Tuesday, April 20, 2010

ಮಲೆಗಳಲಿಲ್ಲ ಮದುಮಗಳು!

ಮಲೆನಾಡಂಚಿನ ಮೆದುವಿಳೆಯಲ್ಲಿ ಮಲರೆಲೆ ಮೆಲ್ಲನೆ ಮುದುಡುತಿದೆ

ಮುನಿಸುರಗದ ಮಡು ಮರಣ ಮೃದಂಗದಿ ಮನುಜರ ಮುಡಿಗೆಡವಿಕ್ಕುತಿದೆ


ಮಾವೋ ಮಹಿಪನ ಮಾತಿಗೆ ಮೈಮರೆತೆದ್ದಿಹ ಮಲೆಮಕ್ಕಳ ಮರುಳು

ಮಲೆಮರಗಳ ಮಧುವತ್ತರ ಮಡಿ ಮೈನೆತ್ತರ ಮೊತ್ತದೆ ಮೆತ್ತಿಹುದು..


ಮುಂದಾಲೋಚನೆ ಮರೆತಿಹ ಮೆದುಳಲಿ ಮದದಾಲಾಪವ ಮಸೆವವಗೆ

ಮಾನಿನಿ-ಮಗು-ಮುತ್ತೈದೆ-ಮುದುಕನೇನ್ ಮಸಣದ ಮಂಚವೆ ಮಂದಲಿಗೆ


ಮದ್ದುಗುಂಡಿನಲೆ ಮಾತಿಗುತ್ತರವ ಮರಳಿಸೊ ಮಾರಿಯ ಮಕ್ಕಳಿಗೆ

ಮಲೆ-ಮನೆ-ಮನ ಮಮತೆಯ ಮರೆವಾಗಿದೆ ಮೃತ್ಯುಮಾನುಷದ ಮೈಯೊಳಗೆ..


ಮಾತೆಯ ಮಮತೆಯ ಮಡಿಲಿನ ಮಗುವಿಗು ಮೈವೆತ್ತುತಲೇ ಮೈನಡುಗು

ಮಲೆನಾಡಿನ ಮಾಂಕವಿಗಳೆ ಮನ್ನಿಸಿ, ಮಲೆಗಳಲಿಲ್ಲ ಮದುಮಗಳು!


-ವಿನಾಯಕ ಕುರುವೇರಿ

No comments: