ನವಿಲಿನ ಗರಿ
ಇದು ನಲಿವ ನಗರಿ...
Sunday, January 23, 2011
ಆಗಮ ಸಂಧಿ
Saturday, January 15, 2011
ಭಾನುವಾರದ ಓದು : ಕಥಾವಿಸ್ಮಯ
ಅದೊಂದು ಘಟನೆ... ತುಂಬಾ ವಿಶೇಷ ಇರುವಂಥದ್ದೇನೂ ಅಲ್ಲ.. ಆದರೂ ಏನೋ ಒಂದು ರೋಚಕತೆ ಇರುವಂಥದ್ದು... ಅದು ಸಂಭವಿಸಿದಾಗ ಅಲ್ಲಿ ಜನರೂ ಇದ್ದರು..ಜನ ಸೇರಿದ್ದರಿಂದ ನಮ್ಮ ಕಥೆಗಾರ-೧ ಕೂಡ ಇಣುಕಲು ಅಲ್ಲಿಗೆ ಹೊರಟಿದ್ದ. ತನ್ನ ಮುಂದಿನ ಕಥೆಗೆ ಏನಾದ್ರೂ ವಸ್ತು ಸಿಗಬಹುದಾ ಅನ್ನೋ ಆಸೆಯಿಂದ. ಕಥೆಗಾರ-೧ ಅಂತೊಬ್ಬ ಇರಬೇಕಾದ್ರೆ ಕಥೆಗಾರ-೨ ಕೂಡ ಇರಲೇಬೇಕು ತಾನೇ? ಅವನೂ ಇದ್ದ.. ಆ ಸ್ಥಳದಲ್ಲೇ ಇದ್ದ..ಜನ ಸೇರಿದ್ದು ಅವನ ಕಣ್ಣಿಗೂ ಬಿದ್ದಿತ್ತು. ಆದ್ದರಿಂದ ಮನುಷ್ಯ ಸಹಜ ಕುತೂಹಲ ಆತನಲ್ಲೂ ಮೂಡಿ ಘಟನೆಯ ಚಿತ್ರವನ್ನು ಅಂದಾಜಿಸತೊಡಗಿದ. ಕಥೆಗಾರ-೧ ಅಲ್ಲೇ ಹಿಂದುಗಡೆ ಇದ್ದದ್ದು ಕಥೆಗಾರ -೨ನ ಕಣ್ಣಿಗೆ ಬಿತ್ತು...ಇಬ್ಬರೂ ಒಬ್ಬರಿಗೊಬ್ಬರು ಒಂದು ರೀತಿಯಲ್ಲಿ ಆಪ್ತರೇ. ಆದರೂ ಇವರಿಬ್ಬರಿಗೂ ಒಂದು ತರಹದ ಸಾಹಿತ್ಯಕ ಪೈಪೋಟಿ. ಸಾತ್ವಿಕ ಪೈಪೋಟಿ ಸುಮಾರಷ್ಟು ಸಾಹಿತಿಗಳಲ್ಲಿ ಕಂಡರೂ ಇವರಿಬ್ಬರದು ಸ್ವಲ್ಪ ಪೆರ್ಸನಲ್ ಮಟ್ಟದಲ್ಲೂ ಇತ್ತು.. ಆದ್ರೆ ಅದೆಲ್ಲ ಕಣ್ಣೆದುರಿಗೆ ಕಾಣುವಂಥದಲ್ಲ. ಇಬ್ಬರ ಸಾಹಿತ್ಯವನ್ನೂ ಆಳವಾಗಿ ಅಭ್ಯಸಿಸಿದವರಿಗೆ ಅವರಿಬ್ಬರ ಪರಸ್ಪರ ತಾತ್ವಿಕ ಸಂಘರ್ಷದ ಅರಿವು ಮೂಡುತ್ತದೆ. ಹೆಚ್ಚು ಹೆಚ್ಚು ಓದಿದಷ್ಟು ಅವರಿಬ್ಬರ ನಡುವಿನ ಸ್ಪಷ್ಟ ಭಿನ್ನಮತಗಳು ಓದುಗನಿಗೆ ಗೋಚರಿಸುತ್ತ ಹೋಗುತ್ತವೆ. ಹಾಗಂತ ಕಣ್ಣೆದುರು ಸಿಕ್ಕಾಗೆಲ್ಲ ಅವರಿಬ್ಬರೂ ಬಹಳ ಆತ್ಮೀಯರೇ. ಅಟ್ ಲೀಸ್ಟ್ ನೋಡುವವರ ಮಟ್ಟಿಗೆ...ಆವತ್ತು ಆ ಘಟನೆ ನೋಡಿದಾವತ್ತೂ ಅದೇ ಆಯಿತು. ಕಥೆಗಾರ-೨ ನೇರ ಹೋಗಿ ಕಥೆಗಾರ -೧ ನನ್ನು ನಗುತ್ತ ಮಾತಾಡಿಸಿದ. ಸ್ವಲ್ಪ ಹೊತ್ತು ಅವರಿಬ್ಬರು ನಡೆದ ಘಟನೆ ಬಗ್ಗೆ ಮಾತನಾಡುತ್ತ ಪಕ್ಕದ ಹೋಟೆಲ್ಲಿಗೆ ತೆರಳಿ ಕಾಫಿ ಹೀರುತ್ತಾ ತುಸು ಹೊತ್ತು ಲೋಕಾಭಿರಾಮವನ್ನೂ ಮಾತಾಡಿಕೊಂಡರು.
ಮನೆ ತಲುಪಿದ ಕಥೆಗಾರ-೧ ಗೆ ಆ ಸಂಜೆ ಚಿಕ್ಕ ಗುಮಾನಿ ಶುರುವಾಯಿತು.. ಇವತ್ತು ನೋಡಿದ ಘಟನೆ ಬಗ್ಗೆ ಕಥೆಗಾರ-೨ ಖಂಡಿತ ಒಂದು ಕಥೆ ಬರೆದೆ ಬರೆಯುತ್ತಾನೆ ಅಂತ ಇವನಿಗೆ ಅನ್ನಿಸಲು ಶುರುವಾಯ್ತು. ಹಾಗಂತ ತನಗೂ ಆ ಘಟನೆಯ ಬಗ್ಗೆ ಕಥೆ ಬರೆಯದೆ ಇರಲು ಸಾಧ್ಯವಿಲ್ಲ. ಒಂದು ವೇಳೆ ಬರದದ್ದೇ ಆದಲ್ಲಿ ಅದು ಕಥೆಗಾರ-೨ ಬರೆದದ್ದಕ್ಕಿಂಥ ಉತ್ತಮವಾಗಿರಬೇಕು. ಹೆಚ್ಚು ಜನ ತನ್ನ ಕಥೆಯನ್ನು ಅವನ ಕಥೆಯ ಜೊತೆ ತೌಲನಿಕವಾಗಿ ವಿಮರ್ಶಿಸುತ್ತ ತನಗೆ ಗೌರವಗಳನ್ನು ದಕ್ಕಿಸಿಕೊಡಬೇಕು. ತಮ್ಮಿಬ್ಬರ ನಡುವಿನ ಪೈಪೋಟಿಯಲ್ಲಿ ಆಗ ತಾನು ಒಂದು ಹೆಜ್ಜೆ ಮುಂದೆ ಹೋದಂತಾಗುತ್ತದೆ ಅಂತ ಅಂದುಕೊಂಡ. ಆ ರಾತ್ರಿ ಕೂತು ತನ್ನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚಿದ... ಸ್ವಲ್ಪ ಹೊತ್ತು ಆಲೋಚಿಸಿದ ನಂತರ ಆತ ಒಂದು ನಿರ್ಧಾರಕ್ಕೆ ಬಂದ. ಅದೇನೆಂದರೆ , ಕಥೆಗಾರ-೨ ನನ್ನು ಘಟನೆಯ ಪಾತ್ರವಾಗಿಸಬೇಕು. ಅದು ಓದುಗನಿಗೆ ತಿಳಿಯಬಾರದು.. ಆದ್ರೆ ಕಥೆಗಾರ -೨ ಗೆ ಅದು ತನ್ನ ಬಗ್ಗೆಯೇ ಮಾಡಿದ ಕಮೆಂಟುಗಳು ಅಂತ ಕಥೆ ಓದುತ್ತಿದ್ದಂತೆಯೇ ತಿಳಿದು ಹೋಗಬೇಕು. ಹಾಗೊಂದು ಆಲೋಚನೆ ಬಂದ ಕೂಡಲೇ ಕಥೆಗಾರ-೧ ಒಂದು ಕಥೆಯನ್ನು ಬರೆಯತೊಡಗಿದ. ಕಥೆಗಾರ-೨ ನನ್ನು ತನ್ನ ಈ ಕಥೆಯಲ್ಲಿ ಒಬ್ಬ ಕಥೆಗಾರನನ್ನಾಗಿಸಿ ಆ ಕಥೆಗಾರ ಆ ಘಟನೆಯನ್ನು ನೋಡುತ್ತ ಕಥೆ ಬರೆಯುವ ಒಂದು ಕಥೆಯನ್ನು ಹೆಣೆಯುತ್ತಾನೆ. ಕಥೆಗಾರ-೨ ನ ಆಲೋಚನೆಗಳನ್ನು ಸಾಕಷ್ಟು ಅಭ್ಯಸಿಸಿದ್ದ ಕಥೆಗಾರ-೧, ಕಥೆಗಾರ -೨ ಆ ಕಥೆಯನ್ನು ಹೇಗೆ ಹೆಣೆಯುತ್ತಿದ್ದನೋ ಅದನ್ನು ಚಿತ್ರಿಸಿಕೊಂಡು ತನ್ನ ಕಥೆಯಲ್ಲಿನ ಕಥೆಗಾರನ ಪಾತ್ರವನ್ನು ಹೆಣೆಯತೊಡಗುತ್ತಾನೆ. ಕಥೆ ರೂಪುಗೊಳ್ಳುತ್ತ ಹೋದಂತೆ ಅದರೊಳಗೊಬ್ಬ ಕಥೆಗಾರ-೩ ರೂಪುಗೊಳ್ಳತೊಡಗುತ್ತಾನೆ. ಈ ಕಥೆಗಾರ-೩ ಯ ಚಿಂತನೆಗಳನ್ನು , ಘಟನೆಗೆ ಸ್ಪಂದಿಸುವ ಪರಿಯನ್ನು ನಾಟುವಂಥ ಪದಗಳಿಂದ ಗೇಲಿ ಮಾಡಿ ತನ್ನ ವಿಚಾರಗಳನ್ನು ಪುಷ್ಟಿಗೊಳಿಸುವುದು ಕಥೆಗಾರ-೧ ನ ಸ್ಪಷ್ಟ ಉದ್ದೇಶ. ನೋಡು ನೋಡುತ್ತಿದಂತೆ ಕಥೆಗಾರ-೩ ಯು ಕಥೆಗಾರ-೨ ನ ಆಲೋಚನೆಗಳ ನೆಗೆಟಿವ್ ರೂಪವೆ ಆಗಿ ಆ ಕಥೆಯಲ್ಲಿ ರೂಪುಗೊಳ್ಳುತ್ತಾನೆ. ಕಥೆಗಾರ-೩ ನ ಪಾತ್ರಕ್ಕೆ ತಕ್ಕಂತೆ ಘಟನೆಯನ್ನೂ ತನ್ನ ಕಲ್ಪನೆಗಳ ಪದರಗಳಲ್ಲಿ ತಿರುಚಿ ಕಥೆಗಾರ-೧ ಅದಕ್ಕೊಂದು ಹೊಸ ರೂಪು ಕೊಡುತ್ತಾನೆ. ತನ್ನ ಕಲ್ಪನಾ ಲೋಕದಲ್ಲಿ ತನ್ನದೇ ಆದ ಹೊಸ ಪಾತ್ರಗಳನ್ನೂ ಚಿತ್ರಿಸಿ, ಘಟನೆಗೆ ಒಂದು ಹೊಸ ಆಯಾಮವನ್ನೇ ಕೊಟ್ಟು ತನ್ನ ಕಥೆಯನ್ನು ಇನ್ನಷ್ಟು ವಿಶಿಷ್ಟಗೊಳಿಸುತ್ತಾನೆ. ತನ್ನ ನೆಚ್ಚಿನ ಓದುಗರಿಗೆ ಮತ್ತು ತನ್ನ ಪ್ರತಿ ಕಥೆಯನ್ನು ಮೆಚ್ಚಿ ವಿಮರ್ಶಿಸುವ ತನ್ನ ಕೆಲವು ಆಪ್ತ ವಿಮರ್ಶಕರಿಗೆ ಈ ಕಥೆ ಒಂದು ಸುಂದರ ಭಾನುವಾರದ ಓದು ಆಗುತ್ತದೆ ಅಂತ ಅಂದುಕೊಳ್ಳುತ್ತ ಕಥೆ ಬರೆದು ಮುಗಿಸುತ್ತ ಆಲೋಚಿಸುತ್ತಿರುತ್ತಾನೆ. ಭಾನುವಾರ ಪ್ರಕಟಗೊಳ್ಳುವ ಆ ವಾರಪತ್ರಿಕೆಗೆ ತನ್ನ ಕಥೆಯನ್ನು ಕಳಿಸುವ ಏರ್ಪಾಡನ್ನು ಅವತ್ತೇ ಮಾಡುತ್ತಾನೆ.
ಕಥೆಗಾರ-೧ ಇಷ್ಟೆಲ್ಲಾ ಮಾಡುತ್ತಿರಬೇಕಾದರೆ ಕಥೆಗಾರ-೨ ಸುಮ್ಮನಿರುವುದಿಲ್ಲವೆಂದು ನೀವು ಈಗಾಗಲೇ ಅಂದಾಜಿಸುತ್ತಿರುತ್ತೀರಿ. ನಿಮ್ಮ ಅಂದಾಜು ಸರಿ. ಆತನಿಗೂ ಕಥೆಗಾರ-೧ ನ ಮೇಲೆ ಅಷ್ಟೇ ಸೈದ್ಧಾಂತಿಕ ಅಸಮಧಾನವಿದೆ. ಆತನೂ ಕಥೆಗಾರ-೧ ನಷ್ಟೇ ಪ್ರತಿಭಾವಂತ. ಆದ್ರೆ ಇಬ್ಬರ ಆಲೋಚನೆಗಳು ಒಂದೇ ತೆರನಾಗಿರಬೇಕಿಲ್ಲವಲ್ಲ ? ಕಥೆಗಾರ-೨ ಗೆ ಕೂಡ ಕಥೆಗಾರ-೧ ಆ ದಿನದ ಘಟನೆಯ ಬಗ್ಗೆ ಒಂದು ಕಥೆ ಬರೆದೇ ಬರೆಯುತ್ತಾನೆಂದು ಗೊತ್ತು.. ಆತನ ಕಥೆಗಿಂತ ತನ್ನದು ಭಿನ್ನವಾಗಿರಬೇಕೆಂದೂ , ವಿಮರ್ಶಕರ ಮೆಚ್ಚುಗೆ ತನ್ನ ಕಥೆಗೆ ಹೆಚ್ಚು ಸಿಗಬೇಕೆಂಬುದು ಇವನ ಆಶಯ ಕೂಡ. ಆ ರಾತ್ರಿ ಕಥೆಗಾರ-೨ ಕೂಡ ತನ್ನ ಕಲ್ಪನೆಗಳನ್ನು ಒರೆಗೆ ಹಚ್ಚಿ ಕಥೆ ಹೆಣೆಯಲು ತೊಡಗುತ್ತಾನೆ. ತನ್ನ ಕಥೆಯಲ್ಲಿ ತನ್ನನ್ನು ಮತ್ತು ಕಥೆಗಾರ-೧ ನನ್ನು, ಇಬ್ಬರನ್ನೂ ಪಾತ್ರಗಳನ್ನಾಗಿಸುತ್ತಾನೆ. ಒಂದೇ ಘಟನೆಯನ್ನು ಇಬ್ಬರು ಕಥೆಗಾರರು ನೋಡಿ ಹೇಗೆ ತಮ್ಮ ತಮ್ಮ ಕಥೆಗಳ ಮೂಲಕ ಅಭಿವ್ಯಕ್ತಿಸತೊಡಗುತ್ತಾರೆ ಅನ್ನೋದರ ಬಗ್ಗೆ ಒಂದು ಕಥೆ ಕಥೆಗಾರ-೨ ನ ಲೇಖನಿಯಿಂದ ಅರಳುತ್ತ ಹೋಗುತ್ತದೆ. ಆ ಮೂಲಕ ಕಥೆಗಾರ-೧ ಘಟನೆಯನ್ನು ಅಭಿವ್ಯಕ್ತಿಸುವ ಪರಿಯನ್ನು ತಾನು ಹೇಗೆ ಮೀರಿಸುತ್ತೇನೆ ಮತ್ತು ತೌಲನಿಕವಾಗಿ ತನ್ನ ನಿಲುವು ಹೇಗೆ ಆತನ ನಿಲುವಿಗಿಂತ ಶ್ರೇಷ್ಠ ಎನ್ನುವುದನ್ನು ತನ್ನಿಬ್ಬರು ಕಥೆಗಾರರ ಪಾತ್ರಗಳ ಮೂಲಕ ಕಥೆಗಾರ-೨ ಅಭಿವ್ಯಕ್ತಿಸತೊಡಗುತ್ತಾನೆ. ಆ ಕಥೆ ಅರಳುತ್ತ ಹೋದಂತೆ ಅದರಲ್ಲಿ ಕಥೆಗಾರ -೪ ಮತ್ತು ಕಥೆಗಾರ -೫ ರ ವ್ಯಕ್ತಿತ್ವ ಅವರಿಬ್ಬರ ಸ್ಪಂದನಗಳ ಮೂಲಕ ಹಿರಿದಾಗುತ್ತಾ ಹೋಗುತ್ತದೆ. ಕಥೆಗಾರ-೪ ತನ್ನದೇ ಆದ ಆಲೋಚನೆಗಳಿಂದ ಘಟನೆಗೆ ಸ್ಪಂದಿಸುತ್ತಾ ಹೋದಂತೆ ಕಥೆಗಾರ-೫ ಆ ಘಟನೆಗೆ ಕಥೆಗಾರ-೪ ಕೊಡುವ ಸ್ಪಂದನದ ಪರಿಯನ್ನು ವಿಮರ್ಶಿಸುತ್ತಾ ಅದನ್ನು ತನ್ನ ಕಥೆಯ ಮೂಲಕ ಧಿಕ್ಕರಿಸುತ್ತ ಹೋಗುತ್ತಾನೆ. ಹೀಗೆ ಕಥೆಗಾರ-೪ ತನ್ನ ಅಭಿಪ್ರಾಯಗಳ ಮೂಲಕ ಕಥೆಗಾರ-೧ ನ ಚಿಂತನೆಗಳ ವಿಪರ್ಯಾಸದ ರೂಪವೇ ಆಗಿಬಿಡುತ್ತಾನೆ. ಇತ್ತ ಕಥೆಗಾರ-೫ , ಕಥೆಗಾರ-೩ ನ ಚಿಂತನೆಗಳನ್ನೇ ಹೊತ್ತರೂ ಅದೇ ಚಿಂತನೆಗಳ ಪೊಸಿಟಿವ್ ರೂಪವಾಗಿ , ಕಥೆಗಾರ -೨ ನ ಅಸಲು ಅಭಿಪ್ರಾಯಗಳ ದ್ಯೋತಕವಾಗಿ ಮೂಡುತ್ತಾನೆ. ಕಥೆಗಾರ-೨ ನ ಈ ಕಥೆಯಲ್ಲಿ ಘಟನೆ ಒಂದು ನೆಪ ಮಾತ್ರ. ಅಲ್ಲಿ ಅಸಲಿನಲ್ಲಿ ಆಗುತ್ತಿರುವುದು ಇಬ್ಬರು ವ್ಯಕ್ತಿಗಳ ತಾತ್ವಿಕ ಸಂಘರ್ಷ. ಹಾಗಾಗಿ ಘಟನೆ ಆ ಸಂಘರ್ಷಕ್ಕೆ ಪುಷ್ಟಿಯಾಗುವಂಥ ಸ್ವತ್ತುಗಳನ್ನು ತನ್ನಲ್ಲೇ ಸೃಷ್ಟಿಸಿಕೊಳ್ಳುತ್ತ , ಕಥೆಗಾರನ ಕಲ್ಪನಾಲೋಕದಲ್ಲಿ ಮಾರ್ಪಾಡಾಗುತ್ತ ತನ್ನದೇ ಒಂದು ರೂಪವನ್ನೂ ಪಡೆದುಕೊಳ್ಳುತ್ತದೆ. ತನ್ನ ಅಭಿಮಾನಿ ಓದುಗರಿಗೆ ಇದೊಂದು ಉತ್ತಮ ಭಾನುವಾರದ ಓದು ಆಗುವುದೆಂದು ಭಾವಿಸಿ ಭಾನುವಾರ ಪ್ರಕಟವಾಗುವ ವಾರ ಪತ್ರಿಕೆ-೨ ಗೆ ತನ್ನ ಕಥೆಯನ್ನು ಕಳುಹಿಸಲು ಕಥೆಗಾರ-೨ ಅಣಿಯಾಗುತ್ತಾನೆ.
*********
ಭಾನುವಾರ ಬೆಳಗ್ಗೆ ಏಳು ಗಂಟೆ. ಓದುಗ-೧ ತನ್ನ ಭಾನುವಾರದ ಎಂದಿನ ತರಹದ ದಿವ್ಯ ಔದಾಸಿನ್ಯದಿಂದ ಎದ್ದು ಟಿ.ವಿ ಯನ್ನು ಆನ್ ಮಾಡುತ್ತಾ ತನ್ನ ಮೆಚ್ಚಿನ ಪತ್ರಿಕೆ-೧ ನ್ನು ಓದಲು ತೆರೆಯುತ್ತಾನೆ. ತನ್ನ ನೆಚ್ಚಿನ ಕಥೆಗಾರ-೧ ನ ಕಥೆಯನ್ನು ಪತ್ರಿಕೆಯಲ್ಲಿ ಕಂಡು, ಪ್ರೀತಿಯಿಂದ ಅದನ್ನೆತ್ತಿ ಓದಲು ತೊಡಗುತ್ತಾನೆ. ಕಥೆಯನ್ನು ಓದಿ ಮುಗಿಸಿದ ಓದುಗ-೧ ಗೆ ಅದೆಂಥದೋ ದಿವ್ಯ ಆನಂದ.. ತನ್ನ ಭಾನುವಾರ ಅವನ ಮಟ್ಟಿಗೆ ಒಂದು ಸುಂದರ ದಿನವಾಗಿ ಮೂಡಿಬರುತ್ತಿದೆ ಅಂತ ಆತ ಆಲೋಚಿಸುತ್ತಿರುತ್ತಾನೆ. ಟಿ.ವಿ ಯಲ್ಲಿ ಒಂದು ಡಾಕ್ಯುಮೆಂಟರಿ ಅದರ ಪಾಡಿಗದು ಪ್ರಸಾರವಾಗುತ್ತಿದೆ. ವರದಿಗಾರನೊಬ್ಬ ತನ್ನೆಲ್ಲ ಒಂದು ವಾರದ ಪರಿಶ್ರಮವನ್ನು ಆ ಅರ್ಧ ಘಂಟೆಯ ಡಾಕ್ಯುಮೆಂಟರಿಯಲ್ಲಿ ತುಂಬಿಸಿ ನೋಡುಗನಿಗೆ ಮುಟ್ಟುವಂತೆ ಕಾಳಜಿಯಿಂದ ವಿವರಿಸುತ್ತಿರುತ್ತಾನೆ. ಒಂದು ಕ್ಷಣ ಆ ಡಾಕ್ಯುಮೆಂಟರಿಯನ್ನು ನೋಡಿದ ಓದುಗ-೧ ಗೆ ಅದೇನೋ ಕಸಿವಿಸಿಯಾಗಿ ಫೋನ್ ನ ಬಳಿ ಓಡುತ್ತಾನೆ.
ಭಾನುವಾರ ಬೆಳಗ್ಗೆ ಏಳು ಗಂಟೆ. .. ಓದುಗ-೨ ತನ್ನ ಅತ್ಯಂತ ಬುಸಿ ಸ್ಕೆಡ್ಯೂಲಿನ ನಡುವೆಯೂ ಪತ್ರಿಕೆ ಓದಲು ಮೀಸಲಿಟ್ಟ ತನ್ನ ಆ ಒಂದು ಗಂಟೆಯನ್ನು ಉಪಯೋಗಿಸಲು ಯೋಚಿಸುತ್ತ ಪತ್ರಿಕೆ -೨ ಅನ್ನು ಕೈಗೆತ್ತಿಕೊಳ್ಳುತ್ತಾನೆ.. ಪತ್ರಿಕೆಯನ್ನು ಬಿಡಿಸಿ ಓದಲು ತೊಡಗಿದಾಗ ಕಥೆಗಾರ-೨ ನ ಕಥೆಯನ್ನು ನೋಡಿ ದಿಗಿಲುಗೊಂಡು ಭಾನುವಾರದ ತನ್ನ ಸ್ಕೆಡ್ಯೂಲನ್ನು ಮೊಟಕುಗೊಳಿಸಿ , ಈ ದಿನ ಈ ಕಥೆಯನ್ನು ಓದಿ ವಿಮರ್ಶಿಸಲೇಬೇಕು ಅನ್ನುವ ಅಂಬೋಣ ಹೊತ್ತು ಓದಲು ತೊಡಗುತ್ತಾನೆ. ಓದಿ ಮುಗಿಸುವಷ್ಟರಲ್ಲಿ ಯಾರೋ ಮನೆಯವರು ಟಿ.ವಿ ಯಲ್ಲಿ ಬರುವ ಡಾಕ್ಯುಮೆಂಟರಿಯನ್ನು ನೋಡುತ್ತಿದ್ದವರು ಆತನನ್ನು ಕರೆಯುತ್ತಾರೆ. ಅದನ್ನು ನೋಡುತ್ತಾ ಅವಾಕ್ಕಾದ ಓದುಗ -೨ ಒಂದು ಕ್ಷಣ ಏನೂ ತೋಚದಂತಾಗಿ ನಿಂತು ಕೊನೆಗೆ ಫೋನ್ ನ ಬಳಿಗೆ ಹೆಜ್ಜೆ ಹಾಕುತ್ತಾನೆ.
