Saturday, June 5, 2010

ಕಿರುಗತೆ: ತಯಾರಿ

ಆವತ್ತು ಜೂನ್ ೪.
ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ರಾತ್ರಿವರೆಗೂ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು ಬೇಕಾಗುತ್ತೆ ಅಂತ ಒಂದಷ್ಟು ಇ-ಪೇಜ್ ಗಳ ಪ್ರಿಂಟ್ ಔಟೂ ತೆಗೆದುಕೊಂಡ..ರಾತ್ರಿ ಸುಮಾರು ಹೊತ್ತು ವರೆಗೂ ಓದುತ್ತ ಕುಳಿತು ಮಲಗಲು ಹೊರಟಾಗ ತನ್ನ ಕಂಪ್ಯೂಟರ್ ಇನ್ನೂ ಆನ್ ಆಗಿರುವುದು ನೆನಪಾಯಿತು.. ಪರವಾಗಿಲ್ಲ, ನಾಳೆ ಹೇಗಿದ್ದರೂ ಬೇಗ ಏಳಬೇಕಲ್ಲ, ಮತ್ತೆ ರಿಸ್ಟಾರ್ಟ್ ಮಾಡಲು ಬಹಳ ಸಮಯ ಹಿಡಿಯುತ್ತೆ ಅಂತ ಯೋಚಿಸಿ ಅಲ್ಲೇ ನಿದ್ದೆ ಹೋದ..

ಬೆಳಗ್ಗೆ ಎದ್ದಿದ್ದು ಕೊಂಚ ತಡವೇ ಆಯ್ತು.. ಎದ್ದು ಕಿಟಕಿ ತೆರೆದಾಗ ತಣ್ಣನೆ ತಂಗಾಳಿ. ಜಾಸ್ತಿ ಹೊತ್ತು ಕಿಟಕಿ ತೆರೆದಿಟ್ಟರೆ ಎ.ಸಿ. ಯ ತಂಪು ಕೆಟ್ಟು ಹೋದೀತೆಂದು ಮತ್ತೆ ಕಿಟಕಿ ಮುಚ್ಚಿ , ರಾತ್ರಿ ಚಾರ್ಜಿಗಿಟ್ಟಿದ್ದ ಮೊಬೈಲನ್ನು ಎತ್ತಿ ಇನ್ನು ಒಂದು ಗಂಟೆಯಲ್ಲಿ ನೆನಪಿಸುವಂತೆ ಟೈಮರ್ ಇಟ್ಟು ತನ್ನ ನಿತ್ಯ ಕರ್ಮಕ್ಕೆ ತೆರಳಿದ.
ಬಾತ್ರೂಮಿನಲ್ಲಿ ಕಳೆದ ಒಂದು ತಿಂಗಳಿಂದ ಇದ್ದ ನಳ್ಳಿ ಲೀಕೇಜನ್ನು ಗಮನಿಸಿ, ಇವತ್ತೂ ಕೂಡ ಎಂದಿನಂತೆ ನೆಗ್ಲೆಕ್ಟ್ ಮಾಡಿ ಶವರಿನತ್ತ ತೆರಳಿದ..ಗೀಸರ್ ತುಂಬಾನೇ ಹೊತ್ತು ಆನ್ ಇಟ್ಟಿದ್ದರಿಂದಲೋ ಏನೋ ನೀರು ಸಿಕ್ಕಾಪಟ್ಟೆ ಬಿಸಿ ಆಗಿತ್ತು.. ಒಂದೈದು ನಿಮಿಷ ಬಿಸಿ ನೀರೆಲ್ಲ ಕೊಂಚ ತಣ್ಣಗಾಗುವಷ್ಟು ಹೊತ್ತು ಹಾಗೆಯೇ ಹರಿಯಬಿಡಬೇಕಾಯ್ತು.

ಎಲ್ಲ ಮುಗಿಸಿಕೊಂಡವನೇ ನೇರವಾಗಿ ಕಂಪ್ಯೂಟರ್ ನತ್ತ ಬಂದ. ತಾನು ನಿನ್ನೆ ಓಪನ್ ಮಾಡಿಟ್ಟ ಪೇಜ್ ಗಳು ಇನ್ನೂ ಹಾಗೆಯೆ ಇರುವುದನ್ನು ಕಂಡು ತನ್ನ ಸಮಯ ಉಳಿತಾಯವಾದದ್ದಕ್ಕೆ ತೃಪ್ತಿ ಪಟ್ಟುಕೊಂಡ. ಟೋಸ್ಟರ್ ನಲ್ಲಿಟ್ಟಿದ್ದ ಬ್ರೆಡ್ಡು ಟೋಸ್ಟ್ ಆಗಿ ಸೈರನ್ ಹೊಡೆದು ಕೊಂಡಾಗ ಒಂದು ಕ್ಷಣ ಅಲರಾಂ ಆಯಿತೇನೋ ಅಂತ ಗಾಬರಿಪಟ್ಟು ಗಂಟೆ ನೋಡಿ ಇನ್ನೂ ಹದಿನೈದು ನಿಮಿಷ ಇದೆ ಅಂತ ಆಮೇಲೆ ಅರಿತುಕೊಂಡು ಮತ್ತೆ ನೋಟ್ಸ್ ಮಾಡಲು ಮುಂದುವರೆಸಿದ.

ಸರಿ, ಹೊರಡುವ ಸಮಯವೂ ಬಂತು.. ಈವತ್ತು ಆಫೀಸಿಗೆ ಹೋಗುವಾಗ ಡೌನ್ ಟೌನ್ ನಿಂದ ಹೋಗಬಾರದು, ಟ್ರಾಫಿಕ್ ಜಾಸ್ತಿ ಇದ್ದರೆ ಕಷ್ಟ, ೫ ಮೈಲಿ ಜಾಸ್ತಿಯದ್ರು ಸರಿ , ಥರ್ಡ್ ಎಕ್ಸಿಟ್ ಮೂಲಕವೇ ಹೋಗೋದು ಅಂತ ಅನ್ಕೊಂಡಿದ್ದ. ಗಡಿಬಿಡಿಯಲ್ಲಿ ಕಾರು ಹತ್ತಿ ಚಾಲೂ ಮಾಡಿದಾಗ ಮನೆಯಲ್ಲಿ ಕಂಪ್ಯೂಟರ್ , ಎ.ಸಿ. ಯಾವುದನ್ನೂ ಆಫ್ ಮಾಡಿಲ್ಲ ಅನ್ನೋದು ನೆನಪಾಯಿತು.. ಮತ್ತೆ ಮನೆಕಡೆ ಹೋದರೆ ತಡವಾಗುತ್ತೆ ಅಂತ ನೇರ ಆಫೀಸಿನ ಕಡೆಗೇ ಹೊರಟು ಬಿಟ್ಟ..ವಿ -೮ ಇಂಜಿನ್ ನ ಟೊಯೋಟಾ ಕಾರು..ಎಂಭತ್ತರಲ್ಲಿ ಹೋದರೆ ಹತ್ತೇ ನಿಮಿಷದಲ್ಲಿ ಆಫೀಸಿನಲ್ಲಿ..

ನೇರವಾಗಿ ತನ್ನ ಸಿಸ್ಟಮ್ ಕಡೆಗೆ ತೆರಳಿ , ಅದಾಗಲೇ ಓಪನ್ ಮಾಡಿ ಇಟ್ಟಿದ್ದ , ಇವತ್ತಿಗೆ ಬೇಕಾದ ಪೋಸ್ಟರ್ ಗಳ ಪ್ರಿಂಟ್ ಔಟ್ ಗಳನ್ನೂ, ಹ್ಯಾಂಡ್ ಔಟ್ ಗಳನ್ನೂ ಪ್ರಿಂಟ್ ಗೆ ಕೊಟ್ಟು, ಕಮ್ಯುನಿಟಿ ಹಾಲ್ ನ ಸೌಂಡ್ ಸಿಸ್ಟಂ, ಎ.ಸಿ. ಎಲ್ಲ ಚೆಕ್ ಮಾಡಿ ಬಂದ.

ಅಂತೂ ಇಂತೂ ಸಮಯಕ್ಕೆ ಸರಿಯಾಗಿ ಜನ ಜಮಾಯಿಸಿದ್ದರು.. ಜೋ ತನಗೇ ಅಚ್ಚರಿಯಾಗುವಷ್ಟು ಸಲೀಸಾಗಿ ವಿಷಯಗಳನ್ನು ಪ್ರೆಸೆಂಟ್ ಮಾಡಿದ.. ಜನರಿಂದಲೂ ಒಳ್ಳೆಯ ಪ್ರಶಂಸೆ ಬಂತು.. ಕಂಪನಿ ಯವರು ಇವನ ಪರಿಸರ ಕಾಳಜಿಯ ವಿಚಾರ ಮಂಥನಕ್ಕೆ ಮರುಳಾಗಿ ಆ ವರ್ಷದ ಪರಿಸರ ಕಾಳಜಿ ಪ್ರಶಸ್ತಿ ಯನ್ನೂ ಅವನಿಗೆ ಕೊಡುವುದಾಗಿ ಅನೌನ್ಸ್ ಮಾಡಿದ್ರು..

ಜೋ ತನಗೆ ಸಿಕ್ಕಿದ ಈ ಗೌರವಕ್ಕೆ ಹೆಮ್ಮೆ ಪಡುತ್ತ ನಿಧಾನಕ್ಕೆ ತನ್ನ ಡೆಸ್ಕ್ ನತ್ತ ತೆರಳಿದ.. ಮುಂದಿನ ವಾರ ನಗರದ ಟೌನ್ ಹಾಲ್ ನಲ್ಲಿ ಕೊಡಬೇಕಾದ ಪ್ರೆಸೆಂಟೇಶನ್ ಗೆ ನಾಳೆಯಿಂದಲೇ ತಯಾರಿ ಶುರು ಮಾಡಬೇಕು ಅಂದುಕೊಳ್ತಾ ಇವತ್ತಿನ ಭಾಷಣವನ್ನು ತನ್ನ ಬ್ಲಾಗ್ ನಲ್ಲಿ ಇಳಿಸಲು ಹೊರಟ..

ನಿನ್ನೆ ತೆರೆದಿಟ್ಟಿದ್ದ ವಿಶ್ವ ಪರಿಸರ ದಿನದ ವೆಬ್ ಸೈಟು ಅಲ್ಲೇ ಎಲ್ಲೋ ಮೂಲೆಯಲ್ಲಿ ಮಿನಿಮೈಜ್ ಆಗಿ ತನ್ನ ಪಾಡಿಗೆ ತಾನು ಮಕಾಡೆ ಮಲಗಿಕೊಂಡಿತ್ತು...






4 comments:

ಸೀತಾರಾಮ. ಕೆ. / SITARAM.K said...

ನಮ್ಮ ಜೀವನ ವೈಖರಿಗೆ ಕನ್ನಡಿ ಹಿಡಿದ೦ತೆ ಕಥೆ ಬರೆದಿದ್ದಿರಾ! ಅದ್ಭುತ! ಸು೦ದರ! ಚೆ೦ದದ ಕಥೆ.

ಸೀತಾರಾಮ. ಕೆ. / SITARAM.K said...
This comment has been removed by the author.
ಸುಮ said...

ಅರ್ಥಪೂರ್ಣ ಕಥೆ . ಹೆಚ್ಚುಕಡಿಮೆ ಎಲ್ಲರೂ ಹೀಗೆ .....ಪರಿಸರ ಕಾಳಜಿ ಅದು ಇದು ಎಂದೆಲ್ಲ ಭಾಷಣ ಬಿಗಿಯುವುದು , ಪರಿಸರದ ರಕ್ಷಣೆಗಾಗಿ ನಾವೇನು ಮಾಡಬಹುದು ಎಂಬುದನ್ನೇ ಮರೆಯುವುದು .

Vinayak Kuruveri said...

ಸೀತಾರಾಮ್ ಅವರೆ, ಓದಿ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.. :-)

ಸುಮ, 'ನವಿಲಿನ ಗರಿ' ಗೆ ಸ್ವಾಗತ. ಹೀಗೇ ಬರುತ್ತಿರಿ. :-)