Tuesday, June 1, 2010

ಸವೆದದ್ದಷ್ಟೇ ದಾರಿ... ?

ಹೊರಟಿದ್ದೇನೋ ನಿಜ ನಾನು
ಅದಾವುದೋ ಗಮ್ಯದೆಡೆಗೆ..
ಹೆಜ್ಜೆಯ ಮುಂದೊಂದು ಹೆಜ್ಜೆ
ದಾರಿ ಯಾವುದೆಂದು ತಿಳಿಯಲಿಲ್ಲ..

ಮತ್ತೊಮ್ಮೆ ನನ್ನನ್ನೇ ಕೇಳಿಕೊಂಡೆ
ಹೋಗಲೇಬೇಕ? ಹೋದರೇನು ದಕ್ಕೀತು
ಅಥವಾ ದಕ್ಕಿದರೆ ಮಾತ್ರ ಹೋದದಕ್ಕೆ ಬೆಲೆಯ?
ಇಷ್ಟಕ್ಕೂ , ದಾರಿ ಯಾವುದೆಂದು ಇನ್ನೂ ತಿಳಿಯಲಿಲ್ಲ..

ಯಾರೋ ಮುಂದೊಬ್ಬ ಹೋಗಿದ್ದನಂತೆ
ಅವನು ಹೆಜ್ಜೆ ಇರಿಸಿದಲ್ಲಿ ನೆಲ ಸ್ವಲ್ಪ ಸವೆದಿದೆ
ಅದುವೇ ದಾರಿ ಅಂತ ಜನ ಅನ್ನುತ್ತಾರೆ
ನನಗದು ದಾರಿ ಅಂತ ಅನಿಸುವುದಿಲ್ಲ

ಅವನು ಹೋದ ಮಾತ್ರಕ್ಕೆ ಅದು ದಾರಿಯ?
ಅವನು ಹೋಗದೆ ನಾನು ಹೋಗಿದ್ದರೆ?
ಅಥವಾ ನಾನೇ ಬೇರೆಯದೇ ದಿಕ್ಕಿನಲ್ಲಿ ನಡೆದಿದ್ದರೆ?
ದಾರಿ ಇನ್ನೂ ಇರುತ್ತಿತ್ತ? ಹಾಗಂತ ಮತ್ತೆ ಕೇಳಿಕೊಂಡೆ

ಸವೆದದ್ದಷ್ಟೇ ದಾರಿಯೆಂದಾದರೆ
ಅವೆಲ್ಲ ನನ್ನನ್ನು ಗಮ್ಯಕ್ಕೆ ಕೊಂಡೊಯ್ಯಬಲ್ಲವಾ?
ಅಥವಾ ಹೇಗೆ ನಡೆದರೂ ಗಮ್ಯವನ್ನು
ತಲುಪಬಲ್ಲೆ ಎಂದಾದರೆ ದಾರಿಯ ಹಂಗು ಬೇಕಾ?

ಅವ ನಡೆದಲ್ಲಿ ನಾ ನಡೆದರೆ
ಅದು ನನಗೆ ದಾರಿ, ಆದರೆ ಅವನಿಗೆ?
ದಾರಿಯ ಹಂಗಿದ್ದರೆ ತಾನೇ ಕಚ್ಚಿಕೊಳ್ಳುವುದು
ಸರಿ ದಾರಿ, ತಪ್ಪು ದಾರಿ ಎಂಬ ಸಂಕೀರ್ಣತೆಗಳೆಲ್ಲ?

ಕಾಡುವ ಪ್ರಶ್ನೆಗಳನ್ನೆಲ್ಲ ಇದ್ದಲ್ಲೇ ಬಿಟ್ಟು
ಮುಂದೆ ನಡೆಹಾಕಿದೆ..ಹೆಜ್ಜೆಯೊಂದಿಟ್ಟಂತೆ
ಮತ್ತೆ ದಾರಿ ಯಾವುದೆಂದು ತಿಳಿಯಲಿಲ್ಲ..

ಪರವಾಗಿಲ್ಲ, ಈಗ ದಾರಿ ಯಾವುದೆಂದು
.....ತಿಳಿಯುವುದೂ ಬೇಕಾಗಿಲ್ಲ...

2 comments:

ಸೀತಾರಾಮ. ಕೆ. / SITARAM.K said...

ಚೆ೦ದದ ಲೆಕ್ಕಾಚಾರ. ಅಪ್ಪನೆಟ್ಟಾಲದಲ್ಲಿ ನೇಣೇಕೆ ಹಾಕಿಕೊಳ್ಳಬೇಕೆ? ಬದುಕಿನ ಶಿಷ್ಟಗಳ ಮೂಲವನ್ನು ಕೆಣಕುವ ತಮ್ಮ ಪ್ರಶ್ನೇಗಳು ತು೦ಬಾ ಸೂಕ್ತ ಹಾಗೂ ಮಾರ್ಮಿಕ. ಕೊನೆಯ ಸಾಲುಗಳಲ್ಲಿ"ಪರವಾಗಿಲ್ಲ, ಈಗ ದಾರಿ ಯಾವುದೆಂದು
.....ತಿಳಿಯುವುದೂ ಬೇಕಾಗಿಲ್ಲ... "ಧೋರಣೆ ತು೦ಬಾ ಸೂಕ್ತ ಅ೦ತ್ಯ ನೀಡಿದೆ. ಚೆ೦ದದ ಕವನಕ್ಕಾಗಿ ಧನ್ಯವಾದಗಳು.

Vinayak Kuruveri said...

ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸೀತಾರಾಂ ಅವರೆ..