ಭಾನುವಾರ ಬೆಳಗ್ಗೆ ಏಳು ವರೆ. ಕಥೆಗಾರ-೧ ಟಿ.ವಿ ಹಾಕುತ್ತಿದ್ದಂತೆ ಒಂದು ಕ್ಷಣ ದಂಗಾಗುತ್ತಾನೆ. ತಾನು ಆವತ್ತು ನೋಡಿನ ಘಟನೆಯ ಮೇಲೆ ವರದಿಗಾರನೊಬ್ಬ ಡಾಕ್ಯುಮೆಂಟರಿಯನ್ನು ಮಾಡಿ ನಿರೂಪಿಸುತ್ತಿದ್ದಾನೆ! ಅದೇ ಘಟನೆ, ಕಣ್ಣಾರೆ ಕಂಡಂತೆ ಪರಿಪರಿಯಾಗಿ ಬಿತ್ತರಗೊಳ್ಳುತ್ತಿದೆ. ಆದರೆ ತಾನು ಈ ಡಾಕ್ಯುಮೆಂಟರಿಯ ಭಾಗವಾಗುತ್ತೇನೆಂದು ಆತ ಕನಸಿನಲ್ಲೂ ಎಣಿಸಿರಲಿಲ್ಲ! ಒಂದು ಕ್ಷಣ ದಂಗು ಬಡಿದಂತಾಗಿ, ನಂತರ ಕಥೆಗಾರ-೨ ಗೆ ಈ ವಿಷಯ ತಿಳಿಸುವ ಮನಸ್ಸಾಗಿ ಫೋನಾಯಿಸಿ ಹೇಳುತ್ತಾನೆ. ಕಥೆಗಾರ-೨ ಕೂಡ ಅಷ್ಟೇ ವಿಸ್ಮಯದಿಂದ ಆ ಡಾಕ್ಯುಮೆಂಟರಿಯನ್ನು ನೋಡುತ್ತಾನೆ. ನೋಡು ನೋಡುತ್ತಾ ಅವನ ಆತ್ಮಬಲವೂ ಕುಗ್ಗುತ್ತ ಹೋಗುತ್ತಿದೆ. ವರದಿಗಾರ ಆ ಡಾಕ್ಯುಮೆಂಟರಿಯಲ್ಲಿ ಆ ಘಟನೆಯನ್ನು ವಿವರಿಸುತ್ತ, ಆ ಘಟನೆ ನಡೆದಾಗ ಇದ್ದ ಜನರ ನಡುವೆ ಕ್ಯಾಮರಾ ಹಾಯಿಸಿದ್ದಾನೆ. ಆ ಸ್ಥಳದಲ್ಲೇ ಇದ್ದ ಹತ್ತಾರು ಜನರು ಘಟನೆಯನ್ನು ನೋಡುತ್ತಾ ಇದ್ದರೂ ಹೇಗೆ ನಿರ್ವೀರ್ಯರಾಗಿ ಏನನ್ನೂ ಸ್ಪಂದಿಸದೇ ನಿಂತು ಬಿಟ್ಟಿದ್ದಾರೆ ಅನ್ನುವುದನ್ನು ಚಿತ್ರಿಸುತ್ತಿದ್ದಾನೆ. ಕಥೆಗಾರ-೧ ಮತ್ತು ಕಥೆಗಾರ -೨ ಇಬ್ಬರೂ ಘಟನೆಯನ್ನು ನೋಡುತ್ತಾ ನಿರ್ಲಜ್ಜರಂತೆ ನಿಂತು ಬಿಟ್ಟಿದ್ದಾರೆ. ಕ್ಯಾಮರ ಮಿಕ್ಕ ಜನರನ್ನು ಲೆಕ್ಕಿಸದೆ ಈ ಇಬ್ಬರು ಸೆಲೆಬ್ರಿಟಿ ಕಥೆಗಾರರ ಮೇಲೆಯೇ ಆಗಾಗ ಫಾಕಸ್ಸು ಆಗುತ್ತಿದ್ದಂತೆ ವರದಿಗಾರ ಆ ಇಬ್ಬರು ಕಥೆಗಾರರ ಟೊಳ್ಳುತನವನ್ನು ಜಾಲಾಡುತ್ತಿದ್ದಾನೆ ! ಆ ಇಬ್ಬರೂ ಕಥೆಗಾರರು ಆ ಘಟನೆಯನ್ನು ನೋಡಿಯೂ ಸ್ಪಂದಿಸದೇ ಇರುವುದನ್ನು ಧಿಕ್ಕರಿಸುತ್ತ ಒಂದಷ್ಟು ಜನ ಮಾನವತಾವಾದಿಗಳು , ಒಂದಷ್ಟು ಜನ ಜನಸಾಮಾನ್ಯರು ತಮ್ಮ ಅಭಿಪ್ರಾಯಗಳನ್ನು ರೊಚ್ಚಿಗೆದ್ದು ಹೊರಗೆಡವುತ್ತಿರುವುದು ಟಿ.ವಿ.ಯಲ್ಲಿ ಕಣ್ಣಿಗೆ ರಾಚುವಂತೆ ಪ್ರಸಾರವಾಗುತ್ತಿದೆ.
**************
ಈಗ ಸಮಯ ಭಾನುವಾರದ ಬೆಳಗ್ಗೆ ಎಂಟು ಗಂಟೆ.. ಆ ಊರಿನ ಮೂರು ಕಡೆಗಳಲ್ಲಿ ಮೂರು ಫೋನುಗಳು ರಿಂಗ್ ಆಗುತ್ತಿವೆ.
ಪತ್ರಿಕೆ-೨ಯಲ್ಲಿನ ಕಥೆಯನ್ನು ಓದಲು ಶುರುಹಚ್ಚಿ, ಟಿ.ವಿ ನೋಡುತ್ತಿದ್ದಂತೆ ಅರ್ಧಕ್ಕೆ ನಿಲ್ಲಿಸಿದ್ದ ಕಥೆಗಾರ-೧ ರಿಂಗಣಿಸುತ್ತಿದ್ದ ಫೋನಿನ ರಿಸೀವರ್ ಬಳಿ ಹೋಗುತ್ತಿದ್ದಾನೆ. ಪತ್ರಿಕೆ-೧ ನ್ನು ಕೆಳಗಿಟ್ಟು ಕಥೆಗಾರ-೨ ಕೂಡ ತನ್ನ ರಿಸೀವರ್ ಬಳಿ ಹೆಜ್ಜೆ ಹಾಕುತ್ತಿದ್ದಾನೆ.
ಇತ್ತ ವರದಿಗಾರ ಬೆಳಗ್ಗಿನಿಂದ ಅಸಂಖ್ಯ ಬಾರಿ ರಿಂಗ್ ಆಗುತ್ತಿದ್ದ ತನ್ನ ಫೋನನ್ನು ಲೆಕ್ಕಿಸದೆ, ತನ್ನ ಭಾನುವಾರವನ್ನು ಆರಾಮವಾಗಿ ಕಳೆಯುವ ಮನಸ್ಸಾಗಿ ಟೀಪಾಯಿಯ ಮೇಲಿದ್ದ ಪತ್ರಿಕೆ-೧ ಮತ್ತು ಪತ್ರಿಕೆ-೨ನ್ನು ಎತ್ತಿ ಭಾನುವಾರದ ಓದಿಗೆ ತನ್ನ ಆರಾಮ ಕುರ್ಚಿಯತ್ತ ಸಾಗುತ್ತಿದ್ದಾನೆ...
Sunday, January 9, 2011
ಒಲವಿನೋಲೆ ೪ : ಎಪ್ಪತ್ತರ ಹಾಡು ಗುನುಗುತ್ತ, ಎಪ್ಪತ್ತರಲ್ಲಿ ಸಾಗುತ್ತ..
ಕಾಯುವಿಕೆಯ ಕಾತರಕುವರ,
ಹೊತ್ತಲ್ಲದ ಹೊತ್ತಲ್ಲಿ ನಿದ್ದೆಯಿಂದೆದ್ದು ಕಣ್ಣು ಪಿಳಿಪಿಳಿ ಗುಟ್ಟಿ ಆಗಷ್ಟೇ ಕನಸಲ್ಲಿ ಬಂದು ಹೋದ ನಿನ್ನ ಕನವರಿಕೆಯಲ್ಲಿ ಮತ್ತೆ ನಿದ್ದೆ ಹೋಗುವುದಿದೆಯಲ್ಲ..ಅದರಷ್ಟು ಖುಷಿ ಕೊಡುವ ವಿಷಯ ಇನ್ನೊಂದಿಲ್ಲ ಅನ್ನಿಸುತ್ತದೆ. ಕನಸಿಗೂ ಕನವರಿಕೆಗೂ ಏನಾದ್ರು ವ್ಯತ್ಯಾಸ ಇದೆಯಾ ಅಂತ ಒಮ್ಮೊಮ್ಮೆ ನೆನೆಸಿದಾಗ ನನ್ನಷ್ಟಕ್ಕೆ ನಕ್ಕಿದ್ದಿದೆ, ಎರಡರಲ್ಲೂ ನಿನ್ನದೇ ಇರವಿನ ಮೆರವಣಿಗೆಯಿರುವಾಗ ವ್ಯತ್ಯಾಸಗಳ ಹಂಗ್ಯಾಕೆ ಅಲ್ವ?
