Sunday, April 4, 2010

ಒಲವಿನೋಲೆ -೧ ನಿನ್ನಂದ ನೋಡಲೆಂದೇ ಚಂದಿರ ಬಂದಿಹನು!

ಎದೆಚಿಲುಮೆಗಳ ಸಾಕಾರರೂಪಿಣಿ,
ಸಾಗರದ ಅಲೆಗಳು ಅನಾದಿಯಿಂದ ಅವೆಷ್ಟೋ ಕಾಲದ ವರೆಗೆ ಹೀಗೆ ಪುಟಿಯುತ್ತಲೇ ಇರುತ್ತವಂತೆ. ಅದು ಬಿಟ್ಟರೆ next ಇರುವುದು ನಿನ್ನಂದವೇನಾ ? ನಿನ್ನ ಸೆಕೆಂಡ್ ಟೈಮ್ ನೋಡಿದಾಗ ನನಗನ್ನಿಸಿದ್ದು ಇದೇನೇ. ಫಸ್ಟ್ ಟೈಮ್ ನೋಡಿದಾಗ ಏನನ್ನಿಸಿತ್ತು ಅಂತ ಕೇಳೋದೇ ಬೇಡ! ಅವತ್ತು ನನಗೆ ಅನ್ನಿಸೋದು ಬಿಟ್ಟು ಬೆರಗಿನಲ್ಲಿ ಕಲ್ಲಾಗದ್ದು ಪುಣ್ಯ! ಕಾಲೇಜು ಪಾರ್ಕಿಂಗ್ ನ ಮೂಲೆಯಲ್ಲಿ ಜಾಗರೂಕತೆಯಿಂದ kinetic ನ ಸ್ಟ್ಯಾಂಡ್ ಅನ್ನು ನೇರ್ಪಡಿಸಿ ಪುಟ್ಟದೊಂದು handbag ನ್ನು ಆ ಬಿದಿರೆಲೆಯ ತೋಳುಗಳಲ್ಲಿ ಜೋತಾಡಿಸಿ ಮೆಲ್ಲಗೆ ಮೇನ್ ಎಂಟ್ರನ್ಸ್ ಕಡೆಗೆ ನೀನು ಹೆಜ್ಜೆಯಿಟ್ಟೆ ಎಂದರೆ ಅದು ಆಗಷ್ಟೇ ಹೊರಬಂದ ಜಯಂತ ಕಾಯ್ಕಿಣಿಯವರ ಕವನ! ಅದೆಷ್ಟು ಪಡ್ಡೆ ಹುಡುಗರ ಕಣ್ಣನ್ನು ಒಂದೇ ಏಟಿಗೆ ನಿಬ್ಬೆರಗು ಗೊಳಿಸಿರಲಿಕ್ಕಿಲ್ಲ ನೀನು!. ಸಾಕು ಅಂತ ಯಾವನಾದರೂ ಒಬ್ಬ ನೀನು ಎದುರಿಗಿದ್ದಾಗಲೇ ಆಚೆ ಹೋಗಿದ್ದಿದರೆ ಕೇಳು!
ಲೆಕ್ಕವಿಲ್ಲದಷ್ಟು ಇಂಟರ್ನಲ್ ಗಳು ನಿನ್ನ ನೆನಪುಗಳಿಂದಾಗಿ ಎಕ್ಕುಟ್ಟಿ ಹೋಗಿವೆ ಕಣೆ. ಇದು ನನ್ನದೊಬ್ಬನದೆ ಕಥೆಯಾಗಿರುತ್ತಿದ್ದರೆ ನಾನು ಡಬಲ್ ಹ್ಯಾಪಿಯಾಗಿರುತ್ತಿದ್ದೆ . ಆದರೆ ಇದು ಕಾಲೇಜ್ ಹಾಸ್ಟೆಲ್ ನ ರೂಮು ರೂಮಿನ ಮಂದಿ ಮಂದಿಯ ಕಥೆ! ಎಷ್ಟು ನಿಷ್ಕರುಣಿ ಅಲ್ವ ನೀನು, ನಿದ್ದೆಗೆಡಿಸುವುದೆಂದರೆ ನಿನಗೆ ಅಷ್ತಿಷ್ಟವೇನೆ?
ಮೊನ್ನೆ ನೀನು ಸೈಬರ್ ನಲ್ಲಿ ಕುಳಿತಿದ್ದೆಯಲ್ಲ, ಅಲ್ಲಿ ಕದ್ದು ಇಣುಕಿ ನಿನ್ನ ಆರ್ಕುಟ್ ಪ್ರೊಫೈಲ್ ಕಂಡುಕೊಂಡಿದ್ದೇನೆ.ಅಯ್ಯಪ್ಪ! ಅದೆಷ್ಟು ಫ್ಯಾನುಗಳು , ಅದೆಷ್ಟು testimonial ಗಳು ! ಹೌಸೆಫುಲ್ candidate ಕಣೆ ನೀನು. ಹೂಗಳು ಹೀಗಿರುತ್ತವೆ , ಎಲ್ಲೆಲ್ಲಿಂದಲೋ ದುಂಬಿಗಳನ್ನು ಸೆಳೆಸೆಳೆದು ಬಿಡುತ್ತವೆ ಅನ್ನೋದು ಕೇಳಿದ್ದೆ.. ಆದ್ರೆ ಮನುಷ್ಯ ಜಾತಿಯಲ್ಲಿ ಇದರ personifaction ಇಷ್ಟು ಬೇಗನೆ ನೋಡುತ್ತೇನೆ ಅಂದುಕೊಂಡಿರಲಿಲ್ಲ..
ಸುಮ್ಮನೆ ಒಂದು ಸ್ಕ್ರಾಪ್ ಬರೆದು ಬಿಡಲಾ ಅಂತ ಒಂದು ಕೈ ಟ್ರೈ ಮಾಡಿದ್ದೆ ನಾನವತ್ತು! ಆದ್ರೆ ಮರುದಿನ ಕಾಲೇಜಿನಲ್ಲಿ ನೀನು ಇದ್ಯಾವುದರ ಅರಿವೇ ಇಲ್ಲದಂತೆ ಕ್ಲಾಸ್ರೂಮಿನೊಳಗೆ ಹೆಜ್ಜೆಯಿಟ್ಟೆಯಲ್ಲ , ನನ್ನ ಕಣ್ಣುಗಳು ಅದೆಷ್ಟು ಹೊತ್ತು ನಿನ್ನನ್ನು ದಿಟ್ಟಿಸಿದ್ದವು ಗೊತ್ತಾ ?
ನನ್ನ ಹೆಸರು ಕೂಡ ಗೊತಿಲ್ಲವಲ್ಲೇ ನಿನಗೆ, ಅಷ್ಟಾದ್ರೂ ಗೊತ್ತಿದ್ದರೆ ಅದೇ ನನ್ನ ಲೈಫಿನ ದೊಡ್ಡ achievement ಅನ್ನುವಂತೆ ಕುಣಿದಾಡುತ್ತಿದ್ದೆ. ಇರಲಿ ಬಿಡು! ನಿನ್ನದೇನಿದೆ ಇದ್ರಲ್ಲಿ ತಪ್ಪು.. ನಪ್ಪೇನಿದ್ದರು ಆ ನಿನ್ನ ಸುಳಿ ಮುಂಗುರುಳಿನದು !. playground ನ ಬದಿಯಲ್ಲಿ ಅದ್ಯಾಕಾದ್ರು ಕಿಟಕಿಗಳನ್ನು ಇಟ್ಟಿರುತ್ತಾರೋ .. ಇನ್ನು ಆ ಕಿಟಕಿಯ ಬದಿಯಲ್ಲಿ ನಿನ್ನಂಥ ಮಾಟಗಾತಿ ಕೂತಿದ್ದೆ ಆದ್ರೆ ಆ ಗಾಳಿ ನಿನ್ನ ಮುಂಗುರುಳಿನ ಜೊತೆ ಆಡಿದ್ದ ಆಟಗಳನ್ನು ಯಾರಾದ್ರು ನೋಡದಿರಲಾಗುತ್ತದೇನೆ ? ಮತ್ತೆ ಆ ಡುಪಟ್ಟಗಳ ನಖರಾಗಳ ಬಗ್ಗೆ ನಾನು ಹೇಳ ಹೊರಡಲ್ಲ ಕಣೆ. ಬಣ್ಣಗಳೆಲ್ಲ ನಿನಗೊಸ್ಕರವೇ ಹುಟ್ಟಿ ಬಂದಿದ್ದೇನೋ ಅಂತ ನಿನ್ನ ಡುಪಟ್ಟಗಳನ್ನು ನೋಡಿದಾಗ ಅನ್ನಿಸಿದ್ದು ಸುಳ್ಳಲ್ಲ.
ಕ್ಲಾಸಲ್ಲಿ ನೀನು ಮಾತಾಡಲ್ಲ.. ಸದ್ಯ! ನಾನು ಪೂರ್ತಿ ಎಕ್ಕುಟ್ಟಿ ಹೋಗಲು ಅದೊಂದು ಬಾಕಿಯಿತ್ತು.
ಇಷ್ಟೆಲ್ಲಾ ನಾ ಹೇಳಿದ್ದು ನಿನಗೆಲ್ಲಿ ಕೇಳಿಸಬೇಕು ಹೇಳು! ಸುಮ್ಮನೊಮ್ಮೆ ಇಲ್ಲಿ ಗೀಚೋಣ ಅಂತ ಗೀಚಿಡುತ್ತಿದ್ದೀನಷ್ಟೇ . ಅದ್ಯಾವುದೋ ಪುಣ್ಯಗಳಿಂದ ನೀನು ಯಾವಾಗಲಾದರೂ ಒಮ್ಮೆ ಮಾತಾಡಿಸಿದ್ದೆ ಆದ್ರೆ ಈ ಲಿಂಕ್ ಆವಾಗ ನಿನಗೆ share ಮಾಡುತ್ತೇನೆ.. ಆಯ್ತಾ? ಇಷ್ಟಕ್ಕೆ ನಿಲ್ಲಿಸುತ್ತೇನೆ.. ನೀ ಸಿಗೋ ವರೆಗೂ ನನ್ನ ದಾರಿ ನಾ ನೋಡಿಕೊಬೇಕಲ್ಲ? :-)
- ಇಂತಿ ನಿನ್ನವ

No comments: