Saturday, May 8, 2010

ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು..

ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು..


ಕುಹಕಗಳ ವ್ಯಂಗ್ಯಗಳ ನಿನ್ನೊಬ್ಬಳಿಗೆಯೇ ಬಿಟ್ಟು

ರಾತ್ರಿಗಳ ಗಾಢ ವಿಕಾರತೆಗಳೆಡೆಗಳಲ್ಲು

ಕರುಳ ಬಳ್ಳಿಯ ಬಿಗು ಪಾಶದಲಿ ಬೆಚ್ಚಗೆ

ಸುಖನಿದ್ರೆಯನುಭೂತಿಯಲಿ ನಾನಿದ್ದೆ..


ಶನಿಯೆಂದೋ ಅನಿಷ್ಟವೆಂದೋ ಬಂಜೆ ಬಿನ್ನಾಣಗಿತ್ತಿಯೆಂದೋ

ನಿನ್ನವರೇ ಜರೆದಾಗ ನಾನಿನ್ನೂ ನಿನ್ನೊಡಲ ಪುಟ್ಟ ಬಿಂದು

ನಿನ್ನೊರಟು ಮಸಿಮೆತ್ತಿದ ಬರೆಗೂಡಿದ ಕೈಗಳಿಂದ

ನಿನ್ನುದರವ ಸವರುವ ಹೊತ್ತು

ನಾನು ನಿನ್ನದೆ ರಕ್ತವನು ಹೀರಿ ಹೀರಿ ಹಿಗ್ಗುತಿದ್ದೆ ..


ನಿನ್ನ ತಂಗಳಗುಳುಗಳು ತುತ್ತು ತುತ್ತಾಗಿ

ದಿನಕೊಂದೇ ಹೊತ್ತಲ್ಲಿ ಇಳಿದು ಬರುತಿರೆ

ಅದರಲ್ಲೂ ನನ್ನ ಪಾಲು ಕೇಳಿದ್ದೆ..

ನಿನ್ನುದರಕೆ ತಣ್ಣೀರನೆರಚುತಿದ್ದೆ ...


ನೀ ಕೊಟ್ಟಿದ್ದಾದರು ಏನು

ನಾ ಕೊಟ್ಟ ಬೇನೆ ಯಾತನೆಗಳ

ನರಳುವಿಕೆಗೆ ಬದಲಾಗಿ?

ಹೊತ್ತು ಹೊತ್ತಿಗೂ ತುತ್ತು, ಮುತ್ತು, ನಿನ್ನೆಲ್ಲ ಸ್ವತ್ತು

ಗೊತ್ತು ನನಗೆ, ಮತ್ತಿವತ್ತು ನೀನಿನ್ನೇನು ಕೊಡಬಯಸಿಹೆಯೆಂದು.


ನಿನ್ನೊಡಲಾಸೆಗಳ ಸಾಕಾರವಾಗಿ ಮೈವೆತ್ತ ನನ್ನೀ ಬದುಕ

ಮತ್ತೊಬ್ಬರು ಕಸಿದು ನಿನ್ನಿಂದ ಕೊಂಡೊಯ್ವ ಮುನ್ನ

ಹೇಳಲೆಬೇಕೆಂದೆನಿಸಿದೆ ಮೊದಲ ಬಾರಿ

ಮಾತೆ, ನನಗೂ ಇದೆ, ನಿನ್ನಾತಂಕಗಳಲ್ಲಿ ಪಾಲು.

ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು..


( ನನ್ನದೆಲ್ಲವೂ ನಿನ್ನದೆ ಅಂತ ಹಾರೈಸುವ ಅಮ್ಮ,

'ಅಮ್ಮನ ದಿನ' ನಿನ್ನ ದಿನವಾ ಅಥವಾ ನನ್ನದೇ ದಿನವಾ?)

4 comments:

Indushree Gurukar said...

ವಿನಾಯಕ ಅವರೇ
ತುಂಬಾ ಚೆಂದದ ಸಾಲುಗಳು... ಪದಗಳಾಯ್ಕೆ, ಸಂಯೋಜನೆ ಎಲ್ಲಾ ತುಂಬಾ ಚೆಂದ ಇದೆ :)

Vinayak Kuruveri said...

ನನ್ನಿ, ಇಂದುಶ್ರೀಯವರೇ,
ನಿಜ ಹೇಳಬೇಕೆಂದರೆ ಇವತ್ತು ಅಮ್ಮಂದಿರ ದಿನ ಅಂತ ನನಗೆ ಹೊಳೆದಿದ್ದು ನಿಮ್ಮ ಲೇಖನ ಓದಿದ ಮೇಲೆಯೇ. :-)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಚೆನ್ನಾಗಿದೆ.

Vinayak Kuruveri said...

ನನ್ನಿ ವೆಂಕಿಯವರೇ,
ನಿಮ್ಮ ಬ್ಲಾಗ್ ಗೂ ಭೇಟಿ ಕೊಟ್ಟಿದ್ದೇನೆ , ನಿಮ್ಮ ಚಿತ್ರ-ಕವನಗಳು ಬಹಳ ಆಪ್ತವಾಗಿ ಮೂಡಿಬಂದಿವೆ.