ಕನಸಿನೂರ ಮಹಲಿನಲ್ಲಿ ನಿನ್ನ ಚಲನದಿಂದ
ಮನಸಿನೂರಿನಲ್ಲಿ ಬರಿಯ ಮಲ್ಲಿಗೆಯದೇ ಗಂಧ..
ಆವತ್ತು ಐವತ್ತೇ ಮೆಟ್ಟಿಲುಗಳು ಬಾಕಿಯಿದ್ದವು, ಮುಳ್ಳಯ್ಯನಗಿರಿಯ ತುತ್ತ ತುದಿಯ ಪುಟ್ಟೇಪುಟ್ಟ ದೇಗುಲಕ್ಕೆ. "ನನ್ನಿಂದಾಗಲ್ಲ ಕಣೋ ಇನ್ನು ಹತ್ತೊದಿಕ್ಕೆ" ಅಂತ ರಂಪ ಹಿಡಿದು ನಾನು ಅಲ್ಲೇ ಕುಳಿತುಬಿಟ್ಟಿದ್ದೆ. ಎರಡೂವರೆ ಮೈಲು ಹತ್ತಿಕೊಂಡು ಬಂದವಳಿಗೆ ಇನ್ನು ಕಣ್ಣಳತೆಯಷ್ಟೇ ದೂರದಲ್ಲಿರುವ ಶಿಖರಕ್ಕೆ ಹೋಗಲು ದಾಡಿಯೇನಲ್ಲ, ನಿನ್ನ ಪುಸಲಾಯಿಸುವಿಕೆಯ ಇನ್ನೊಂದು ಪುಟ್ಟ ಡೋಸ್ ಬೇಕಿತ್ತು ಅಷ್ಟೇ... ನಾನು ಹಾಗೆ ಕುಳಿತಾಗಲೆಲ್ಲ ನೀನು ನನಗಾಗಿ ತೋರಿಸುವ ಪುಟ್ಟ ಪುಟ್ಟ ಆಸೆಗಳಿವೆಯಲ್ಲ, ಅವು ನಂಗೆ ತುಂಬಾ ತುಂಬಾ ಇಷ್ಟ..ಯಾಕೆಂದರೆ ಅವೆಲ್ಲ ನೀನು ನನಗಾಗಿಯೇ ಮೀಸಲಿಡುವ ಸೋ ವೆರಿ ಸ್ಪೆಷಲ್ ಕ್ಷಣಗಳು..
ನಿನ್ನ ಕಾಡೊ ನೆಪದಲ್ಲಿನ ನನ್ನದೆಲ್ಲ ಹಠಗಳು
ನೀನು ಕಟ್ಟಿ ಕೊಟ್ಟ ಪುಟ್ಟ ನೆನಪಿನೊಲವ ಪುಟಗಳು
ಈ ಸಾರಿ ನಾನು ಹಾಗೆ ಹಠ ಕಟ್ಟಿದಾಗ ನೀನು ನನಗೆ ಪ್ರಾಮಿಸ್ ಮಾಡಿದ್ದು 'ಆಗುಂಬೆಗೆ ಬೈಕ್ ರೈಡ್' .. ನಿಜ ಹೇಳಲಾ ? ನಿನ್ನಷ್ಟೇ ನನಗೆ ನಿನ್ನ ಬೈಕು ಕೂಡ ಇಷ್ಟ ಕಣೋ. ಇಬ್ಬನಿಯ ಪಸೆಯಲ್ಲಿ ತೋಯ್ದೆದ್ದ ತಿರುವು ಮುರುವು ಘಾಟಿ ರೋಡುಗಳಲ್ಲಿ ಎಪ್ಪತ್ತರ ಹಾಡುಗಳನ್ನು ಗುನುಗುತ್ತ ನಿನ್ನ ಹೆಗಲಿಗೆ ತಲೆಯಿಟ್ಟು ತಬ್ಬಿಸಾಗುವುದಿದೆಯಲ್ಲ , ನಾನು ಬದುಕಿನಲ್ಲಿ ಇಷ್ಟಪಡುವ ಅತಿ ಸಂತಸದ ಕ್ಷಣಗಳವು. ಎತ್ತಲಿಂದಲೋ ತೂರಿಬರುವ ಹಿತಗಾಳಿಗೆ ಮೈಯೊಡ್ಡಿ ಎಪ್ಪತ್ತರಲ್ಲಿ ಸಾಗುವುದು , ಅದು ನಾನು-ನೀನು ಮಾತ್ರ ಇರುವ ಕನಸಿನೂರ ಪಯಣ. ಪ್ರತಿ ಬಾರಿ ನೀನು ಟ್ರೆಕ್ಕಿಂಗ್ ಗೆಂದು ಜಾಗ ಹುಡುಕಲು ಸತಾಯಿಸಿದಾಗ I'm least bothered .
ಬೆಳ್ಳಂಬೆಳಗ್ಗೆ ಎದ್ದು ನೂರುಗಟ್ಟಲೆ ಮೈಲು ದೂರ ನಿನ್ನೊಡನೆ ಜೀಕುತ್ತ ಸಾಗುವುದೇ ಒಂದು ಹಬ್ಬವಾಗಿರುವಾಗ ಅದ್ಯಾವೂರಾದ್ರೂ doesn't matter ... ಆಗಿಂದಾಗ್ಗೆ ತಪ್ಪುವ ದಾರಿಗಳು, ಹೆಂಗೆಂಗೋ ಸೇರಿಕೊಳ್ಳುವ ಹಳ್ಳಿಗಳು, ನಮಗೆಂದೇ ಸಿಕ್ಕಿ ಬೈಕು ನಿಲ್ಲಿಸಿದಾಗ ಸಲಾಮು ಹೊಡೆದು ದಾರಿ ಹೇಳುವ ಆತ್ಮೀಯ ದಾರಿಹೋಕರು, ಹೆಸರಿಲ್ಲದ ಗೂಡಂಗಡಿಗಳ ಮುರುಕು ಬೆಂಚಿನಲ್ಲಿ ಕುಳಿತು ಹೀರಿದ ಅಪರಿಮಿತ ರುಚಿಯ ಚಹಾಗಳು... ನಿನ್ನ ಜೊತೆ ಕನಸಿನ ಜೋಳಿಗೆ ಕಟ್ಟಿ ಹೊರಟೆನೆಂದರೆ ಅದು ಸಾಲು ಸಾಲು ಅಚ್ಚರಿಗಳ, ನನ್ನನ್ನೇ ನಾನು ಕಂಡುಕೊಳ್ಳುವ ಹೊಸತನದ ತೇರು..
ನನ್ನ ಕನಸ ಗಾಳಿಪಟಕೆ ನಿನದೆ ಒಲವ ಸೂತ್ರ
ಬದುಕ ನಾಟಕದಲಿ ಸಿಕ್ಕ ನನ್ನತನದ ಪಾತ್ರ...
ಪಯಣ ಇಷ್ಟೊಂದು ಸಂಗತಿಗಳನ್ನು ಕಲಿಸಿಕೊಡುತ್ತೆ ಅಂತ ನಿನ್ನಿಂದಲೇ ನಾನು ಅರಿತುಕೊಂಡಿದ್ದು..ತಿಂಗಳ ಮುಂಚೆ ಟ್ರಾವೆಲ್ಗಳಲ್ಲಿ ರೆಸರ್ವೇಶನ್ ಮಾಡಿಸಿ, ಹೋಟೆಲುಗಳಲ್ಲಿ ರೂಮು ಕಾದಿರಿಸಿ, ಟೂರ್ ಗೈಡ್ ಕರೆತಂದಲ್ಲೆಲ್ಲ ಅಲೆದು, ಅವನು ತೋರಿಸಿದಲ್ಲಿ ಫೋಸು ಕೊಟ್ಟು ನಿಂದು, ಅವನ ಕೈಯಲ್ಲೇ ಫೋಟೋ ಹೊಡೆಸಿಕೊಂಡು ದಿನ ಬೆಳಗಾಗುವುದರೊಳಗೆ ಫೇಸುಬುಕ್ಕಿನಲ್ಲೋ, ಆರ್ಕುಟ್ಟಿನಲ್ಲೋ ಹಾಕಿ ಲೈಕಿಸಿಕೊಳ್ಳುವ ಆ ನನ್ನ ಗೆಳೆಯರಿಗೆ ಹೋಲಿಸಿದರೆ , you are so different ಕಣೋ.. ನೀನಾಯಿತು, ನಿನ್ನ ಬೈಕಾಯಿತು..ಮೈಲುದ್ದದ ದಾರಿಯಾಯಿತು..ಇವೆಲ್ಲದರ ಜೊತೆ ನಿನಗಾತು ಕುಳಿತು ಕೊಳ್ಳುವ ನಾನು..ಇಷ್ಟಿರುವಾಗ ಸಮಯದ ಹಂಗು ಬೇಕಾ ನಮಗೆ?
'ಆಗುಂಬೆಯ ಬೈಕ್ ರೈಡ್' ನೀನು ಪ್ರಾಮಿಸ್ ಮಾಡಿದ್ರೂ ಇನ್ನೂ ಚೂರು ನಿನ್ನ ಕಾಡೋಣ ಅಂತ ಅನ್ನಿಸ್ತು. "ನೀನೇನು ಹೇಳಿದ್ರು ನಂಗೆ ಒಂದು ಹೆಜ್ಜೆ ಮುಂದಿಡೋಕೆ ಆಗಲ್ಲ" ಅಂತ ರಂಪ ಮುಂದುವರೆಸಿದೆ... ಏನು ಹೇಳ್ತಾನೆ ನನ್ನ ಮುದ್ದು ಮಜ್ನು ಅಂತ ಮನಸು ಢವಗುಟ್ಟುತ್ತಿತ್ತು. ನೀನೇನೂ ಹೇಳಲಿಲ್ಲ..ನನ್ನ ಬಳಿಯೇ ಕುಳಿತುಬಿಟ್ಟೆ..ನಾನು ದಿಟ್ಟಿಸುವ ದೂರದ ಬೆಟ್ಟ ಸಾಲನ್ನೇ ದಿಟ್ಟಿಸುತ್ತ.. ಒಂದು ಕ್ಷಣ ನಾನು ನಿನ್ನೆಡೆಗೆ ತಿರುಗಿ ನೋಡಿದೆ..ನನ್ನ ಮಜ್ನು ಇಷ್ಟೊಂದು ಚೆಲುವನಾ ! ನನಗರಿವಿಲ್ಲದಂತೆಯೇ ನನ್ನ ಕೈಗಳನ್ನು ನಿನ್ನ ಕೈಗಳ ಅತಿ ಸಮೀಪವೇ ಇರಿಸಿದೆ. ನನ್ನ ಆಸೆ ನಿನ್ನಂತ ಕಳ್ಳನಿಗೆ ಗೊತ್ತಾಗದ್ದೇನೂ ಅಲ್ಲ..ಆದ್ರೂ ಏನೂ ಗೊತ್ತಿಲ್ಲದವನಂತೆ ಕುಳಿತಲ್ಲಿಂದ ಎದ್ದುಬಿಟ್ಟು ಮತ್ತೆ ನಡೆಯಲು ಶುರುಹಚ್ಚಿಬಿಟ್ಟೆ! ಒಂದು ಮಾತೂ ಆಡದೆ..ಆ ಕ್ಷಣಕ್ಕೆ ನನಗೆ ತಣ್ಣೀರು ರಾಚಿದಂತೆ ಅನಿಸಿದ್ದು ಸುಳ್ಳಲ್ಲ.. ಆದ್ರೆ ನಿಜ ಹೇಳಲಾ, ನಿನ್ನ ಈ ಪ್ರಜ್ಞೆಯ ನಡುವಳಿಕೆಯೇ ನಾನು ನಿನ್ನಲ್ಲಿ ಅತ್ಯಂತ ಇಷ್ಟ ಪಡುವ ಸೊತ್ತು. ಅದೆಷ್ಟು ಕಾಳಜಿಯಿಂದ ಒಂದು ಸಂಬಂಧವನ್ನು ಕಾಯ್ದುಕೊಳ್ಳ ಬೇಕೆಂಬುದನ್ನು ನೀನು ಬಾರಿ ಬಾರಿಯೂ ನನಗೆ ಕಲಿಸುತ್ತಿರುತ್ತೀಯ. ನನ್ನ ಮುದ್ದು ಮಜ್ನು, you are my friend , guide & philosopher..
ಆಡದುಳಿದ ಮಾತುಗಳಿಗೆ ಅರ್ಥ ಹುಡುಕಬೇಕು
ಪ್ರೀತಿ ಕಲಿಯೊ ಮೊದಲು ನಾನು ಬದುಕ ಕಲಿಯಬೇಕು
ಈ ಬಾರಿ ನಾನೇನೂ ರಂಪ ಮಾಡಲಿಲ್ಲ. ಸುಮ್ಮನೆ ನಿನ್ನ ಹಿಂಬಾಲಿಸುತ್ತಾ ನಡೆದೆ...ನಿನ್ನ ಹೆಜ್ಜೆಗಳ ಹಾದಿಯಲ್ಲೇ ನನ್ನ ಕನಸಿನ ಹೆಜ್ಜೆಗಳನ್ನಿಡುತ್ತ..ನನ್ನೊಳಗಿದ್ದ ನೀನೆಂಬ ಹುಚ್ಚುತನ ಅದಾಗಲೇ ನೀನೆಂಬ ಮೆಚೂರ್ಡ್ ಫೀಲಿಂಗ್ ಗೆ ದಾರಿಮಾಡಿ ಕೊಟ್ಟಾಗಿತ್ತು . ಅದು ಹೇಗೆ ನಾನು ಆ ರೀತಿ ಬದಲಾದೇನೋ..ಆ ಸಂಜೆ ನಾವು ಗಿರಿಯ ತುದಿ ತಲುಪಿದ್ವಿ, ತುದಿಯಲ್ಲಿರುವ ಗುಡಿಯಲ್ಲಿ ಊಟವನ್ನೂ ಮುಗಿಸಿದ್ವಿ , ಕಣ್ಣ ನೇರಕ್ಕೆ ಸಾಗುವ ಮೋಡಗಳ ಸಾಲುಗಳನ್ನು ತಾಸಿಗೂ ಹೆಚ್ಚು ಕಾಲ ದಿಟ್ಟಿಸಿದ್ವಿ.. ತುಂಬಾ ತುಂಬಾ ಮಾತೂ ಆಡಿದ್ವಿ.. ಆದ್ರೂ ನಮ್ಮಿಬ್ಬರ ನಡುವೆ ಇದ್ದ ಆ ತುಂಟತನ ಅದ್ಹೇಗೋ ಆ ಸಂಜೆಯ ತಂಗಾಳಿಯಲ್ಲಿ ಕೊಚ್ಚಿಕೊಂಡು ಹೋದಂತೆ ಅನ್ನಿಸಿ ನಿನ್ನ ಜೊತೆಯಿರುವಾಗಲೇ ನಿನ್ನನ್ನು ಮಿಸ್ ಮಾಡಿಕೊಂಡಂತೆ ಮನಸ್ಸು ಕಸಿವಿಸಿಗೊಂಡಿತ್ತು.. ಆದ್ರೆ ಆ ಕಸಿವಿಸಿಗೆ ಕಾಂಪ್ರೋಮೈಸ್ ಆಗಿ ಇನ್ನೇನೋ ಸಿಕ್ಕಿದ್ದಂತೆ ಅನ್ನಿಸಿ ಒಳಗೊಳಗೇ ಪುಟ್ಟ ಖುಷಿಯೂ ಇತ್ತು.
ನನ್ನ ನಿನ್ನ ನಡುವಿನಲ್ಲಿ ನುಸುಳಿ ಹೋದ ಗಾಳಿ
ಏನ ಕೊಚ್ಚಿಕೊಂಡು ಹೋಯ್ತು ಏನ ಉಳಿಸಿತಿಲ್ಲಿ..
ನನ್ನ ಅತ್ಯಂತ ಪ್ರೀತಿಯ ತುಂಟ ಸುಕುಮಾರ ಮೆಲ್ಲ ಮೆಲ್ಲನೆ ಒಬ್ಬ ಜವಾಬ್ದಾರಿಯುತ ಜೀವದ ಗೆಳೆಯನಾಗಿ ನನ್ನೆದುರೇ ಹೊಮ್ಮಿಕೊಂಡು ಬಿಟ್ಟಿದ್ದ. ಆ ರಾತ್ರಿಯ ನನ್ನ ಕನಸುಗಳೆಲ್ಲ ಫುಲ್ ಡಿಫರೆಂಟ್ ಗೊತ್ತಾ..ಆವತ್ತಿನವರೆಗೂ ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದಾಗಲೆಲ್ಲ ನಿನ್ನನ್ನು ಹೇಗೆಲ್ಲ ಗೋಳು ಹೊಯ್ದುಕೊಳ್ಳಬಹುದು ಅಂತಾನೆ ಸ್ಕೆಚ್ ಹಾಕುತ್ತಿದ್ದೆ. ಆದ್ರೆ ಅಂದಿನಿಂದ ಅದೇಕೋ ಕನಸುಗಳು ಬೆಚ್ಚನಾದವು, ನೆನಪುಗಳು ಹಚ್ಚನಾದವು, ಕನವರಿಕೆಗಳು ಹುಚ್ಚನಾದವು....
ಬಿದಿಗೆ ಚಂದ್ರನಲ್ಲಿ ನಿನ್ನ ಬಿಂಬ ಕಾಣೋ ಮೊದಲು
ಮನದ ಮೂಲೆಯಲ್ಲಿ ನಮ್ಮ ಮುತ್ತು ಅದಲು ಬದಲು
ಇದೀಗ 'ಆ' ದಿನವೂ ಬಂದೆ ಬಿಟ್ಟಿದೆ. ನಾಳೆ ನೀನು ನನಗೆಂದೆ ಪ್ರಾಮಿಸ್ ಮಾಡಿದ ಆಗುಂಬೆಯ ಬೈಕ್ ಟ್ರಿಪ್. ಈ ಬಾರಿ ನಾನು ನಿನ್ನ ರೇಗಿಸಲ್ಲ..ರಂಪವನ್ನೂ ತೆಗೆಯೋಲ್ಲ. ಆದ್ರೂ ನೋಡ್ತಿರು, ಈ ಬಾರಿ ನಿನ್ನ ಈ ಲೈಲಾ ನಿನಗೆ ಇನ್ನಿಲ್ಲದಷ್ಟು ಇಷ್ಟವಾಗ್ತಾಳೆ..ನೀನು ಯಾವತ್ತೂ ಮರೆಯಲ್ಲ, ಅಂಥ ಮೆಮೊರೆಬಲ್ ಅಡೋರಬಲ್ ಟ್ರಿಪ್ ಇದಾಗುತ್ತೆ..ನೋಡುತ್ತಿರು..
ಹೇಗೆಂತಿಯಾ? ಸಸ್ಪೆನ್ಸ್ :-)
ಇಂತಿ ನಿನ್ನ ರಾಜ್ಕುಮಾರಿ..
Wednesday, December 22, 2010
ಅಲೆಗಳ ನೆಪದಲಿ...
Saturday, December 18, 2010
'ಚಕ್ರಬಂಧ'ದಲ್ಲಿ ಒಂದು ಕೈ, ಒಂದು ಟ್ರೈ ...

Sunday, November 28, 2010
ಬದನೆ ಬೋಧನೆಯೆಂಬೊ ರಿವೈಂಡ್ ರಾಗ...
Tuesday, June 8, 2010
ಒಲವಿನೋಲೆ ೩ : ನಿನ್ನ ಕನಸಿನೂರ ಬಸ್ಸಿಗೆ ಟಿಕೇಟು ಪಡೆಯುತ್ತ...
ಆಕಸ್ಮಿಕಗಳ ಅವಿರತಗಣಿಯೇ,
ಒಮ್ಮೆಮ್ಮೆ ದಿಗಿಲಾಗುತ್ತದೆ. ನಾ ಕೂಡಿಟ್ಟ ಅಷ್ಟೂ ಕನಸುಗಳಲ್ಲೂ ನುಸುಳಿಬಿಟ್ಟ ನೀನೆಂಬ ನನ್ನತನಕ್ಕೆ ಅದೇನಂತ ಹೇಳಲಿ..ಬಿಲ್ ಕುಲ್ ನನ್ನವೇ ಅಂತ ವರ್ಷಾನುಗಟ್ಟಲೆಯಿಂದ ಸಾವಧಾನವಾಗಿ ಗುಟ್ಟಾಗಿ ಬಚ್ಚಿಟ್ಟ ಕನಸುಗಳಲ್ಲೆಲ್ಲ ಈಗ ನಿನ್ನ ಆಗಮನದ ವಸಂತೋತ್ಸವ. ಒಂದೊಂದನ್ನೇ ನಿನ್ನೊಡನೆ ಹಂಚಿಕೊಳ್ಳುತ್ತ ಕಳೆದ ಕ್ಷಣಗಳನ್ನು ಅದೇನಾದರೂ ಪೋಣಿಸಲು ಬರುತ್ತಿದ್ದರೆ ಅದನ್ನೇ ಮಾಲೆಯಾಗಿಸಿ ನಿನಗೆ ಮೊದಲ ಉಡುಗೊರೆಯಾಗಿ ಕೊಡುತ್ತಿದ್ದೆ..
ಕೊಡಲು ಬಲ್ಲೆ ನಿನಗದೊಮ್ಮೆ ನನ್ನ ನಾನೇ ಉಡುಗೊರೆ
ನೀನು ಕೊಟ್ಟ ನೆನಪನದಕೆ ತೂಗಬಹುದೆ ಆದರೆ..
ಆ ದಿನ ಇನ್ನೂ ಹಸಿಹಸಿಯಾಗಿ ನೆನಪಿನಲ್ಲಿದೆ..ನಾನವತ್ತು ಹುಡುಗಿ ನೋಡುವ ಶಾಸ್ತ್ರಕ್ಕೆ ಅಂತ ನಿಮ್ಮ ಮನೆಗೆ ಮೊದಲ ಬಾರಿ ಬಂದಾಗ ಕಾರು ಪಾರ್ಕು ಮಾಡಲು ಮೂರು ಬಾರಿ ಹಿಂದೆ ಮುಂದೆ ರಿವರ್ಸು ಫಸ್ಟು ಅಂತ ಒದ್ದಾಡುತ್ತಿದ್ದರೆ ನೀನದನ್ನು ನಿಮ್ಮನೆಯ ಕಿಟಕಿಯಿಂದ ಕದ್ದು ನೋಡಿ ನಕ್ಕಿದ್ದೆ. ಬೆಪ್ಪನಂತೆ ಅನ್ನಿಸಿತ್ತು ನನಗೆ.. 'ಛೆ,ಎಂಥ ಫ್ಲಾಪ್ ಷೋ .. ಕಿಟಕಿಯಲ್ಲಿ ನೋಡಿದವಳು ನನ್ನ ಹುಡುಗಿ ಅಲ್ಲದಿದ್ದರೆ ಸಾಕು' ಅಂತ ಪ್ರಾರ್ಥಿಸುತ್ತ ಒಳಕ್ಕೆ ಬಂದಿದ್ದೆ. ಅದ್ಯಾವುದೋ ಗಳಿಗೆಯಲ್ಲಿ ನಿನ್ನನ್ನು ಬರಹೇಳಿದರಲ್ಲ ,ನೀನು ಹೊರ ಬಂದಾಗಿದ್ದ ಆ ಮುಗುಳ್ನಗೆ ನನ್ನನೆಷ್ಟು ಕೆಣಕಿದ್ದಿರಬೇಡ..ಕಿಟಕಿಯಲ್ಲಿ ನೋಡಿದ್ದು ಇನ್ಯಾರೋ ಅನ್ನುವವರಂತೆ ನಾನೂ ಫಸ್ಟ್ ಟೈಂ ನೋಡೋನಂತೆ ನಟಿಸಿದ್ದೆ.
ಆದ್ರೆ, ನಮ್ಮಿಬ್ಬರನ್ನೇ ಮಾತಿಗೆ ಬಿಟ್ಟಾಗ ನೀನು ಅದೇ ವಿಚಾರ ಇಟ್ಟುಕೊಂಡು ಶುರುಹಚ್ಚಬೇಕ? ನೀನು ಆಡಿದ್ದ ಮೊದಲ ಮಾತುಗಳು ಇನ್ನೂ ನೆನಪಿವೆ.. "ಗೇಟಿನ ಬಳಿ ಚೂರು ದಿಣ್ಣೆಯಿದೆ. ಮುಂದಿನಸಲ ನೋಡ್ಕೊಂಡು ಬನ್ನಿ".. ಹಾಗೆ ಹೇಳುತ್ತಿದ್ದವಳ ಮುಖ ನೆಲಕ್ಕೆ ನೇರ.. ಆದ್ರೆ ಕಣ್ಣುಗಳು ಕದ್ದು ನನ್ನುತ್ತರಕ್ಕೆ ಇಣುಕುವಂತಿದ್ದವು.. "ಮುಂದಿನ ಸಲ"... ಅಂದ್ರೆ ?.. ನನಗೆ ಗೊತ್ತು, ಅದನ್ನು ನಾನೇ ಅರ್ಥ ಮಾಡಿಕೋಬೇಕು ಅಂತ ನೀನು ಎಕ್ಸ್ಪೆಕ್ಟ್ ಮಾಡಿದ್ದೆ.. ಇನ್ನೇನಿದ್ರೂ ಒಪ್ಪಿಗೆ ಕೊಡುವ ಬಿಡುವ ಸರದಿ ನನ್ನದೇ.."ಮುಂದಿನ ಸಲ ಬರುವ ಮೊದಲು ನೀವದನ್ನು ಸರಿ ಮಾಡಿಸುತ್ತೀರಲ್ವ?" ನೀನು ಫಾಸ್ಟಾದರೆ ನಾನು ಡಬಲ್ ಫಾಸ್ಟು..
ನಿನ್ನ ಮಾತನೊಪ್ಪಿಕೊಂಡೆ ನನ್ನ ನಾನೆ ಮರೆತು
ಬೆರೆತು ಬಾಳುವಾಸೆ ಅಲ್ಲೇ ಚಿಗುರಿಕೊಂತು ಮೊಳೆತು..
