Saturday, January 15, 2011

ಭಾನುವಾರದ ಓದು : ಕಥಾವಿಸ್ಮಯ

ಅದೊಂದು ಘಟನೆ... ತುಂಬಾ ವಿಶೇಷ ಇರುವಂಥದ್ದೇನೂ ಅಲ್ಲ.. ಆದರೂ ಏನೋ ಒಂದು ರೋಚಕತೆ ಇರುವಂಥದ್ದು... ಅದು ಸಂಭವಿಸಿದಾಗ ಅಲ್ಲಿ ಜನರೂ ಇದ್ದರು..ಜನ ಸೇರಿದ್ದರಿಂದ ನಮ್ಮ ಕಥೆಗಾರ-೧ ಕೂಡ ಇಣುಕಲು ಅಲ್ಲಿಗೆ ಹೊರಟಿದ್ದ. ತನ್ನ ಮುಂದಿನ ಕಥೆಗೆ ಏನಾದ್ರೂ ವಸ್ತು ಸಿಗಬಹುದಾ ಅನ್ನೋ ಆಸೆಯಿಂದ. ಕಥೆಗಾರ-೧ ಅಂತೊಬ್ಬ ಇರಬೇಕಾದ್ರೆ ಕಥೆಗಾರ-೨ ಕೂಡ ಇರಲೇಬೇಕು ತಾನೇ? ಅವನೂ ಇದ್ದ.. ಆ ಸ್ಥಳದಲ್ಲೇ ಇದ್ದ..ಜನ ಸೇರಿದ್ದು ಅವನ ಕಣ್ಣಿಗೂ ಬಿದ್ದಿತ್ತು. ಆದ್ದರಿಂದ ಮನುಷ್ಯ ಸಹಜ ಕುತೂಹಲ ಆತನಲ್ಲೂ ಮೂಡಿ ಘಟನೆಯ ಚಿತ್ರವನ್ನು ಅಂದಾಜಿಸತೊಡಗಿದ. ಕಥೆಗಾರ-೧ ಅಲ್ಲೇ ಹಿಂದುಗಡೆ ಇದ್ದದ್ದು ಕಥೆಗಾರ -೨ನ ಕಣ್ಣಿಗೆ ಬಿತ್ತು...ಇಬ್ಬರೂ ಒಬ್ಬರಿಗೊಬ್ಬರು ಒಂದು ರೀತಿಯಲ್ಲಿ ಆಪ್ತರೇ. ಆದರೂ ಇವರಿಬ್ಬರಿಗೂ ಒಂದು ತರಹದ ಸಾಹಿತ್ಯಕ ಪೈಪೋಟಿ. ಸಾತ್ವಿಕ ಪೈಪೋಟಿ ಸುಮಾರಷ್ಟು ಸಾಹಿತಿಗಳಲ್ಲಿ ಕಂಡರೂ ಇವರಿಬ್ಬರದು ಸ್ವಲ್ಪ ಪೆರ್ಸನಲ್ ಮಟ್ಟದಲ್ಲೂ ಇತ್ತು.. ಆದ್ರೆ ಅದೆಲ್ಲ ಕಣ್ಣೆದುರಿಗೆ ಕಾಣುವಂಥದಲ್ಲ. ಇಬ್ಬರ ಸಾಹಿತ್ಯವನ್ನೂ ಆಳವಾಗಿ ಅಭ್ಯಸಿಸಿದವರಿಗೆ ಅವರಿಬ್ಬರ ಪರಸ್ಪರ ತಾತ್ವಿಕ ಸಂಘರ್ಷದ ಅರಿವು ಮೂಡುತ್ತದೆ. ಹೆಚ್ಚು ಹೆಚ್ಚು ಓದಿದಷ್ಟು ಅವರಿಬ್ಬರ ನಡುವಿನ ಸ್ಪಷ್ಟ ಭಿನ್ನಮತಗಳು ಓದುಗನಿಗೆ ಗೋಚರಿಸುತ್ತ ಹೋಗುತ್ತವೆ. ಹಾಗಂತ ಕಣ್ಣೆದುರು ಸಿಕ್ಕಾಗೆಲ್ಲ ಅವರಿಬ್ಬರೂ ಬಹಳ ಆತ್ಮೀಯರೇ. ಅಟ್ ಲೀಸ್ಟ್ ನೋಡುವವರ ಮಟ್ಟಿಗೆ...ಆವತ್ತು ಆ ಘಟನೆ ನೋಡಿದಾವತ್ತೂ ಅದೇ ಆಯಿತು. ಕಥೆಗಾರ-೨ ನೇರ ಹೋಗಿ ಕಥೆಗಾರ -೧ ನನ್ನು ನಗುತ್ತ ಮಾತಾಡಿಸಿದ. ಸ್ವಲ್ಪ ಹೊತ್ತು ಅವರಿಬ್ಬರು ನಡೆದ ಘಟನೆ ಬಗ್ಗೆ ಮಾತನಾಡುತ್ತ ಪಕ್ಕದ ಹೋಟೆಲ್ಲಿಗೆ ತೆರಳಿ ಕಾಫಿ ಹೀರುತ್ತಾ ತುಸು ಹೊತ್ತು ಲೋಕಾಭಿರಾಮವನ್ನೂ ಮಾತಾಡಿಕೊಂಡರು.

ಮನೆ ತಲುಪಿದ ಕಥೆಗಾರ-೧ ಗೆ ಆ ಸಂಜೆ ಚಿಕ್ಕ ಗುಮಾನಿ ಶುರುವಾಯಿತು.. ಇವತ್ತು ನೋಡಿದ ಘಟನೆ ಬಗ್ಗೆ ಕಥೆಗಾರ-೨ ಖಂಡಿತ ಒಂದು ಕಥೆ ಬರೆದೆ ಬರೆಯುತ್ತಾನೆ ಅಂತ ಇವನಿಗೆ ಅನ್ನಿಸಲು ಶುರುವಾಯ್ತು. ಹಾಗಂತ ತನಗೂ ಆ ಘಟನೆಯ ಬಗ್ಗೆ ಕಥೆ ಬರೆಯದೆ ಇರಲು ಸಾಧ್ಯವಿಲ್ಲ. ಒಂದು ವೇಳೆ ಬರದದ್ದೇ ಆದಲ್ಲಿ ಅದು ಕಥೆಗಾರ-೨ ಬರೆದದ್ದಕ್ಕಿಂಥ ಉತ್ತಮವಾಗಿರಬೇಕು. ಹೆಚ್ಚು ಜನ ತನ್ನ ಕಥೆಯನ್ನು ಅವನ ಕಥೆಯ ಜೊತೆ ತೌಲನಿಕವಾಗಿ ವಿಮರ್ಶಿಸುತ್ತ ತನಗೆ ಗೌರವಗಳನ್ನು ದಕ್ಕಿಸಿಕೊಡಬೇಕು. ತಮ್ಮಿಬ್ಬರ ನಡುವಿನ ಪೈಪೋಟಿಯಲ್ಲಿ ಆಗ ತಾನು ಒಂದು ಹೆಜ್ಜೆ ಮುಂದೆ ಹೋದಂತಾಗುತ್ತದೆ ಅಂತ ಅಂದುಕೊಂಡ. ಆ ರಾತ್ರಿ ಕೂತು ತನ್ನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚಿದ... ಸ್ವಲ್ಪ ಹೊತ್ತು ಆಲೋಚಿಸಿದ ನಂತರ ಆತ ಒಂದು ನಿರ್ಧಾರಕ್ಕೆ ಬಂದ. ಅದೇನೆಂದರೆ , ಕಥೆಗಾರ-೨ ನನ್ನು ಘಟನೆಯ ಪಾತ್ರವಾಗಿಸಬೇಕು. ಅದು ಓದುಗನಿಗೆ ತಿಳಿಯಬಾರದು.. ಆದ್ರೆ ಕಥೆಗಾರ -೨ ಗೆ ಅದು ತನ್ನ ಬಗ್ಗೆಯೇ ಮಾಡಿದ ಕಮೆಂಟುಗಳು ಅಂತ ಕಥೆ ಓದುತ್ತಿದ್ದಂತೆಯೇ ತಿಳಿದು ಹೋಗಬೇಕು. ಹಾಗೊಂದು ಆಲೋಚನೆ ಬಂದ ಕೂಡಲೇ ಕಥೆಗಾರ-೧ ಒಂದು ಕಥೆಯನ್ನು ಬರೆಯತೊಡಗಿದ. ಕಥೆಗಾರ-೨ ನನ್ನು ತನ್ನ ಈ ಕಥೆಯಲ್ಲಿ ಒಬ್ಬ ಕಥೆಗಾರನನ್ನಾಗಿಸಿ ಆ ಕಥೆಗಾರ ಆ ಘಟನೆಯನ್ನು ನೋಡುತ್ತ ಕಥೆ ಬರೆಯುವ ಒಂದು ಕಥೆಯನ್ನು ಹೆಣೆಯುತ್ತಾನೆ. ಕಥೆಗಾರ-೨ ನ ಆಲೋಚನೆಗಳನ್ನು ಸಾಕಷ್ಟು ಅಭ್ಯಸಿಸಿದ್ದ ಕಥೆಗಾರ-೧, ಕಥೆಗಾರ -೨ ಆ ಕಥೆಯನ್ನು ಹೇಗೆ ಹೆಣೆಯುತ್ತಿದ್ದನೋ ಅದನ್ನು ಚಿತ್ರಿಸಿಕೊಂಡು ತನ್ನ ಕಥೆಯಲ್ಲಿನ ಕಥೆಗಾರನ ಪಾತ್ರವನ್ನು ಹೆಣೆಯತೊಡಗುತ್ತಾನೆ. ಕಥೆ ರೂಪುಗೊಳ್ಳುತ್ತ ಹೋದಂತೆ ಅದರೊಳಗೊಬ್ಬ ಕಥೆಗಾರ-೩ ರೂಪುಗೊಳ್ಳತೊಡಗುತ್ತಾನೆ. ಈ ಕಥೆಗಾರ-೩ ಯ ಚಿಂತನೆಗಳನ್ನು , ಘಟನೆಗೆ ಸ್ಪಂದಿಸುವ ಪರಿಯನ್ನು ನಾಟುವಂಥ ಪದಗಳಿಂದ ಗೇಲಿ ಮಾಡಿ ತನ್ನ ವಿಚಾರಗಳನ್ನು ಪುಷ್ಟಿಗೊಳಿಸುವುದು ಕಥೆಗಾರ-೧ ನ ಸ್ಪಷ್ಟ ಉದ್ದೇಶ. ನೋಡು ನೋಡುತ್ತಿದಂತೆ ಕಥೆಗಾರ-೩ ಯು ಕಥೆಗಾರ-೨ ನ ಆಲೋಚನೆಗಳ ನೆಗೆಟಿವ್ ರೂಪವೆ ಆಗಿ ಆ ಕಥೆಯಲ್ಲಿ ರೂಪುಗೊಳ್ಳುತ್ತಾನೆ. ಕಥೆಗಾರ-೩ ನ ಪಾತ್ರಕ್ಕೆ ತಕ್ಕಂತೆ ಘಟನೆಯನ್ನೂ ತನ್ನ ಕಲ್ಪನೆಗಳ ಪದರಗಳಲ್ಲಿ ತಿರುಚಿ ಕಥೆಗಾರ-೧ ಅದಕ್ಕೊಂದು ಹೊಸ ರೂಪು ಕೊಡುತ್ತಾನೆ. ತನ್ನ ಕಲ್ಪನಾ ಲೋಕದಲ್ಲಿ ತನ್ನದೇ ಆದ ಹೊಸ ಪಾತ್ರಗಳನ್ನೂ ಚಿತ್ರಿಸಿ, ಘಟನೆಗೆ ಒಂದು ಹೊಸ ಆಯಾಮವನ್ನೇ ಕೊಟ್ಟು ತನ್ನ ಕಥೆಯನ್ನು ಇನ್ನಷ್ಟು ವಿಶಿಷ್ಟಗೊಳಿಸುತ್ತಾನೆ. ತನ್ನ ನೆಚ್ಚಿನ ಓದುಗರಿಗೆ ಮತ್ತು ತನ್ನ ಪ್ರತಿ ಕಥೆಯನ್ನು ಮೆಚ್ಚಿ ವಿಮರ್ಶಿಸುವ ತನ್ನ ಕೆಲವು ಆಪ್ತ ವಿಮರ್ಶಕರಿಗೆ ಈ ಕಥೆ ಒಂದು ಸುಂದರ ಭಾನುವಾರದ ಓದು ಆಗುತ್ತದೆ ಅಂತ ಅಂದುಕೊಳ್ಳುತ್ತ ಕಥೆ ಬರೆದು ಮುಗಿಸುತ್ತ ಆಲೋಚಿಸುತ್ತಿರುತ್ತಾನೆ. ಭಾನುವಾರ ಪ್ರಕಟಗೊಳ್ಳುವ ಆ ವಾರಪತ್ರಿಕೆಗೆ ತನ್ನ ಕಥೆಯನ್ನು ಕಳಿಸುವ ಏರ್ಪಾಡನ್ನು ಅವತ್ತೇ ಮಾಡುತ್ತಾನೆ.

