತ್ತಿ ರಿಪ್ಲೈ ಮಾಡುವುದಿಲ್ಲ ಅಂತಲೂ ಗೊತ್ತಿತ್ತು.


ಮಧ್ಯಾಹ್ನ ಮೂರಕ್ಕೂ ಹೆಚ್ಚು ಗಂಟೆ ಬದನೆಕಾಯಿಯ ಸಂದರ್ಭೋಚಿತ ಧ್ಯಾನದಿಂದಲೇ ನನ್ನಲ್ಲಿ ಈ ಗೊಜ್ಜಿನ ಹುಚ್ಚು ಶುರುಹಚ್ಚಿದ್ದು. ಬಹುಷಃ ಆ ಮೂರು ಗಂಟೆಗಳಲ್ಲಿ ನಾನು ಮಾಡಿದ ಕೋಡಿಂಗ್ ಅನ್ನು ಯಾರಾದರು ಟೆಕ್ ಮ್ಯಾನೇಜರ್ ರಿವ್ಯೂ ಮಾಡಿದರೆ ಅವನಿಗೂ ಹೊಡೆಯಬಹುದು ಬದನೆ ಗೊಜ್ಜಿನ ವಾಸನೆ! ಮಧ್ಯಾಹ್ನ ಮನೆಯಿಂದ ಊಟ ಮಾಡಿ ಆಫೇಸಿಗೆ ಡ್ರೈವ್ ಮಾಡುತ್ತಾ ಬರುವಾಗಲೇ ಮನಸಿನ ಮೂಲೆಯಲ್ಲಿ ಒಡೆದಿದ್ದ ಬದನೆಯ ಮೊಳಕೆ ಗಿಡವಾಗಲು ಶುರುವಾದದ್ದು . ಹಾಗಾದ್ರೆ ಬೀಜ ಬಿತ್ತಿದ್ದು ಯಾರು ಅಂತಲೂ ಹೇಳಬೇಕು ತಾನೇ. ಮದ್ಯಾಹ್ನ ಊಟದ ಸಮಯದಲ್ಲಿ ಅಮ್ಮ ನ ಬಳಿ ವೀಡಿಯೊ ಚಾಟ್ ಮಾಡುವುದು ನಮ್ಮ ನಿತ್ಯಕರ್ಮಗಳಲ್ಲಿ ಒಂದು. ಭಾರತದಲ್ಲಿ ಅದು ರಾತ್ರಿ ಸಮಯವಾದ್ದರಿಂದ ಆ ದಿನದ ಪೂರ್ತಿ ಸ್ಟೇಟಸ್ ರಿಪೋರ್ಟ್ " ನ್ಯೂಸ್ ಇನ್ ಎ ನಟ್ ಶೆಲ್ " ಆಗಿ ಅಮ್ಮ ಟೆಲಿಕಾಸ್ಟ್ ಮಾಡುತ್ತಾರೆ. ನಾವಿಬ್ಬರು ತಟ್ಟೆಯನ್ನು ನಮ್ಮ ಡೆಲ್ ಲ್ಯಾಪಿ ಯ ಮುಂದಿಟ್ಟು ಊಟ ಮಾಡುತ್ತಾ ಕೇಳುತ್ತೇವೆ. ಕೆಲವೊಮ್ಮೆ ಮಾತು ಮುಗಿಸೋದಿಕ್ಕೆ ಮುಂಚೆ ಅಡ್ಡಬಾಯಿ ಹಾಕುವ ಬರ್ಖಾ ದತ್ತ್ ಳಂತೆ ಅಸಂಬದ್ಧವಾಗಿ ಏನೇನೋ ಕೇಳುವುದೂ ಇದೆ. ಹಾಗೆ ಊಟ ಮಾಡುತ್ತಿದ್ದಾಗ ಅಮ್ಮನ ಬಳಿ ಹೇಳುತ್ತಾ ಇದ್ವಿ - 'ಇಲ್ಲಿ ತರಕಾರಿಗಳಲ್ಲಿ ನಮ್ಮೂರಷ್ಟು ವರೈಟಿ ಇಲ್ಲ, ಇರೋ ತರಕಾರಿಗಳಲ್ಲಿ ಅರ್ಧದಷ್ಟು ನಮಗೆ ಮಾಡೋಕೆ ಬರೋಲ್ಲ.. ಅದೇ ಆಲೂ, ಕ್ಯಾಬೇಜು, ಫ್ರೋಜನ್ನು ತರಕಾರಿಗಳನ್ನು ತಿಂದು ಸಾಕಾಗಿದೆ" ಎಂದು. ಅಷ್ಟು ಹೇಳಿದ್ದೇ ತಡ, ಅಮ್ಮ ತಮ್ಮ ಬದನೆಯ ಪುರಾಣ ಶುರು ಹಚ್ಚಿದರು. ವಿಟ್ಲದ ಬಳಿ ಯಾವುದೊ ಸತ್ಯನಾರಾಯಣ ಪೂಜೆಗೆ ಹೋಗಿದ್ದ ಅಮ್ಮ ಅಲ್ಲಿ ತಿಂದಿದ್ದ ಬದನೆ ಗೊಜ್ಜನ್ನು ಹೊಗಳಿದ್ದೇ ಹೊಗಳಿದ್ದು. ಅವಾಗಲೇ ನಮಗಿಬ್ಬರಿಗೂ ಹೊಳೆದದ್ದು , ನಾವು ಬದನೆ ತಿಂದು ವರುಷದ ಮೇಲಾಯಿತೆಂದು! ಅಮ್ಮ ಅವರ ಬದನೆ ಕಥೆಯನ್ನು ಹೇಳುತ್ತಿದ್ದಂತೆಯೇ ನಾನು ಗೂಗಲ್ಲಿನಲ್ಲಿ ನಮ್ಮ ಇಂಡಿಯನ್ ಸ್ಟೋರ್ ನ ನಂಬರು ಹುಡುಕಲು ಶುರು ಹಚ್ಚಿ , ಅದನ್ನು ಪಡೆದು , ಫೋನು ಮಾಡಿ ಬದನೆ ಇದೆ ಅಂತ ಖಾತ್ರಿಯೂ ಪಡಿಸಿಕೊಂಡಿದ್ದೆ. ಅದಕ್ಕೂ ಮೊದಲು ಸ್ಟೋರ್ ನ ಸಮಯ ನೋಡುತ್ತಾ ವಿಂಟರ್ ಟೈಮಿಂಗ್ಸ್ ಸಂಜೆ ಮೂರರಿಂದ ಆರು ಅಂತ ನೋಡಿ ಎದೆ ಧಸಕ್ಕೆಂದಿತ್ತು.

ಅಮ್ಮ ಬದನೆ ಸ್ಟೋರಿ ಹೇಳುತ್ತಲೇ ಇದ್ದರು. ಪೂಜೆಯ ಊಟದಲ್ಲಿ ಎಲ್ಲರೂ ಎರಡೆರಡು ಬಾರಿ ಗೊಜ್ಜು ಸುರಿಸಿ ಉಂಡವರೇ ಅಂತೆ. ಇದಕ್ಕೂ ಮೊದಲು ಅಡುಗೆಗೆ ತರಕಾರಿ ಹೆಚ್ಚುವುದು ನಮ್ಮಲ್ಲೆಲ್ಲ ಪುಟ್ಟ ಕೌಟುಂಬಿಕ ಗ್ಯಾದರಿಂಗ್. ಅಲ್ಲಿ ಪೋಲಿ ಜೋಕುಗಳಿಂದ ಹಿಡಿದು ಎಂತೆಂಥದೋ ಕೆಲಸಕ್ಕೆ ಬಾರದ ವಿಷಯಗಳೂ ಚರ್ಚೆಗೆ ಬರುತ್ತವೆ. ಒಂದು ಮಟ್ಟಿಗೆ ನಮ್ಮ ಸಾಫ್ಟ್ ವೇರಿನ ಜನರು ಮಾಡುವ ಶಾರ್ಟ್ ಟರ್ಮ್ ಪ್ರಾಜಕ್ಟ್ ಥರಾನೇ ಇದೂ. ಇಲ್ಲೂ ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ಇರುತ್ತಾನೆ . 'ಬಾಚ' ಅಂತ ನಾವವನನ್ನು ಗೌರವದಿಂದ ಕರೆಯುತ್ತೇವೆ. ತನ್ನ ಗುಂಪು ಹೆಚ್ಚಿದ ತರಕಾರಿಗಳನ್ನು ಬಾಚಿ ಚಾಚೂ ತಪ್ಪದಂತೆ ಅಡುಗೆ ಭಟ್ಟನೆಂಬ ಕ್ಲೈಂಟಿಗೆ ಡೆಲಿವರಿ ಮಾಡಿ ಹೊಸ ರಿಕ್ವಾಯರ್ಮೆಂಟುಗಳೊಡನೆ ವಾಪಸ್ ಬರುವುದು ಅವನ ಕೆಲಸ. ಹಾಗೆಯೇ ಟೀಮಿನಲ್ಲಿ ಮೆಟ್ಟುಕತ್ತಿ ಹಿಡಿದ ಸೀನಿಯರ್ ಹೆಚ್ಚುಕೋರರೂ, ಈಗಷ್ಟೇ ಚಾಕು ಹಿಡಿಯಲು ಕಲಿತ ಫ್ರೆಶರ್ಗಳೂ ಇರುತ್ತಾರೆ. ಹೀಗಿರುವ ಒಂದು ಗ್ರೂಪ್ ಆಕ್ಟಿವಿಟಿಗೆ 'ಮೇಲಾರಕ್ಕೆ ಕೊರೆವ'ದು ಅಂತ ಹೆಸರು. ಇಂತಿಪ್ಪ ಗ್ಯಾದರಿಂಗ್ ನಲ್ಲಿ ನಮ್ಮಮ್ಮನಿಗೆ ಕೊರೆಯಲು ( ನಮ್ಮೂರಲ್ಲಿ ಹೆಚ್ಚೋದನ್ನು ಕೊರೆಯೋದು ಅಂತಾನೆ ಹೇಳೋದು) ಸಿಕ್ಕಿದ್ದು ಬದನೆಕಾಯಿಯೇ! ಅದನ್ನು ಹೆಚ್ಚುವಾಗಲೇ ಅಮ್ಮನಿಗೆ ಅನ್ನಿಸಿತಂತೆ ಈವತ್ತಿನ ಗೊಜ್ಜು ಸೂಪರೋ ಸೂಪರು ಆಗುತ್ತೆಂದು. ತರಕಾರಿ ಹೆಚ್ಚಲು ಹರಿತವಾದ ಚೂರಿ ಸಿಕ್ಕುವುದು ಮತ್ತು ಹದವಾಗಿ ಬೆಳೆದ ತರಕಾರಿಯೂ ಸಿಕ್ಕುವುದು ಸೌಭಾಗ್ಯವೇ ತಾನೇ!. ಈ ದಿನ ಆ ಸೌಭಾಗ್ಯ ಸಿಕ್ಕಿದ್ದು ಅಮ್ಮನಿಗೆ. ನಮ್ಮಮ್ಮ ಅಷ್ಟಕ್ಕೇ ಸುಮ್ಮನೆ ಬಿಡಲಿಲ್ಲ.. ಆ ಬದನೆ ಕಾಯಿ ಪೇಟೆ ಅಂಗಡಿಯಿಂದ ತಂದಿದ್ದಲ್ಲವೆಂದು ಅಮ್ಮನಿಗೆ ಸುತರಾಂ ಖಾತ್ರಿಯಾಗಿತ್ತಂತೆ. ಹಾಗಾಗಿ ಅದರ ಜನ್ಮ ಜಾಲಾಡಲು ಹೊರಟಾಗ ಅದು ಆಲ್ಲಿಯೇ ನೆರೆಕರೆಯಲ್ಲಿರುವ ಭಟ್ಟರ ಮನೆಯದ್ದೆಂದು ಗೊತ್ತಾಗಿ ಅವರ ಬಳಿ ಹೋಗಿ ಒಂದಷ್ಟು ಬದನೆಯನ್ನು ಬುಕ್ ಮಾಡಿಯೂ ಬಂದಿದ್ದರಂತೆ! ಆ ಭಟ್ಟರಿಗೆ ನಮ್ಮಮ್ಮ ಬದನೆಕಾಯಿಯನ್ನು ಹೊಗಳಿದ್ದು ಕಂಡು ಖುಷಿಯೋ ಖುಷಿ. ಮಟ್ಟಿಯಲ್ಲಿರುವ ತಮ್ಮ ಭಾಮೈದನ ತೋಟದಿಂದ ತಂದ ಬದನೆ ಬೀಜ ಅದೆಂದೂ ಅದನ್ನು ಬೆಳೆಸಲು ಸ್ವತಹ ತಾನೇ ಎರೆಹುಳದ ಗೊಬ್ಬರ ತಯಾರಿಸುತ್ತೇನೆಂದೂ, ಅವಾಗಾವಾಗ ಮೀನಿನ ಗೊಬ್ಬರವನ್ನೂ ಹಾಕಿಸುತ್ತೇನೆಂದೂ ಸುಮಾರಾಗಿ ಅವರೂ ಸ್ಟೋರಿ ಬಿಟ್ಟಿದ್ದರು. ಅದಷ್ಟೇ ಅಲ್ಲ, ಪ್ರಾಯದಲ್ಲಿ ಹಿರಿಯರೂ ಆಗಿದ್ದ ಅವರಿಂದ ಬದನೆಯ ಪುಟ್ಟ ಸೆಮಿನಾರೆ ಆಯಿತಂತೆ. ವಾದಿರಾಜಾಚಾರ್ಯರು ಉಡುಪಿಯ ಶ್ರೀಕೃಷ್ಣ ನಿಗೆ ಮಟ್ಟಿಗುಳ್ಳದ (ಇದು ಉಡುಪಿಯ ಸ್ಪೆಷಲ್ ಕಸ್ಟಮಾಯಿಸ್ಡ್ ಬದನೆ) ನೈವೇದ್ಯ ಮಾಡಿಸಿ ನಂಜು ಬಿಡಿಸಿದ ಕತೆಯಿಂದ ಹಿಡಿದು ಈಗಿನ ಮಟ್ಟಿಯ ರೈತರು ಬಿ.ಟಿ.ಬದನೆಯ ವಿರುದ್ದ ಮಾಡುತ್ತಿರುವ ಹೋರಾಟದವರೆಗೂ ಬದನೆಯ ಸಮಗ್ರ ಮಾಹಿತಿಯನ್ನೊಳಗೊಂಡ ಸೇಮಿನಾರಂತೆ ಅದು. ಅಮ್ಮ ಎಲ್ಲವನ್ನೂ ಚಾಚೂ ತಪ್ಪದಂತೆ ವಿವರಿಸಿ ಚಾಟ್ ಮುಗಿಸಿದ್ದರು. ಇಂತಿತ್ತು ನಮ್ಮ ಇಂದಿನ ಬದನೇಕಾಯಿ ಪುರಾಣ.

ಅಮ್ಮ ನ ಫೋನು ಬರುವುದಕ್ಕೂ ಮೊದಲು ಬದನೆಯ ಸುಳಿವೂ ಇಲ್ಲದ ನಮ್ಮ ಸಾಫ್ಟ್ವೇರು ಪ್ರಾಜೆಕ್ಟುಗಳ ಲೋಕದಲ್ಲಿ ಅದು ಹೇಗೆ ಈ ಬದನೆ ಬಂದು ಅರ್ಧ ದಿನವನ್ನು ಆಕ್ರಮಿಸಿತು ಅಂತ ದಿಗ್ಭ್ರಮೆಗೊಂಡು ನನ್ನವಳ ಬಳಿ ರಾತ್ರಿ ಮಲಗುತ್ತ ಹೇಳಿದೆ. ಊರಿನ ಪ್ರತಿ ನೆನಪೂ ಹಾಗೇ ಅಲ್ಲವಾ ಅಂತ ಅವಳು ಹೇಳಿದ್ದಳು. ನೂರಕ್ಕೆ ನೂರು ನಿಜ ಅಂತ ಹೇಳಿತ್ತು ನನ್ನ ಉದರದಿಂದ ಬಂದ ದೊಡ್ಡದೊಂದು ತೇಗು...