ಆ ದಿವಸ ನಿನ್ನ ಮೊಬೈಲು ನಂಬರ್ರು ಚೀಟಿಯಲ್ಲಿ ಬರಕೊಟ್ಟಿದ್ದು ನೆನಪು..ವಾಪಸು ನಾ ಮನೆ ತಲುಪುವ ಮೊದಲೇ ಕಿಸೆಯೊಳಗೆ ಕಲರವ. "ತಲುಪಿದ್ರಾ?" ... unknown ನಂಬರ್ ನ ಮೆಸೇಜು. ನಿನ್ನದೇ..ಸಂಶಯವೇ ಇಲ್ಲ.. ಆದ್ರೆ ಏನಂತ ಹೆಸರು ಸ್ಟೋರ್ ಮಾಡಲಿ? ರಿಪ್ಲೈ ಅಂತೂ ಆಗಲೇ ಮಾಡಿದ್ದೆ , ಆದ್ರೆ ನಿನ್ನ ಹೆಸರನ್ನು ಸ್ಟೋರ್ ಮಾಡಲು ಆ ರಾತ್ರಿ ಎಷ್ಟು ಹೆಣಗಾಡಿದ್ದೆ ಗೊತ್ತ..
ನಮ್ಮ ಬಂಧಕಿನ್ನೂ ನಾನು ಹೆಸರ ಹುಡುಕೆ ಇಲ್ಲ
ಆಗಲೇನೆ ನಿನ್ನ ಹೆಸರ ಗುನುಗು ಕಾಡಿತಲ್ಲ!
ಈ ಒಂದೂವರೆ ತಿಂಗಳಿನಲ್ಲಿ ನಾನು ನೀನು ಈ ಮೊಬೈಲ್ ಎಂಬ ಪುಟ್ಟ ಪೋರನನ್ನ ಅದೆಷ್ಟು ಪೀಡಿಸಿದ್ದೇವಲ್ವ..ಅದೆಲ್ಲವನ್ನೂ ಮರೆತು ಆತ ನಮಗೆಂದೇ ಕಟ್ಟಿಕೊಟ್ಟ ಈ ಪುಟ್ಟ ಕನಸಿನೂರಿಗೆ ಏನನ್ನೋಣ? ಕೊಂಚ ಕೊಂಚವೇ ನಿನ್ನೆಡೆಗೆ ನಾನು ನನ್ನ ಲೋಕವನ್ನು ತೆರೆದಿಡುತ್ತಿದ್ದೆನಲ್ಲ, ಅವಾಗೆಲ್ಲ ನನಗೇ ಗೊತ್ತಿಲ್ಲದಂತೆ ನನ್ನಲ್ಲಾದ ಪುಳಕಕ್ಕೆ ಅಚ್ಚರಿಪಟ್ಟಿದ್ದೆ. ನಿಜ ಹೇಳಲಾ, ನಿನ್ನೊಡನೆ ಬಿಚ್ಚಿಟ್ಟ ನನ್ನವೇ ಆದ ಕನಸುಗಳಿವೆಯಲ್ಲ, ಅವನ್ನೆಲ್ಲ ನಾನು ನನ್ನ ಬೆಸ್ಟು ದೋಸ್ತುಗಳಲ್ಲೂ ಹಂಚಿಕೊಂಡಿರಲಿಲ್ಲ...ಹಂಚಿಕೊಂಡಿದ್ದರೂ ನಿನ್ನಿಂದ ಸಿಕ್ಕಷ್ಟು ಆಪ್ತ ಪ್ರತಿಸ್ಪಂದ ಸಿಗುತ್ತಿತ್ತೋ ನನಗಂತೂ ಸಂಶಯ.. ಕಮಿಟ್ಮೆಂಟ್ ಅನ್ನೋದು ಇಷ್ಟೊಂದು ಸುಂದರ ಅನುಭವವಾ? ಗೊತ್ತಿರಲಿಲ್ಲಪ್ಪ..
ಸ್ವರ್ಗದಲ್ಲಿ ಇಂಥ ದಿನಗಳೆಲ್ಲ ಸಿಗವು ಎಂದು
ನಿನ್ನ ಜೊತೆಗೆ ಕಳೆದ ಗಳಿಗೆ ಲೆಕ್ಕವಿಡುವೆ ಇಂದು
ನೀನು ನಿನ್ನ ಆಶಾಗೋಪುರವನ್ನು ನನಗಾಗಿ ತೆರೆಯುತ್ತ ಒಳಹೊಕ್ಕೆಯಲ್ಲ, ಅದೆಂಥ ಮಧುರಾನುಭೂತಿ ಗೊತ್ತ? ಇಷ್ಟು ಚನ್ನಾಗಿ ಕನಸು ಕಾಣೋದು ಅದೆಲ್ಲಿಂದ ಕಲಿತೆ? ನಿನ್ನೆಲ್ಲ ಪುಟ್ಟ ಪುಟ್ಟ ಬಯಕೆಗಳಲ್ಲು ನನಗೆ ಅಂತ ಒಂದಷ್ಟು ಜಾಗಗಳನ್ನು ಕಾದಿರಿಸಿದ್ದೀಯಲ್ಲ, ನನಗೆ ಚೂರು ಮೈನಡುಗೋದು ಆವಾಗಲೇ. ನಿನ್ನ ಕನಸುಗಳೆಲ್ಲ ನನಗೆ ಜವಾಬ್ದಾರಿಗಳು ಕಣೆ ಹುಡುಗಿ..ಆದ್ರೆ ಈ ಕನಸುಗಳ ಹಾದಿಯಲ್ಲಿ ನಿನ್ನೊಡನೆ ಗುನುಗುತ್ತ ಜೀಕುತ್ತ ಹೆಜ್ಜೆ ಹಾಕುವುದೇ ಒಂದು ಶರತ್ಸಂಭ್ರಮ..ಅದರ ನೆನಕೆಯೇ ಎಷ್ಟು ಖುಷಿ ಕೊಡುತ್ತಿದೆ ನೋಡು..
ನನ್ನ ಬಯಕೆಯೂರು ಹೇಗೆ ಸಿಂಗರಿಸಿದೆ ನೋಡು
ನಿನ್ನ ಒಲವ ತೇರಿನಿಂದ ಧನ್ಯವದರ ಬೀಡು..
ಇಷ್ಟೆಲ್ಲಾ ಬರೀ ಒಂದೂವರೆ ತಿಂಗಳಿನಲ್ಲ? ನನ್ನ ನಾನೇ ಚಿವುಟುತ್ತಿದ್ದೇನೆ. ಬಹುಶಃ ನಿನ್ನನ್ನು ಮತ್ತೊಮ್ಮೆ ಕಂಡ ಮೇಲೆಯೇ ಈ ಭಾವದಲೆಗೆ ತೃಪ್ತಿಯೇನೋ.. ಆ ದಿನಕ್ಕೆ ಎದುರು ನೋಡುತ್ತಿದ್ದೇನೆ..
ನೋಡು, ಮೊಬೈಲು ಪೋರ ಮತ್ತೆ ಗುನುಗುತ್ತ ಕುಣಿಯತೊಡಗಿದ್ದಾನೆ. ನಿನ್ನದೇ ಫೋನು, ಗೊತ್ತಿದೆ.. ಎತ್ತಿದ್ದೇ ಆದರೆ ಎಂದೂ ಕೇಳದಿದ್ದದ್ದನ್ನು ಇಂದು ಕೇಳಿಬಿಡುತ್ತೇನೆ ನೋಡು.. "ಛಿ, ಕಳ್ಳ" ಎಂದು ನಿನ್ನಿಂದ ಮುಕ್ಕಾಲು ಗಂಟೆ ಬೈಸಿಕೊಂಡರೂ ಸರಿಯೇ !..
ಅಂದ ಹಾಗೆ ಈ ಕಾಲ್ ಬರುತ್ತಿರುವುದು unknown ನಂಬರಿನಿಂದ. ನಿನ್ನ ಹೆಸರನ್ನಿನ್ನೂ ಈ ಪೋರನಿಗೆ ನಾನು ಹೇಳಿಲ್ಲ ಅಂತ ಬೇರೆ ಹೇಳಬೇಕಾಗಿಲ್ಲ ತಾನೇ..
ಮುಂದಿನ ಶನಿವಾರ.. ನಿನ್ನ ಕೈಯಲ್ಲೇ ಕೊಡುತ್ತೇನೆ..ಅದೇನಾದರೂ ಬರೆದುಕೋ..ನಿನ್ನ ಹೆಸರ ಪಡೆದ ಧನ್ಯತೆಯಲ್ಲಿ ಆತನೂ ನಿದ್ದೆಗೆ ಜಾರುತ್ತಾನೆ..ಆಮೇಲೆ ಅಲ್ಲಿ ನಾವಿಬ್ಬರೇ..ನಾವು ಸೋಲುತ್ತೀವಾ , ಮಾತು ಸೋಲುತ್ತಾ ನೋಡೇ ಬಿಡೋಣ..
ಇಂತಿ ನಿನ್ನ
ರಾಜ್ಕುಮಾರ.