ಕಥೆಗಾರ-೧ ಇಷ್ಟೆಲ್ಲಾ ಮಾಡುತ್ತಿರಬೇಕಾದರೆ ಕಥೆಗಾರ-೨ ಸುಮ್ಮನಿರುವುದಿಲ್ಲವೆಂದು ನೀವು ಈಗಾಗಲೇ ಅಂದಾಜಿಸುತ್ತಿರುತ್ತೀರಿ. ನಿಮ್ಮ ಅಂದಾಜು ಸರಿ. ಆತನಿಗೂ ಕಥೆಗಾರ-೧ ನ ಮೇಲೆ ಅಷ್ಟೇ ಸೈದ್ಧಾಂತಿಕ ಅಸಮಧಾನವಿದೆ. ಆತನೂ ಕಥೆಗಾರ-೧ ನಷ್ಟೇ ಪ್ರತಿಭಾವಂತ. ಆದ್ರೆ ಇಬ್ಬರ ಆಲೋಚನೆಗಳು ಒಂದೇ ತೆರನಾಗಿರಬೇಕಿಲ್ಲವಲ್ಲ ? ಕಥೆಗಾರ-೨ ಗೆ ಕೂಡ ಕಥೆಗಾರ-೧ ಆ ದಿನದ ಘಟನೆಯ ಬಗ್ಗೆ ಒಂದು ಕಥೆ ಬರೆದೇ ಬರೆಯುತ್ತಾನೆಂದು ಗೊತ್ತು.. ಆತನ ಕಥೆಗಿಂತ ತನ್ನದು ಭಿನ್ನವಾಗಿರಬೇಕೆಂದೂ , ವಿಮರ್ಶಕರ ಮೆಚ್ಚುಗೆ ತನ್ನ ಕಥೆಗೆ ಹೆಚ್ಚು ಸಿಗಬೇಕೆಂಬುದು ಇವನ ಆಶಯ ಕೂಡ. ಆ ರಾತ್ರಿ ಕಥೆಗಾರ-೨ ಕೂಡ ತನ್ನ ಕಲ್ಪನೆಗಳನ್ನು ಒರೆಗೆ ಹಚ್ಚಿ ಕಥೆ ಹೆಣೆಯಲು ತೊಡಗುತ್ತಾನೆ. ತನ್ನ ಕಥೆಯಲ್ಲಿ ತನ್ನನ್ನು ಮತ್ತು ಕಥೆಗಾರ-೧ ನನ್ನು, ಇಬ್ಬರನ್ನೂ ಪಾತ್ರಗಳನ್ನಾಗಿಸುತ್ತಾನೆ. ಒಂದೇ ಘಟನೆಯನ್ನು ಇಬ್ಬರು ಕಥೆಗಾರರು ನೋಡಿ ಹೇಗೆ ತಮ್ಮ ತಮ್ಮ ಕಥೆಗಳ ಮೂಲಕ ಅಭಿವ್ಯಕ್ತಿಸತೊಡಗುತ್ತಾರೆ ಅನ್ನೋದರ ಬಗ್ಗೆ ಒಂದು ಕಥೆ ಕಥೆಗಾರ-೨ ನ ಲೇಖನಿಯಿಂದ ಅರಳುತ್ತ ಹೋಗುತ್ತದೆ. ಆ ಮೂಲಕ ಕಥೆಗಾರ-೧ ಘಟನೆಯನ್ನು ಅಭಿವ್ಯಕ್ತಿಸುವ ಪರಿಯನ್ನು ತಾನು ಹೇಗೆ ಮೀರಿಸುತ್ತೇನೆ ಮತ್ತು ತೌಲನಿಕವಾಗಿ ತನ್ನ ನಿಲುವು ಹೇಗೆ ಆತನ ನಿಲುವಿಗಿಂತ ಶ್ರೇಷ್ಠ ಎನ್ನುವುದನ್ನು ತನ್ನಿಬ್ಬರು ಕಥೆಗಾರರ ಪಾತ್ರಗಳ ಮೂಲಕ ಕಥೆಗಾರ-೨ ಅಭಿವ್ಯಕ್ತಿಸತೊಡಗುತ್ತಾನೆ. ಆ ಕಥೆ ಅರಳುತ್ತ ಹೋದಂತೆ ಅದರಲ್ಲಿ ಕಥೆಗಾರ -೪ ಮತ್ತು ಕಥೆಗಾರ -೫ ರ ವ್ಯಕ್ತಿತ್ವ ಅವರಿಬ್ಬರ ಸ್ಪಂದನಗಳ ಮೂಲಕ ಹಿರಿದಾಗುತ್ತಾ ಹೋಗುತ್ತದೆ. ಕಥೆಗಾರ-೪ ತನ್ನದೇ ಆದ ಆಲೋಚನೆಗಳಿಂದ ಘಟನೆಗೆ ಸ್ಪಂದಿಸುತ್ತಾ ಹೋದಂತೆ ಕಥೆಗಾರ-೫ ಆ ಘಟನೆಗೆ ಕಥೆಗಾರ-೪ ಕೊಡುವ ಸ್ಪಂದನದ ಪರಿಯನ್ನು ವಿಮರ್ಶಿಸುತ್ತಾ ಅದನ್ನು ತನ್ನ ಕಥೆಯ ಮೂಲಕ ಧಿಕ್ಕರಿಸುತ್ತ ಹೋಗುತ್ತಾನೆ. ಹೀಗೆ ಕಥೆಗಾರ-೪ ತನ್ನ ಅಭಿಪ್ರಾಯಗಳ ಮೂಲಕ ಕಥೆಗಾರ-೧ ನ ಚಿಂತನೆಗಳ ವಿಪರ್ಯಾಸದ ರೂಪವೇ ಆಗಿಬಿಡುತ್ತಾನೆ. ಇತ್ತ ಕಥೆಗಾರ-೫ , ಕಥೆಗಾರ-೩ ನ ಚಿಂತನೆಗಳನ್ನೇ ಹೊತ್ತರೂ ಅದೇ ಚಿಂತನೆಗಳ ಪೊಸಿಟಿವ್ ರೂಪವಾಗಿ , ಕಥೆಗಾರ -೨ ನ ಅಸಲು ಅಭಿಪ್ರಾಯಗಳ ದ್ಯೋತಕವಾಗಿ ಮೂಡುತ್ತಾನೆ. ಕಥೆಗಾರ-೨ ನ ಈ ಕಥೆಯಲ್ಲಿ ಘಟನೆ ಒಂದು ನೆಪ ಮಾತ್ರ. ಅಲ್ಲಿ ಅಸಲಿನಲ್ಲಿ ಆಗುತ್ತಿರುವುದು ಇಬ್ಬರು ವ್ಯಕ್ತಿಗಳ ತಾತ್ವಿಕ ಸಂಘರ್ಷ. ಹಾಗಾಗಿ ಘಟನೆ ಆ ಸಂಘರ್ಷಕ್ಕೆ ಪುಷ್ಟಿಯಾಗುವಂಥ ಸ್ವತ್ತುಗಳನ್ನು ತನ್ನಲ್ಲೇ ಸೃಷ್ಟಿಸಿಕೊಳ್ಳುತ್ತ , ಕಥೆಗಾರನ ಕಲ್ಪನಾಲೋಕದಲ್ಲಿ ಮಾರ್ಪಾಡಾಗುತ್ತ ತನ್ನದೇ ಒಂದು ರೂಪವನ್ನೂ ಪಡೆದುಕೊಳ್ಳುತ್ತದೆ. ತನ್ನ ಅಭಿಮಾನಿ ಓದುಗರಿಗೆ ಇದೊಂದು ಉತ್ತಮ ಭಾನುವಾರದ ಓದು ಆಗುವುದೆಂದು ಭಾವಿಸಿ ಭಾನುವಾರ ಪ್ರಕಟವಾಗುವ ವಾರ ಪತ್ರಿಕೆ-೨ ಗೆ ತನ್ನ ಕಥೆಯನ್ನು ಕಳುಹಿಸಲು ಕಥೆಗಾರ-೨ ಅಣಿಯಾಗುತ್ತಾನೆ.

*********

ಭಾನುವಾರ ಬೆಳಗ್ಗೆ ಏಳು ಗಂಟೆ. ಓದುಗ-೧ ತನ್ನ ಭಾನುವಾರದ ಎಂದಿನ ತರಹದ ದಿವ್ಯ ಔದಾಸಿನ್ಯದಿಂದ ಎದ್ದು ಟಿ.ವಿ ಯನ್ನು ಆನ್ ಮಾಡುತ್ತಾ ತನ್ನ ಮೆಚ್ಚಿನ ಪತ್ರಿಕೆ-೧ ನ್ನು ಓದಲು ತೆರೆಯುತ್ತಾನೆ. ತನ್ನ ನೆಚ್ಚಿನ ಕಥೆಗಾರ-೧ ನ ಕಥೆಯನ್ನು ಪತ್ರಿಕೆಯಲ್ಲಿ ಕಂಡು, ಪ್ರೀತಿಯಿಂದ ಅದನ್ನೆತ್ತಿ ಓದಲು ತೊಡಗುತ್ತಾನೆ. ಕಥೆಯನ್ನು ಓದಿ ಮುಗಿಸಿದ ಓದುಗ-೧ ಗೆ ಅದೆಂಥದೋ ದಿವ್ಯ ಆನಂದ.. ತನ್ನ ಭಾನುವಾರ ಅವನ ಮಟ್ಟಿಗೆ ಒಂದು ಸುಂದರ ದಿನವಾಗಿ ಮೂಡಿಬರುತ್ತಿದೆ ಅಂತ ಆತ ಆಲೋಚಿಸುತ್ತಿರುತ್ತಾನೆ. ಟಿ.ವಿ ಯಲ್ಲಿ ಒಂದು ಡಾಕ್ಯುಮೆಂಟರಿ ಅದರ ಪಾಡಿಗದು ಪ್ರಸಾರವಾಗುತ್ತಿದೆ. ವರದಿಗಾರನೊಬ್ಬ ತನ್ನೆಲ್ಲ ಒಂದು ವಾರದ ಪರಿಶ್ರಮವನ್ನು ಆ ಅರ್ಧ ಘಂಟೆಯ ಡಾಕ್ಯುಮೆಂಟರಿಯಲ್ಲಿ ತುಂಬಿಸಿ ನೋಡುಗನಿಗೆ ಮುಟ್ಟುವಂತೆ ಕಾಳಜಿಯಿಂದ ವಿವರಿಸುತ್ತಿರುತ್ತಾನೆ. ಒಂದು ಕ್ಷಣ ಆ ಡಾಕ್ಯುಮೆಂಟರಿಯನ್ನು ನೋಡಿದ ಓದುಗ-೧ ಗೆ ಅದೇನೋ ಕಸಿವಿಸಿಯಾಗಿ ಫೋನ್ ನ ಬಳಿ ಓಡುತ್ತಾನೆ.

ಭಾನುವಾರ ಬೆಳಗ್ಗೆ ಏಳು ಗಂಟೆ. .. ಓದುಗ-೨ ತನ್ನ ಅತ್ಯಂತ ಬುಸಿ ಸ್ಕೆಡ್ಯೂಲಿನ ನಡುವೆಯೂ ಪತ್ರಿಕೆ ಓದಲು ಮೀಸಲಿಟ್ಟ ತನ್ನ ಆ ಒಂದು ಗಂಟೆಯನ್ನು ಉಪಯೋಗಿಸಲು ಯೋಚಿಸುತ್ತ ಪತ್ರಿಕೆ -೨ ಅನ್ನು ಕೈಗೆತ್ತಿಕೊಳ್ಳುತ್ತಾನೆ.. ಪತ್ರಿಕೆಯನ್ನು ಬಿಡಿಸಿ ಓದಲು ತೊಡಗಿದಾಗ ಕಥೆಗಾರ-೨ ನ ಕಥೆಯನ್ನು ನೋಡಿ ದಿಗಿಲುಗೊಂಡು ಭಾನುವಾರದ ತನ್ನ ಸ್ಕೆಡ್ಯೂಲನ್ನು ಮೊಟಕುಗೊಳಿಸಿ , ಈ ದಿನ ಈ ಕಥೆಯನ್ನು ಓದಿ ವಿಮರ್ಶಿಸಲೇಬೇಕು ಅನ್ನುವ ಅಂಬೋಣ ಹೊತ್ತು ಓದಲು ತೊಡಗುತ್ತಾನೆ. ಓದಿ ಮುಗಿಸುವಷ್ಟರಲ್ಲಿ ಯಾರೋ ಮನೆಯವರು ಟಿ.ವಿ ಯಲ್ಲಿ ಬರುವ ಡಾಕ್ಯುಮೆಂಟರಿಯನ್ನು ನೋಡುತ್ತಿದ್ದವರು ಆತನನ್ನು ಕರೆಯುತ್ತಾರೆ. ಅದನ್ನು ನೋಡುತ್ತಾ ಅವಾಕ್ಕಾದ ಓದುಗ -೨ ಒಂದು ಕ್ಷಣ ಏನೂ ತೋಚದಂತಾಗಿ ನಿಂತು ಕೊನೆಗೆ ಫೋನ್ ನ ಬಳಿಗೆ ಹೆಜ್ಜೆ ಹಾಕುತ್ತಾನೆ.

ಭಾನುವಾರ ಬೆಳಗ್ಗೆ ಏಳು ವರೆ. ಕಥೆಗಾರ-೧ ಟಿ.ವಿ ಹಾಕುತ್ತಿದ್ದಂತೆ ಒಂದು ಕ್ಷಣ ದಂಗಾಗುತ್ತಾನೆ. ತಾನು ಆವತ್ತು ನೋಡಿನ ಘಟನೆಯ ಮೇಲೆ ವರದಿಗಾರನೊಬ್ಬ ಡಾಕ್ಯುಮೆಂಟರಿಯನ್ನು ಮಾಡಿ ನಿರೂಪಿಸುತ್ತಿದ್ದಾನೆ! ಅದೇ ಘಟನೆ, ಕಣ್ಣಾರೆ ಕಂಡಂತೆ ಪರಿಪರಿಯಾಗಿ ಬಿತ್ತರಗೊಳ್ಳುತ್ತಿದೆ. ಆದರೆ ತಾನು ಈ ಡಾಕ್ಯುಮೆಂಟರಿಯ ಭಾಗವಾಗುತ್ತೇನೆಂದು ಆತ ಕನಸಿನಲ್ಲೂ ಎಣಿಸಿರಲಿಲ್ಲ! ಒಂದು ಕ್ಷಣ ದಂಗು ಬಡಿದಂತಾಗಿ, ನಂತರ ಕಥೆಗಾರ-೨ ಗೆ ಈ ವಿಷಯ ತಿಳಿಸುವ ಮನಸ್ಸಾಗಿ ಫೋನಾಯಿಸಿ ಹೇಳುತ್ತಾನೆ. ಕಥೆಗಾರ-೨ ಕೂಡ ಅಷ್ಟೇ ವಿಸ್ಮಯದಿಂದ ಆ ಡಾಕ್ಯುಮೆಂಟರಿಯನ್ನು ನೋಡುತ್ತಾನೆ. ನೋಡು ನೋಡುತ್ತಾ ಅವನ ಆತ್ಮಬಲವೂ ಕುಗ್ಗುತ್ತ ಹೋಗುತ್ತಿದೆ. ವರದಿಗಾರ ಆ ಡಾಕ್ಯುಮೆಂಟರಿಯಲ್ಲಿ ಆ ಘಟನೆಯನ್ನು ವಿವರಿಸುತ್ತ, ಆ ಘಟನೆ ನಡೆದಾಗ ಇದ್ದ ಜನರ ನಡುವೆ ಕ್ಯಾಮರಾ ಹಾಯಿಸಿದ್ದಾನೆ. ಆ ಸ್ಥಳದಲ್ಲೇ ಇದ್ದ ಹತ್ತಾರು ಜನರು ಘಟನೆಯನ್ನು ನೋಡುತ್ತಾ ಇದ್ದರೂ ಹೇಗೆ ನಿರ್ವೀರ್ಯರಾಗಿ ಏನನ್ನೂ ಸ್ಪಂದಿಸದೇ ನಿಂತು ಬಿಟ್ಟಿದ್ದಾರೆ ಅನ್ನುವುದನ್ನು ಚಿತ್ರಿಸುತ್ತಿದ್ದಾನೆ. ಕಥೆಗಾರ-೧ ಮತ್ತು ಕಥೆಗಾರ -೨ ಇಬ್ಬರೂ ಘಟನೆಯನ್ನು ನೋಡುತ್ತಾ ನಿರ್ಲಜ್ಜರಂತೆ ನಿಂತು ಬಿಟ್ಟಿದ್ದಾರೆ. ಕ್ಯಾಮರ ಮಿಕ್ಕ ಜನರನ್ನು ಲೆಕ್ಕಿಸದೆ ಈ ಇಬ್ಬರು ಸೆಲೆಬ್ರಿಟಿ ಕಥೆಗಾರರ ಮೇಲೆಯೇ ಆಗಾಗ ಫಾಕಸ್ಸು ಆಗುತ್ತಿದ್ದಂತೆ ವರದಿಗಾರ ಆ ಇಬ್ಬರು ಕಥೆಗಾರರ ಟೊಳ್ಳುತನವನ್ನು ಜಾಲಾಡುತ್ತಿದ್ದಾನೆ ! ಆ ಇಬ್ಬರೂ ಕಥೆಗಾರರು ಆ ಘಟನೆಯನ್ನು ನೋಡಿಯೂ ಸ್ಪಂದಿಸದೇ ಇರುವುದನ್ನು ಧಿಕ್ಕರಿಸುತ್ತ ಒಂದಷ್ಟು ಜನ ಮಾನವತಾವಾದಿಗಳು , ಒಂದಷ್ಟು ಜನ ಜನಸಾಮಾನ್ಯರು ತಮ್ಮ ಅಭಿಪ್ರಾಯಗಳನ್ನು ರೊಚ್ಚಿಗೆದ್ದು ಹೊರಗೆಡವುತ್ತಿರುವುದು ಟಿ.ವಿ.ಯಲ್ಲಿ ಕಣ್ಣಿಗೆ ರಾಚುವಂತೆ ಪ್ರಸಾರವಾಗುತ್ತಿದೆ.

**************

ಈಗ ಸಮಯ ಭಾನುವಾರದ ಬೆಳಗ್ಗೆ ಎಂಟು ಗಂಟೆ.. ಆ ಊರಿನ ಮೂರು ಕಡೆಗಳಲ್ಲಿ ಮೂರು ಫೋನುಗಳು ರಿಂಗ್ ಆಗುತ್ತಿವೆ.

ಪತ್ರಿಕೆ-೨ಯಲ್ಲಿನ ಕಥೆಯನ್ನು ಓದಲು ಶುರುಹಚ್ಚಿ, ಟಿ.ವಿ ನೋಡುತ್ತಿದ್ದಂತೆ ಅರ್ಧಕ್ಕೆ ನಿಲ್ಲಿಸಿದ್ದ ಕಥೆಗಾರ-೧ ರಿಂಗಣಿಸುತ್ತಿದ್ದ ಫೋನಿನ ರಿಸೀವರ್ ಬಳಿ ಹೋಗುತ್ತಿದ್ದಾನೆ. ಪತ್ರಿಕೆ-೧ ನ್ನು ಕೆಳಗಿಟ್ಟು ಕಥೆಗಾರ-೨ ಕೂಡ ತನ್ನ ರಿಸೀವರ್ ಬಳಿ ಹೆಜ್ಜೆ ಹಾಕುತ್ತಿದ್ದಾನೆ.

ಇತ್ತ ವರದಿಗಾರ ಬೆಳಗ್ಗಿನಿಂದ ಅಸಂಖ್ಯ ಬಾರಿ ರಿಂಗ್ ಆಗುತ್ತಿದ್ದ ತನ್ನ ಫೋನನ್ನು ಲೆಕ್ಕಿಸದೆ, ತನ್ನ ಭಾನುವಾರವನ್ನು ಆರಾಮವಾಗಿ ಕಳೆಯುವ ಮನಸ್ಸಾಗಿ ಟೀಪಾಯಿಯ ಮೇಲಿದ್ದ ಪತ್ರಿಕೆ-೧ ಮತ್ತು ಪತ್ರಿಕೆ-೨ನ್ನು ಎತ್ತಿ ಭಾನುವಾರದ ಓದಿಗೆ ತನ್ನ ಆರಾಮ ಕುರ್ಚಿಯತ್ತ ಸಾಗುತ್ತಿದ್ದಾನೆ...

No comments: