Tuesday, June 8, 2010

ಒಲವಿನೋಲೆ ೩ : ನಿನ್ನ ಕನಸಿನೂರ ಬಸ್ಸಿಗೆ ಟಿಕೇಟು ಪಡೆಯುತ್ತ...


ಆಕಸ್ಮಿಕಗಳ ಅವಿರತಗಣಿಯೇ,


ಒಮ್ಮೆಮ್ಮೆ ದಿಗಿಲಾಗುತ್ತದೆ. ನಾ ಕೂಡಿಟ್ಟ ಅಷ್ಟೂ ಕನಸುಗಳಲ್ಲೂ ನುಸುಳಿಬಿಟ್ಟ ನೀನೆಂಬ ನನ್ನತನಕ್ಕೆ ಅದೇನಂತ ಹೇಳಲಿ..ಬಿಲ್ ಕುಲ್ ನನ್ನವೇ ಅಂತ ವರ್ಷಾನುಗಟ್ಟಲೆಯಿಂದ ಸಾವಧಾನವಾಗಿ ಗುಟ್ಟಾಗಿ ಬಚ್ಚಿಟ್ಟ ಕನಸುಗಳಲ್ಲೆಲ್ಲ ಈಗ ನಿನ್ನ ಆಗಮನದ ವಸಂತೋತ್ಸವ. ಒಂದೊಂದನ್ನೇ ನಿನ್ನೊಡನೆ ಹಂಚಿಕೊಳ್ಳುತ್ತ ಕಳೆದ ಕ್ಷಣಗಳನ್ನು ಅದೇನಾದರೂ ಪೋಣಿಸಲು ಬರುತ್ತಿದ್ದರೆ ಅದನ್ನೇ ಮಾಲೆಯಾಗಿಸಿ ನಿನಗೆ ಮೊದಲ ಉಡುಗೊರೆಯಾಗಿ ಕೊಡುತ್ತಿದ್ದೆ..


ಕೊಡಲು ಬಲ್ಲೆ ನಿನಗದೊಮ್ಮೆ ನನ್ನ ನಾನೇ ಉಡುಗೊರೆ

ನೀನು ಕೊಟ್ಟ ನೆನಪನದಕೆ ತೂಗಬಹುದೆ ಆದರೆ..


ಆ ದಿನ ಇನ್ನೂ ಹಸಿಹಸಿಯಾಗಿ ನೆನಪಿನಲ್ಲಿದೆ..ನಾನವತ್ತು ಹುಡುಗಿ ನೋಡುವ ಶಾಸ್ತ್ರಕ್ಕೆ ಅಂತ ನಿಮ್ಮ ಮನೆಗೆ ಮೊದಲ ಬಾರಿ ಬಂದಾಗ ಕಾರು ಪಾರ್ಕು ಮಾಡಲು ಮೂರು ಬಾರಿ ಹಿಂದೆ ಮುಂದೆ ರಿವರ್ಸು ಫಸ್ಟು ಅಂತ ಒದ್ದಾಡುತ್ತಿದ್ದರೆ ನೀನದನ್ನು ನಿಮ್ಮನೆಯ ಕಿಟಕಿಯಿಂದ ಕದ್ದು ನೋಡಿ ನಕ್ಕಿದ್ದೆ. ಬೆಪ್ಪನಂತೆ ಅನ್ನಿಸಿತ್ತು ನನಗೆ.. 'ಛೆ,ಎಂಥ ಫ್ಲಾಪ್ ಷೋ .. ಕಿಟಕಿಯಲ್ಲಿ ನೋಡಿದವಳು ನನ್ನ ಹುಡುಗಿ ಅಲ್ಲದಿದ್ದರೆ ಸಾಕು' ಅಂತ ಪ್ರಾರ್ಥಿಸುತ್ತ ಒಳಕ್ಕೆ ಬಂದಿದ್ದೆ. ಅದ್ಯಾವುದೋ ಗಳಿಗೆಯಲ್ಲಿ ನಿನ್ನನ್ನು ಬರಹೇಳಿದರಲ್ಲ ,ನೀನು ಹೊರ ಬಂದಾಗಿದ್ದ ಆ ಮುಗುಳ್ನಗೆ ನನ್ನನೆಷ್ಟು ಕೆಣಕಿದ್ದಿರಬೇಡ..ಕಿಟಕಿಯಲ್ಲಿ ನೋಡಿದ್ದು ಇನ್ಯಾರೋ ಅನ್ನುವವರಂತೆ ನಾನೂ ಫಸ್ಟ್ ಟೈಂ ನೋಡೋನಂತೆ ನಟಿಸಿದ್ದೆ.


ಆದ್ರೆ, ನಮ್ಮಿಬ್ಬರನ್ನೇ ಮಾತಿಗೆ ಬಿಟ್ಟಾಗ ನೀನು ಅದೇ ವಿಚಾರ ಇಟ್ಟುಕೊಂಡು ಶುರುಹಚ್ಚಬೇಕ? ನೀನು ಆಡಿದ್ದ ಮೊದಲ ಮಾತುಗಳು ಇನ್ನೂ ನೆನಪಿವೆ.. "ಗೇಟಿನ ಬಳಿ ಚೂರು ದಿಣ್ಣೆಯಿದೆ. ಮುಂದಿನಸಲ ನೋಡ್ಕೊಂಡು ಬನ್ನಿ".. ಹಾಗೆ ಹೇಳುತ್ತಿದ್ದವಳ ಮುಖ ನೆಲಕ್ಕೆ ನೇರ.. ಆದ್ರೆ ಕಣ್ಣುಗಳು ಕದ್ದು ನನ್ನುತ್ತರಕ್ಕೆ ಇಣುಕುವಂತಿದ್ದವು.. "ಮುಂದಿನ ಸಲ"... ಅಂದ್ರೆ ?.. ನನಗೆ ಗೊತ್ತು, ಅದನ್ನು ನಾನೇ ಅರ್ಥ ಮಾಡಿಕೋಬೇಕು ಅಂತ ನೀನು ಎಕ್ಸ್ಪೆಕ್ಟ್ ಮಾಡಿದ್ದೆ.. ಇನ್ನೇನಿದ್ರೂ ಒಪ್ಪಿಗೆ ಕೊಡುವ ಬಿಡುವ ಸರದಿ ನನ್ನದೇ.."ಮುಂದಿನ ಸಲ ಬರುವ ಮೊದಲು ನೀವದನ್ನು ಸರಿ ಮಾಡಿಸುತ್ತೀರಲ್ವ?" ನೀನು ಫಾಸ್ಟಾದರೆ ನಾನು ಡಬಲ್ ಫಾಸ್ಟು..


ನಿನ್ನ ಮಾತನೊಪ್ಪಿಕೊಂಡೆ ನನ್ನ ನಾನೆ ಮರೆತು

ಬೆರೆತು ಬಾಳುವಾಸೆ ಅಲ್ಲೇ ಚಿಗುರಿಕೊಂತು ಮೊಳೆತು..


ಆ ದಿವಸ ನಿನ್ನ ಮೊಬೈಲು ನಂಬರ್ರು ಚೀಟಿಯಲ್ಲಿ ಬರಕೊಟ್ಟಿದ್ದು ನೆನಪು..ವಾಪಸು ನಾ ಮನೆ ತಲುಪುವ ಮೊದಲೇ ಕಿಸೆಯೊಳಗೆ ಕಲರವ. "ತಲುಪಿದ್ರಾ?" ... unknown ನಂಬರ್ ನ ಮೆಸೇಜು. ನಿನ್ನದೇ..ಸಂಶಯವೇ ಇಲ್ಲ.. ಆದ್ರೆ ಏನಂತ ಹೆಸರು ಸ್ಟೋರ್ ಮಾಡಲಿ? ರಿಪ್ಲೈ ಅಂತೂ ಆಗಲೇ ಮಾಡಿದ್ದೆ , ಆದ್ರೆ ನಿನ್ನ ಹೆಸರನ್ನು ಸ್ಟೋರ್ ಮಾಡಲು ಆ ರಾತ್ರಿ ಎಷ್ಟು ಹೆಣಗಾಡಿದ್ದೆ ಗೊತ್ತ..


ನಮ್ಮ ಬಂಧಕಿನ್ನೂ ನಾನು ಹೆಸರ ಹುಡುಕೆ ಇಲ್ಲ

ಆಗಲೇನೆ ನಿನ್ನ ಹೆಸರ ಗುನುಗು ಕಾಡಿತಲ್ಲ!


ಈ ಒಂದೂವರೆ ತಿಂಗಳಿನಲ್ಲಿ ನಾನು ನೀನು ಈ ಮೊಬೈಲ್ ಎಂಬ ಪುಟ್ಟ ಪೋರನನ್ನ ಅದೆಷ್ಟು ಪೀಡಿಸಿದ್ದೇವಲ್ವ..ಅದೆಲ್ಲವನ್ನೂ ಮರೆತು ಆತ ನಮಗೆಂದೇ ಕಟ್ಟಿಕೊಟ್ಟ ಈ ಪುಟ್ಟ ಕನಸಿನೂರಿಗೆ ಏನನ್ನೋಣ? ಕೊಂಚ ಕೊಂಚವೇ ನಿನ್ನೆಡೆಗೆ ನಾನು ನನ್ನ ಲೋಕವನ್ನು ತೆರೆದಿಡುತ್ತಿದ್ದೆನಲ್ಲ, ಅವಾಗೆಲ್ಲ ನನಗೇ ಗೊತ್ತಿಲ್ಲದಂತೆ ನನ್ನಲ್ಲಾದ ಪುಳಕಕ್ಕೆ ಅಚ್ಚರಿಪಟ್ಟಿದ್ದೆ. ನಿಜ ಹೇಳಲಾ, ನಿನ್ನೊಡನೆ ಬಿಚ್ಚಿಟ್ಟ ನನ್ನವೇ ಆದ ಕನಸುಗಳಿವೆಯಲ್ಲ, ಅವನ್ನೆಲ್ಲ ನಾನು ನನ್ನ ಬೆಸ್ಟು ದೋಸ್ತುಗಳಲ್ಲೂ ಹಂಚಿಕೊಂಡಿರಲಿಲ್ಲ...ಹಂಚಿಕೊಂಡಿದ್ದರೂ ನಿನ್ನಿಂದ ಸಿಕ್ಕಷ್ಟು ಆಪ್ತ ಪ್ರತಿಸ್ಪಂದ ಸಿಗುತ್ತಿತ್ತೋ ನನಗಂತೂ ಸಂಶಯ.. ಕಮಿಟ್ಮೆಂಟ್ ಅನ್ನೋದು ಇಷ್ಟೊಂದು ಸುಂದರ ಅನುಭವವಾ? ಗೊತ್ತಿರಲಿಲ್ಲಪ್ಪ..


ಸ್ವರ್ಗದಲ್ಲಿ ಇಂಥ ದಿನಗಳೆಲ್ಲ ಸಿಗವು ಎಂದು

ನಿನ್ನ ಜೊತೆಗೆ ಕಳೆದ ಗಳಿಗೆ ಲೆಕ್ಕವಿಡುವೆ ಇಂದು


ನೀನು ನಿನ್ನ ಆಶಾಗೋಪುರವನ್ನು ನನಗಾಗಿ ತೆರೆಯುತ್ತ ಒಳಹೊಕ್ಕೆಯಲ್ಲ, ಅದೆಂಥ ಮಧುರಾನುಭೂತಿ ಗೊತ್ತ? ಇಷ್ಟು ಚನ್ನಾಗಿ ಕನಸು ಕಾಣೋದು ಅದೆಲ್ಲಿಂದ ಕಲಿತೆ? ನಿನ್ನೆಲ್ಲ ಪುಟ್ಟ ಪುಟ್ಟ ಬಯಕೆಗಳಲ್ಲು ನನಗೆ ಅಂತ ಒಂದಷ್ಟು ಜಾಗಗಳನ್ನು ಕಾದಿರಿಸಿದ್ದೀಯಲ್ಲ, ನನಗೆ ಚೂರು ಮೈನಡುಗೋದು ಆವಾಗಲೇ. ನಿನ್ನ ಕನಸುಗಳೆಲ್ಲ ನನಗೆ ಜವಾಬ್ದಾರಿಗಳು ಕಣೆ ಹುಡುಗಿ..ಆದ್ರೆ ಈ ಕನಸುಗಳ ಹಾದಿಯಲ್ಲಿ ನಿನ್ನೊಡನೆ ಗುನುಗುತ್ತ ಜೀಕುತ್ತ ಹೆಜ್ಜೆ ಹಾಕುವುದೇ ಒಂದು ಶರತ್ಸಂಭ್ರಮ..ಅದರ ನೆನಕೆಯೇ ಎಷ್ಟು ಖುಷಿ ಕೊಡುತ್ತಿದೆ ನೋಡು..


ನನ್ನ ಬಯಕೆಯೂರು ಹೇಗೆ ಸಿಂಗರಿಸಿದೆ ನೋಡು

ನಿನ್ನ ಒಲವ ತೇರಿನಿಂದ ಧನ್ಯವದರ ಬೀಡು..


ಇಷ್ಟೆಲ್ಲಾ ಬರೀ ಒಂದೂವರೆ ತಿಂಗಳಿನಲ್ಲ? ನನ್ನ ನಾನೇ ಚಿವುಟುತ್ತಿದ್ದೇನೆ. ಬಹುಶಃ ನಿನ್ನನ್ನು ಮತ್ತೊಮ್ಮೆ ಕಂಡ ಮೇಲೆಯೇ ಈ ಭಾವದಲೆಗೆ ತೃಪ್ತಿಯೇನೋ.. ಆ ದಿನಕ್ಕೆ ಎದುರು ನೋಡುತ್ತಿದ್ದೇನೆ..


ನೋಡು, ಮೊಬೈಲು ಪೋರ ಮತ್ತೆ ಗುನುಗುತ್ತ ಕುಣಿಯತೊಡಗಿದ್ದಾನೆ. ನಿನ್ನದೇ ಫೋನು, ಗೊತ್ತಿದೆ.. ಎತ್ತಿದ್ದೇ ಆದರೆ ಎಂದೂ ಕೇಳದಿದ್ದದ್ದನ್ನು ಇಂದು ಕೇಳಿಬಿಡುತ್ತೇನೆ ನೋಡು.. "ಛಿ, ಕಳ್ಳ" ಎಂದು ನಿನ್ನಿಂದ ಮುಕ್ಕಾಲು ಗಂಟೆ ಬೈಸಿಕೊಂಡರೂ ಸರಿಯೇ !..

ಅಂದ ಹಾಗೆ ಈ ಕಾಲ್ ಬರುತ್ತಿರುವುದು unknown ನಂಬರಿನಿಂದ. ನಿನ್ನ ಹೆಸರನ್ನಿನ್ನೂ ಈ ಪೋರನಿಗೆ ನಾನು ಹೇಳಿಲ್ಲ ಅಂತ ಬೇರೆ ಹೇಳಬೇಕಾಗಿಲ್ಲ ತಾನೇ..


ಮುಂದಿನ ಶನಿವಾರ.. ನಿನ್ನ ಕೈಯಲ್ಲೇ ಕೊಡುತ್ತೇನೆ..ಅದೇನಾದರೂ ಬರೆದುಕೋ..ನಿನ್ನ ಹೆಸರ ಪಡೆದ ಧನ್ಯತೆಯಲ್ಲಿ ಆತನೂ ನಿದ್ದೆಗೆ ಜಾರುತ್ತಾನೆ..ಆಮೇಲೆ ಅಲ್ಲಿ ನಾವಿಬ್ಬರೇ..ನಾವು ಸೋಲುತ್ತೀವಾ , ಮಾತು ಸೋಲುತ್ತಾ ನೋಡೇ ಬಿಡೋಣ..


ಇಂತಿ ನಿನ್ನ

ರಾಜ್ಕುಮಾರ.

3 comments:

ಸೀತಾರಾಮ. ಕೆ. / SITARAM.K said...

ಅದ್ಭುತವಾದ ರೋಮಾ೦ಛಕಾರಿ ಪ್ರೇಮ ಪತ್ರ೧ ತಮ್ಮ ಬರಹವೈಖರಿಗೆ ಟೋಪಿ ತೆಗೆದೆ!!!!
simpleeeeeeeee superrrrrrrrrrrrrrrr

Unknown said...

ಎಲ್ಲಿದ್ದೀರಾ ವಿನಾಯಕ್
ಪತ್ತೇನೇ ಇಲ್ಲ ಸುಮಾರು ತಿಂಗಳಿಂದ ?

Anonymous said...

very nice one sir..

Thanks a lot for such memorable life events article which happens in each ones life:)